ಶುದ್ಧ ಗಾಳಿ: ಮನೆಯೊಳಗೆ ಈ ಗಿಡಗಳಿದ್ರೆ ಶುದ್ಧ ಗಾಳಿಯ ಚಿಂತೆ ಇಲ್ಲ….!
ಕೆಲವು ಒಳಾಂಗಣ ಸಸ್ಯಗಳು ನಮಗೆ ಸಹಾಯ ಮಾಡುತ್ತವೆ. ಈ ಸಸ್ಯಗಳನ್ನು ಮನೆಯೊಳಗೆ ಇಡುವುದರಿಂದ ಗಾಳಿಯ ಶುದ್ಧೀಕರಣ ಸಾಧ್ಯವಾಗುತ್ತದೆ.
ವಾಯುಮಾಲಿನ್ಯ (Air Pollution) ದಿನೇ ದಿನೇ ಹದಗೆಡುತ್ತಲೇ ಇದೆ. ಮುಂದೊಂದು ದಿನ ಶುದ್ಧ ಗಾಳಿಗಾಗಿ (Clean Air) ಪರಿತಪಿಸುವ ಪರಿಸ್ಥಿತಿ ಬಂದರು ಆಶ್ಚರ್ಯವಿಲ್ಲ. ಈಗಾಗಲೇ ಗಾಳಿಯ ಗುಣಮಟ್ಟ ನಮ್ಮೆಲ್ಲರ ಮೇಲೂ ಅನಾರೋಗ್ಯದ ರೂಪದಲ್ಲಿ ಪರಿಣಾಮ ಬೀರುತ್ತಿದೆ. ಇದೇ ಸ್ಥಿತಿ ಮುಂದುವರೆದರೆ ಭವಿಷ್ಯದಲ್ಲಿ ಇದರಿಂದ ಇನ್ನಷ್ಟು ತೊಂದರೆಯಾಗುವ ಸಾಧ್ಯತೆ ಇದೆ. ಹೀಗಾಗಿ ವಾಯುಮಾಲಿನ್ಯ ನಿಯಂತ್ರಣಕ್ಕೆ ಈಗಿನಿಂದಲೇ ಕ್ರಮ ಕೈಗೊಳ್ಳಬೇಕಾಗಿದೆ.
ಹೊರಗಡೆಯಿಂದ ಮನೆಗೆ ಬಂದಾಗಲಾದರೂ ಶುದ್ಧ ಗಾಳಿ ಉಸಿರಾಡುವಂತಾಗಬೇಕು. ಇದಕ್ಕಾಗಿ AQI ( Air Quality Index ) ಮಟ್ಟವನ್ನು ಸುಧಾರಿಸುವ, ಆಮ್ಲಜನಕವನ್ನು ಬಿಡುಗಡೆ ಮಾಡುವ ಮತ್ತು ಗಾಳಿಯಲ್ಲಿರುವ ವಿಷಕಾರಿ ಅಂಶಗಳನ್ನು ತೆಗೆದುಹಾಕುವ ಮಾರ್ಗಗಳನ್ನು ಅನುಸರಿಸಬೇಕಿದೆ.
ಈ ಕಾರ್ಯಕ್ಕೆ ಕೆಲವು ಒಳಾಂಗಣ ಸಸ್ಯಗಳು ನಮಗೆ ಸಹಾಯ ಮಾಡುತ್ತವೆ. ಈ ಸಸ್ಯಗಳನ್ನು ಮನೆಯೊಳಗೆ ಇಡುವುದರಿಂದ ಗಾಳಿಯ ಶುದ್ಧೀಕರಣ ಸಾಧ್ಯವಾಗುತ್ತದೆ. ವಿಶೇಷವೆಂದರೆ, ಇವು ರಾತ್ರಿ ಹೊತ್ತಿನಲ್ಲೂ ಕಾರ್ಯನಿರ್ವಹಿಸುವುದರಿಂದ, ಈ ಗಿಡಗಳನ್ನು ನಿಮ್ಮ ಬೆಡ್‌ರೂಮ್‌ನಲ್ಲಿ ಇಡುವುದು ಉತ್ತಮ ಆಯ್ಕೆಯಾಗಿದೆ.
ಬೆಡ್‌ರೂಮ್‌ನಲ್ಲಿ ಇಡಬಹುದಾದ ಗಾಳಿಯನ್ನು ಶುದ್ಧೀಕರಿಸುವ 8 ಇಂಡೋರ್ ಪ್ಲಾಂಟ್ಸ್
ಅಲೋವೆರಾ
ಅಲೋವೆರಾ ಅದರ ಔಷಧೀಯ ಗುಣಗಳಿಗಾಗಿ ಜನಪ್ರಿಯವಾಗಿದೆ. ಇದು ಚರ್ಮ ಮತ್ತು ಕೂದಲಿಗೆ ಮಾತ್ರವಲ್ಲದೆ, ನಮ್ಮ ಆರೋಗ್ಯದ ದೃಷ್ಟಿಯಿಂದಲೂ ಬಹಳ ಉಪಯುಕ್ತವಾಗಿದೆ. ಗಾಳಿಯನ್ನು ಶುದ್ಧೀಕರಿಸುವ ಶಕ್ತಿಯನ್ನು ಹೊಂದಿರುವ ಈ ಗಿಡ ಮನೆಯೊಳಗಿನ ಗಾಳಿಯನ್ನು ಪ್ಯೂರಿಫೈ ಮಾಡುತ್ತದೆ, ರಾತ್ರಿಯಿಡೀ ಆಮ್ಲಜನಕವನ್ನು ಉತ್ಪಾದಿಸುತ್ತದೆ ಮತ್ತು ಆರೋಗ್ಯಕರ ವಾತಾವರಣವನ್ನು ನಿರ್ಮಿಸುತ್ತದೆ. ಅಲೋವೆರಾ ಗಿಡವನ್ನು ನಿರ್ವಹಿಸುವುದು ಸಹ ಸುಲಭವಾಗಿದ್ದು, ಮನೆಯೊಳಗೆ ಸುಲಭವಾಗಿ ಬೆಳೆಸಬಹುದು.
