ಬೆಂಗಳೂರು: ದರ್ಶನ್ ಮತ್ತು ಗ್ಯಾಂಗ್ ನಿಂದ ಹತ್ಯೆಯಾಗಿರುವ ರೇಣುಕಾ ಸ್ವಾಮಿ ಪೋಷಕರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ತಮ್ಮ ಗೋಳು ತೋಡಿಕೊಂಡರು.
ನಮ್ಮ ಮಗ ಏನಾದರೂ ತಪ್ಪು ಮಾಡಿದ್ದರೆ, ಕರೆದು ಬುದ್ದಿ ಹೇಳಬಹುದಿತ್ತು. ಅಥವಾ ಪೊಲೀಸರಿಗೆ ತಿಳಿಸಿದ್ದರೆ ಅವರೇ ಬುದ್ದಿ ಕಲಿಸುತ್ತಿದ್ದರು. ಆದರೆ, ಅವನನ್ನು ಬರ್ಬರವಾಗಿ ಕೊಲೆ ಮಾಡಲಾಗಿದೆ. ನಮ್ಮ ಮಗನ ಸಾವಿನ ವಿಚಾರದಲ್ಲಿ ಪೊಲೀಸರು ತೆಗೆದುಕೊಂಡಿರುವ ಎಲ್ಲ ಕ್ರಮಗಳು ನಮಗೆ ತೃಪ್ತಿ ತಂದಿವೆ ಎಂದು ಸಮಾಧಾನ ವ್ಯಕ್ತಪಡಿಸಿದರು.
ಈ ನಡುವೆ ತಮ್ಮ ಕುಟುಂಬ ಮತ್ತು ಸೊಸೆ ಹಾಗೂ ಮೊಮ್ಮಗುವಿನ ಮುಂದಿನ ಭವಿಷ್ಯವನ್ನು ನೆನೆದು ಕಣ್ಣೀರಿಟ್ಟ ಪೋಷಕರು, ಆಕೆಗೆ ಒಂದು ಸರಕಾರಿ ಉದ್ಯೋಗ ಕೊಡಿಸುವಂತೆ ಮುಖ್ಯಮಂತ್ರಿಗಳಿಗೆ ಮನವಿ ಮಾಡಿಕೊಂಡರು. ಸಿಎಂ ಸಿದ್ದರಾಮಯ್ಯ ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಉದ್ಯೋಗ ನೀಡುವ ಭರವಸೆ ನೀಡಿದರು ಎನ್ನಲಾಗಿದೆ.
ಈ ವೇಳೆ ಕೃಷಿ ಸಚಿವ ಚೆಲುವರಾಯಸ್ವಾಮಿ, ಮಾಜಿ ಸಚಿವ ಎಚ್.ಆಂಜನೇಯ ಹಾಗೂ ಇನ್ನಿತರ ಕೆಲವು ನಾಯಕರು ಇದ್ದರು.

