ಬೆಂಗಳೂರು: ಮಂಡ್ಯದಲ್ಲಿ ಕೇಂದ್ರ ಸಚಿವ ಎಚ್,ಡಿ.ಕುಮಾರಸ್ವಾಮಿ ನಡೆಸುತ್ತಿರುವ ಜನತಾ ದರ್ಶನ ಕಾರ್ಯಕ್ರಮಕ್ಕೆ ರಾಜ್ಯ ಸರಕಾರದ ಯಾವ ಅಧಿಕಾರಿಗೂ ತೆರಳಬಾರದು ಎಂದು ಸುತ್ತೋಲೆ ಹೊರಡಿಸಿದ್ದಾರೆ ಎಂದು ಎಚ್‌ಡಿಕೆ ಆರೋಪಿಸಿದ್ದಾರೆ.
ಇದು ನನ್ನ ಮನೆಯ ಕಾರ್ಯಕ್ರಮವಲ್ಲ, ನಾನು ಸಾರ್ವಜನಿಕ ಹಿತದೃಷ್ಟಿಯಿಂದ ನಡೆಸುತ್ತಿರುವ ಕಾರ್ಯಕ್ರಮವಾಗಿದ್ದು, ರಾಜ್ಯ ಸರಕಾರ ಸಣ್ಣತನ ತೋರುತ್ತಿದೆ. ಜಿಲ್ಲೆಯ ಯಾವ ಅಧಿಕಾರಿಯೂ ಕಾರ್ಯಕ್ರಮದಲ್ಲಿ ಭಾಗವಹಿಸಬಾರದು ಎಂದು ಹೇಳಲಾಗಿದೆ ಎಂದಿದ್ದಾರೆ.
ತಮ್ಮ ಸ್ವಕ್ಷೇತ್ರ ಮಂಡ್ಯದಲ್ಲಿ ಕೇಂದ್ರ ಸಚಿವರಾದ ನಂತರ ಮೊದಲ ಜನಸ್ಪಂದನ ಕಾರ್ಯಕ್ರಮವನ್ನು ಎಚ್‌ಡಿಕೆ ಆಯೋಜನೆ ಮಾಡಿದ್ದರು. ಈ ಕಾರ್ಯಕ್ರಮದಲ್ಲಿ ಎಲ್ಲ ಇಲಾಖೆಯ ಅಧಿಕಾರಿಗಳು ಆಗಮಿಸುವಂತೆ ತಿಳಿಸಲಾಗಿತ್ತು. ಆದರೆ, ರಾಜ್ಯ ಸರಕಾರದ ಯಾವ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿಲ್ಲ ಎಂದು ಹೇಳಲಾಗುತ್ತಿದೆ.
ಈ ಹಿನ್ನೆಲೆಯಲ್ಲಿ ಕುಮಾರಸ್ವಾಮಿ, ರಾಜ್ಯ ಸರಕಾರದ ವಿರುದ್ಧ ಕಿಡಿಕಾರಿದ್ದಾರೆ. ರಾಜ್ಯ ಸರಕಾರ ದ್ವೇಷ ರಾಜಕಾರಣ ಮಾಡುವ ಮೂಲಕ ರಾಜ್ಯದ ಅಭಿವೃದ್ಧಿಗೆ ಹಿನ್ನಡೆಯಾಗುತ್ತಿದೆ. ಇದನ್ನೆಲ್ಲ ಬಿಟ್ಟು, ಜನರ ಸಮಸ್ಯೆಗಳನ್ನು ಬಗೆಹರಿಸುವ ಕಡೆಗೆ ಗಮನನೀಡುವುದು ಒಳ್ಳೆಯದು ಎಂದು ಸರಕಾರಕ್ಕೆ ಸಲಹೆ ನೀಡಿದ್ದಾರೆ ಎಂದರು.

