ದಾವಣಗೆರೆ : ಸಿಸೇರಿಯನ್ ಮಾಡಿ ಮಗುವನ್ನು ಹೊರತೆಗೆಯುವ ವೇಳೆ ವೈದ್ಯರು ಮಾಡಿದ ಯಡವಟ್ಟಿನಿಂದ ನವಜಾತ ಶಿಶುವೊಂದು ಸಾವನ್ನಪ್ಪಿರುವ ಘಟನೆ ದಾವಣಗೆರೆಯಲ್ಲಿ ನಡೆದಿದೆ.
ದಾವಣಗೆರೆಯ ಚಿಟಗೇರಿ ಹೆರಿಗೆ ಆಸ್ಪತ್ರೆಯಲ್ಲಿ ಅರ್ಜುನ್ ಮತ್ತು ಅಮೃತಾ ದಂಪತಿಗಳು ಹೆರಿಗೆಗೆಂದು ಬಂದಿದ್ದರು. ಈ ವೇಳೆ ವೈದ್ಯರು, ಸಿಸೇರಿಯನ್ ಮಾಡಬೇಕು ಎಂದಿದ್ದರು. ಒಪ್ಪಿ ಹೆರಿಗೆ ಮಾಡಿಸಿದ ನಂತರ ಮಗುವಿನ ರೆಕ್ಟಂ(ಗುದದ್ವಾರ)ಕ್ಕೆ ಕತ್ತರಿ ತಗುಲಿ ರಕ್ತಸ್ರಾವವಾಗಿ ಮಗು ಸಾವನ್ನಪ್ಪಿದೆ.
ರೆಕ್ಟಂ ಕುಯ್ದು ಅದಕ್ಕೆ ಹೊಲಿಗೆ ಹಾಕಿಸಿಕೊಂಡು ಬನ್ನಿ ಎಂದು ಖಾಸಗಿ ಆಸ್ಪತ್ರೆಗೆ ಕಳುಹಿಸಿದ್ದರು. ಅಲ್ಲಿ ಹೋದಾಗಲೇ ನಮಗೆ ಗೊತ್ತಾಗಿದ್ದು, ಮಗುವಿನ ಗುದದ್ವಾರದ ನರ ಕಟ್ ಆಗಿದೆ ಎಂಬುದು. ಅದನ್ನು ಮುಚ್ಚಿಟ್ಟು ವೈದ್ಯರು ನಮ್ಮ ಮಗುವಿನ ಸಾವಿಗೆ ಕಾರಣವಾಗಿದ್ದಾರೆ ಎಂದು ಪೋಷಕರು ಆಕ್ರೋಶ ವ್ಯಕ್ತಪಡಿಸಿದರು.
ಪೋಷಕರು ಮತ್ತು ಸಂಬಂಧಿಕರೆಲ್ಲ ಸೇರಿ ವೈದ್ಯರ ವಿರುದ್ಧ ದೂರು ನೀಡಲು ಸಜ್ಜಾಗಿದ್ದು, ಆಸ್ಪತ್ರೆ ಮುಂದೆ ಪ್ರತಿಭಟನೆ ನಡೆಸಿದರು. ಸ್ಥಳಕ್ಕೆ ಆಗಮಿಸಿದ ಜಿಲ್ಲಾಸ್ಪತ್ರೆ ಡಿಎಸ್ ಡಾ. ನಾಗೇಂದ್ರಪ್ಪ ಅವರು, ವೈದ್ಯರ ವಿರುದ್ಧ ಕ್ರಮ ತೆಗೆದುಕೊಳ್ಳುವ ಭರವಸೆ ನೀಡಿದರು.

