ಉಪಯುಕ್ತ ಸುದ್ದಿ

CET-2026 ವೇಳಾಪಟ್ಟಿ ಘೋಷಣೆ: ಏಪ್ರಿಲ್‌ನಲ್ಲಿ ಪರೀಕ್ಷೆ, ವಿದ್ಯಾರ್ಥಿಗಳ ಮಾರ್ಗದರ್ಶನಕ್ಕೆ ವಿಶೇಷ ದಿಕ್ಸೂಚಿ ಬಿಡುಗಡೆ

Share It

ಬೆಂಗಳೂರು: ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) 2026ನೇ ಸಾಲಿನ ಸಾಮಾನ್ಯ ಪ್ರವೇಶ ಪರೀಕ್ಷೆ (CET) ದಿನಾಂಕಗಳನ್ನು ಪ್ರಕಟಿಸಿದೆ. ಸಿಇಟಿ ಪರೀಕ್ಷೆಗಳು ಏಪ್ರಿಲ್ 23 ಮತ್ತು 24ರಂದು ನಡೆಯಲಿದ್ದು, ಜನವರಿ 17ರಿಂದ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಆರಂಭವಾಗಲಿದೆ ಎಂದು ತಿಳಿಸಲಾಗಿದೆ.

ವಿದ್ಯಾರ್ಥಿಗಳಿಗೆ ಪ್ರವೇಶಾತಿ ಪ್ರಕ್ರಿಯೆಯ ಬಗ್ಗೆ ಸ್ಪಷ್ಟ ಮಾರ್ಗದರ್ಶನ ನೀಡುವ ಉದ್ದೇಶದಿಂದ ‘ಸಿಇಟಿ ದಿಕ್ಸೂಚಿ’ ಎಂಬ ಮಾಹಿತಿ ಕಿರುಹೊತ್ತಿಗೆಯನ್ನು KEA ಬಿಡುಗಡೆ ಮಾಡಿದೆ. ಈ ಬಿಡುಗಡೆ ಕಾರ್ಯಕ್ರಮ ಮಲ್ಲೇಶ್ವರಂನಲ್ಲಿರುವ KEA ಕಚೇರಿಯಲ್ಲಿ ನಡೆಯಿತು. ಸಮಾರಂಭದಲ್ಲಿ ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ. ಸುಧಾಕರ್, ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣ ಪ್ರಕಾಶ್ ಪಾಟೀಲ ಉಪಸ್ಥಿತರಿದ್ದರು. KEA ಕಾರ್ಯನಿರ್ವಾಹಕ ನಿರ್ದೇಶಕ ಪ್ರಸನ್ನ ಹಾಗೂ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.

ಈ ಸಂದರ್ಭ ಮಾತನಾಡಿದ ಡಾ. ಎಂ.ಸಿ. ಸುಧಾಕರ್, ಸಿಇಟಿ ದಿಕ್ಸೂಚಿ ಕಿರುಹೊತ್ತಿಗೆ ವಿದ್ಯಾರ್ಥಿಗಳಿಗೆ ಅರ್ಜಿ ಸಲ್ಲಿಕೆ, ಪರೀಕ್ಷೆ ಮತ್ತು ಕೌನ್ಸಿಲಿಂಗ್ ಹಂತಗಳ ಬಗ್ಗೆ ಸರಿಯಾದ ಮಾಹಿತಿ ನೀಡಲಿದೆ ಎಂದು ಹೇಳಿದರು. ವಿಶೇಷವಾಗಿ ಗ್ರಾಮೀಣ ಹಿನ್ನೆಲೆಯ ವಿದ್ಯಾರ್ಥಿಗಳಲ್ಲಿ ಕಂಡುಬರುವ ಗೊಂದಲಗಳನ್ನು ನಿವಾರಿಸಲು ಈ ದಿಕ್ಸೂಚಿ ಸಹಾಯಕವಾಗಲಿದೆ ಎಂದರು.

ಇದೇ ವೇಳೆ KEA ಕಚೇರಿಯ ಆಧುನೀಕರಣ ಮತ್ತು ನವೀಕರಿಸಿದ ಸಭಾಂಗಣಗಳ ಉದ್ಘಾಟನೆಯೂ ನಡೆಯಿತು. “ಸಾಮಾಜಿಕ ಜಾಲತಾಣಗಳು ಹಾಗೂ ಚಾಟ್‌ಬಾಟ್‌ಗಳ ಮೂಲಕ ಮಾಹಿತಿ ನೀಡಲಾಗುತ್ತಿತ್ತು. ಆದರೂ ಕೌನ್ಸಿಲಿಂಗ್ ಹಂತದಲ್ಲಿ ಕೆಲ ವಿದ್ಯಾರ್ಥಿಗಳು ತಪ್ಪು ಮಾಡುತ್ತಿದ್ದರು. ಅದನ್ನು ತಪ್ಪಿಸಲು 3.75 ಲಕ್ಷ ದಿಕ್ಸೂಚಿ ಪ್ರತಿಗಳನ್ನು ಮುದ್ರಿಸಿ ವಿದ್ಯಾರ್ಥಿಗಳಿಗೆ ವಿತರಿಸಲಾಗುತ್ತದೆ” ಎಂದು ಸಚಿವರು ತಿಳಿಸಿದರು.

