ಅಪರಾಧ ಸುದ್ದಿ

ಕಸ್ಟಮರ್ ಮನೆಯಲ್ಲಿ 25 ಲಕ್ಷ ರು. ಮೌಲ್ಯದ ಚಿನ್ನ ಕದ್ದು ಸಿಕ್ಕಿಬಿದ್ದ ಕ್ಯಾಬ್ ಚಾಲಕ

Share It

ಬೆಂಗಳೂರು: ಕಸ್ಟಮರ್ ಮನೆಯಲ್ಲಿ ಸುಮಾರು 25 ಲಕ್ಷ ರು. ಮೌಲ್ಯದ ಚಿನ್ನಾಭರಣವನ್ನು ಕದ್ದು ಪರಾರಿಯಾಗಿದ್ದ ಕ್ಯಾಬ್ ಚಾಲಕನನ್ನು ಹೆಬ್ಬಾಳ ಪೊಲೀಸರು ಬಂಧಿಸಿದ್ದಾರೆ.

ಅಬ್ದುಲ್ ರೆಹಮಾನ್ ಬಂಧಿತ ಕ್ಯಾಬ್ ಚಾಲಕ. ಹೆಬ್ಬಾಳದಲ್ಲಿ ವಾಸವಿದ್ದ ದಂಪತಿ ಶಾಪಿಂಗ್ ಸಲುವಾಗಿ ಮುಂಬೈಗೆ ಪ್ರಯಾಣ ಬೆಳೆಸಿದ್ದು, ಅದಕ್ಕಾಗಿ ಚಾಲಕ ಅಬ್ದುಲ್ ರೆಹಮಾನ್ ಓಡಿಸುವ ಕ್ಯಾಬ್ ಬುಕ್ ಮಾಡಿದ್ದರು ಎನ್ನಲಾಗಿದೆ.

ಕ್ಯಾಬ್‌ನಲ್ಲಿ ಪ್ರಯಾಣ ಮಾಡುವ ವೇಳೆ ಮನೆಯಲ್ಲಿ 25 ಲಕ್ಷ ರು. ಬೆಲೆಬಾಳುವ ಚಿನ್ನಾಭರಣವಿರುವ ಬಗ್ಗೆ ಹಾಗೂ ಅದನ್ನೆಲ್ಲ ಲಾಕ್ ಮಾಡಿಟ್ಟಿರುವ ಕುರಿತು ತಮ್ಮತಮ್ಮಲ್ಲಿಯೇ ಮಾತನಾಡಿಕೊಂಡಿದ್ದರು. ಈ ವೇಳೆ ತಾವು ವಾಪಸ್ ಬರುವುದು ಮೂರು ದಿನಗಳಾಗಲಿದೆ ಎಂಬುದನ್ನು ಬಾಯ್ಬಿಟ್ಟಿದ್ದರು.

ಇದನ್ನೆಲ್ಲ ಸೂಕ್ಷ್ಮವಾಗಿ ಕೇಳಿಸಿಕೊಂಡಿದ್ದ ಅಬ್ದುಲ್ ರೆಹಮಾನ್, ವಾಪಸ್ ಬಂದವನೇ ಅವರ ಮನೆಗೆ ಕನ್ನ ಹಾಕಿ, 25 ಲಕ್ಷ ಮೌಲ್ಯದ ಚಿನ್ನಾಭರಣವನ್ನು ಕದ್ದು ಪರಾರಿಯಾಗಿದ್ದನು. ವಾಪಸ್ ಬಂದ ದಂಪತಿ ದರೋಡೆ ನಡೆದಿರುವುದನ್ನು ಗಮನಿಸಿ ಪೊಲೀಸರರಿಗೆ ದೂರು ನೀಡಿದ್ದರು.

ವಿಚಾರಣೆ ವೇಳೆ ತಾವು ಕ್ಯಾಬ್‌ನಲ್ಲಿ ಕುಳಿತು ಈ ಮಾಹಿತಿಯ ಬಗ್ಗೆ ಮಾತನಾಡಿಕೊಂಡಿದ್ದನ್ನು ಪೊಲೀಸರಿಗೆ ತಿಳಿಸಿದ್ದರು. ಈ ಹಿನ್ನೆಲೆಯಲ್ಲಿ ಪೊಲೀಸರು ಕ್ಯಾಬ್ ಚಾಲಕನ ಮೇಲೆ ಕಣ್ಣಿಟ್ಟು ತನಿಖೆ ಆರಂಭಿಸಿದಾಗ, ಕ್ಯಾಬ್ ಚಾಲಕನೇ ದರೋಡೆ ಮಾಡಿರುವುದು ಪತ್ತೆಯಾಗಿದ್ದು, ಆತನನ್ನು ಬಂಧಿಸಿ, ಚಿನ್ನಾಭರಣವನ್ನು ವಶಪಡಿಸಿಕೊಂಡಿದ್ದಾರೆ.


Share It

You cannot copy content of this page