2026ರ ಸಿಇಟಿ ಪರೀಕ್ಷೆಗಳು ಏಪ್ರಿಲ್ 23 ಮತ್ತು 24ರಂದು ನಡೆಯಲಿದ್ದು, ಹೊರನಾಡು ಮತ್ತು ಗಡಿನಾಡು ಕನ್ನಡಿಗ ವಿದ್ಯಾರ್ಥಿಗಳಿಗಾಗಿ ಏಪ್ರಿಲ್ 22ರಂದು ಕನ್ನಡ ಭಾಷಾ ಪರೀಕ್ಷೆ ನಡೆಸಲಾಗುತ್ತದೆ ಎಂದು ಮಾಹಿತಿ ನೀಡಲಾಯಿತು.

ಇತರೆ KEA ಪರೀಕ್ಷೆಗಳ ವೇಳಾಪಟ್ಟಿ ಪ್ರಕಟ
ಇದೇ ಸಂದರ್ಭದಲ್ಲಿ KEA ನಡೆಸಲಿರುವ ವಿವಿಧ ಪರೀಕ್ಷೆಗಳ ದಿನಾಂಕಗಳನ್ನೂ ಘೋಷಿಸಲಾಯಿತು. KRIES ಆರನೇ ತರಗತಿ ಪ್ರವೇಶ ಪರೀಕ್ಷೆ ಮಾರ್ಚ್ 1ರಂದು, MBA ಮತ್ತು MCA ಪಿಜಿಸಿಇಟಿ ಮೇ 14ರಂದು ನಡೆಯಲಿದೆ. M.E/M.Tech ಪಿಜಿಸಿಇಟಿ ಹಾಗೂ ಲ್ಯಾಟರಲ್ ಎಂಟ್ರಿ ಇಂಜಿನಿಯರಿಂಗ್ ಕೋರ್ಸ್‌ಗೆ ಸಂಬಂಧಿಸಿದ DCET ಮೇ 23ರಂದು ನಡೆಯಲಿದೆ. MSc ನರ್ಸಿಂಗ್, MPT ಮತ್ತು MSc AHS ಪರೀಕ್ಷೆಗಳು ಜುಲೈ 18ರಂದು, KSET ಅಕ್ಟೋಬರ್ 11ರಂದು ಹಾಗೂ M-Pharma ಪರೀಕ್ಷೆ ನವೆಂಬರ್ 21ರಂದು ನಡೆಯಲಿದೆ.

ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣ ಪ್ರಕಾಶ್ ಪಾಟೀಲ ಮಾತನಾಡಿ, KEA ವಿವಿಧ ಪ್ರವೇಶ ಮತ್ತು ನೇಮಕಾತಿ ಪರೀಕ್ಷೆಗಳನ್ನು ಪಾರದರ್ಶಕವಾಗಿ ನಡೆಸುತ್ತಿದೆ ಎಂದು ಹೇಳಿದರು. “ಸರ್ಕಾರದ ವಿವಿಧ ಇಲಾಖೆಗಳ ನೇಮಕಾತಿ ಪರೀಕ್ಷೆಗಳನ್ನೂ KEA ನಿಷ್ಠೆಯಿಂದ ಆಯೋಜಿಸುತ್ತಿದೆ. ಸಿಇಟಿ ಕೌನ್ಸಿಲಿಂಗ್ ಪ್ರಕ್ರಿಯೆಯೂ ಸ್ಪಷ್ಟ ಹಾಗೂ ಗೊಂದಲರಹಿತವಾಗಿದ್ದು, ಸರ್ಕಾರ ಅಧಿಕಾರಕ್ಕೆ ಬಂದ ನಂತರ ಯಾವುದೇ ಸಮಸ್ಯೆಗಳು ಎದುರಾಗಿಲ್ಲ” ಎಂದು ಅವರು ಹೇಳಿದರು. ಸಿಇಟಿ ಸೇರಿದಂತೆ ಎಲ್ಲ ಪ್ರವೇಶ ಪರೀಕ್ಷೆಗಳ ಪ್ರಕ್ರಿಯೆಯನ್ನು ಇನ್ನಷ್ಟು ಸುಧಾರಿಸುವ ನಿಟ್ಟಿನಲ್ಲಿ ಸರ್ಕಾರ ಮತ್ತು KEA ನಿರಂತರವಾಗಿ ಕಾರ್ಯನಿರ್ವಹಿಸುತ್ತಿವೆ ಎಂದು ಅವರು ತಿಳಿಸಿದರು.


Share It

You cannot copy content of this page