ಸ್ನೇಕ್ ಪ್ಲಾಂಟ್
ಸ್ನೇಕ್ ಪ್ಲಾಂಟ್ ಫಾರ್ಮಾಲ್ಡಿಹೈಡ್, ನೈಟ್ರೋಜನ್ ಆಕ್ಸೈಡ್ ಮತ್ತು ಬೆಂಜೀನ್‌ನಂತಹ ವಿಷಕಾರಿ ಅಂಶಗಳನ್ನು ಹೀರಿಕೊಳ್ಳುತ್ತದೆ. ಇದು ನಿಮ್ಮ ಬೆಡ್‌ರೂಮ್ ಸೇರಿದಂತೆ ಇಡೀ ಮನೆಯನ್ನು ಮಾಲಿನ್ಯಕಾರಕಗಳಿಂದ ಮುಕ್ತಗೊಳಿಸುತ್ತದೆ. ವಿವಿಧ ಪರಿಸರಗಳಿಗೆ ಹೊಂದಿಕೊಳ್ಳುವ ಗುಣ ಹೊಂದಿರುವ ಈ ಗಿಡಕ್ಕೆ ಕನಿಷ್ಠ ನಿರ್ವಹಣೆಯಷ್ಟೇ ಸಾಕು. ಇದರ ಹಳದಿ-ಹಸಿರು ಎಲೆಗಳು ಗಾಳಿಯಲ್ಲಿರುವ ವಿಷವನ್ನು ಹೀರಿಕೊಂಡು ಶುದ್ಧ ಗಾಳಿಯನ್ನು ಒದಗಿಸುತ್ತವೆ.
ಅರೆಕಾ ಪಾಮ್
ಈ ಸಸ್ಯವು ಗಾಳಿಯನ್ನು ಶುದ್ಧೀಕರಿಸುವುದರ ಜೊತೆಗೆ, ನೈಸರ್ಗಿಕವಾಗಿ ತೇವಾಂಶವನ್ನು ಹೆಚ್ಚಿಸುವ ಮೂಲಕ ಹಗಲು–ರಾತ್ರಿ ಗಾಳಿಯ ಗುಣಮಟ್ಟವನ್ನು ಉತ್ತಮಪಡಿಸುತ್ತದೆ. ಅರೆಕಾ ಪಾಮ್ ನೈಸರ್ಗಿಕ ಆರ್ದ್ರಕ ಹಾಗೂ ಗಾಳಿ ಶುದ್ಧೀಕರಣಕಾರಕವಾಗಿದ್ದು, ಕಾರ್ಬನ್ ಮಾನಾಕ್ಸೈಡ್ ಮತ್ತು ಬೆಂಜೀನ್‌ನಂತಹ ವಿಷಕಾರಿ ಅಂಶಗಳನ್ನು ಪರಿಣಾಮಕಾರಿಯಾಗಿ ತೆಗೆದುಹಾಕುತ್ತದೆ. ಗಾಳಿಯ ಪ್ರಸರಣ ಅಗತ್ಯವಿರುವ ಮಲಗುವ ಕೋಣೆಗಳಿಗೆ ಇದು ಅತ್ಯುತ್ತಮವಾಗಿದೆ.
ತುಳಸಿ ಗಿಡ
ತುಳಸಿ ತನ್ನ ಔಷಧೀಯ ಗುಣಗಳಿಗಾಗಿ ಹೆಸರುವಾಸಿಯಾಗಿದೆ ಮತ್ತು ಭಾರತೀಯ ಸಂಸ್ಕೃತಿಯಲ್ಲಿ ದೈವೀಕ ಮಹತ್ವವನ್ನು ಹೊಂದಿದೆ.
ಗಾಳಿಯ ಗುಣಮಟ್ಟವನ್ನು ಕಾಪಾಡುವಲ್ಲಿಯೂ ತುಳಸಿಯ ಪಾತ್ರ ಮಹತ್ವದ್ದಾಗಿದೆ. ಇದು ದಿನದ 24 ಗಂಟೆಯೂ ಆಮ್ಲಜನಕವನ್ನು ಉತ್ಪಾದಿಸಿ, ಗಾಳಿಯಲ್ಲಿರುವ ಹಾನಿಕಾರಕ ವಿಷಗಳನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ.
ಪೀಸ್ ಲಿಲ್ಲಿ
ಬಿಳಿ ಹೂವು ಬಿಡುವ ಈ ಗಿಡ ಮನೆಗೆ ಅಂದವನ್ನು ಹೆಚ್ಚಿಸುವುದರ ಜೊತೆಗೆ, ಮನೆಯೊಳಗಿನ ಗಾಳಿಯನ್ನು ಶುದ್ಧಗೊಳಿಸುತ್ತದೆ. ಅಮೋನಿಯಾ, ಬೆಂಜೀನ್ ಮತ್ತು ಫಾರ್ಮಾಲ್ಡಿಹೈಡ್‌ನಂತಹ ವಿಷಕಾರಿ ಅಂಶಗಳನ್ನು ತೆಗೆದುಹಾಕುವ ಶಕ್ತಿ ಈ ಸಸ್ಯಕ್ಕಿದೆ. ಬೆಡ್‌ರೂಮ್‌ನಲ್ಲಿ ಈ ಗಿಡವನ್ನು ಇಡುವುದರಿಂದ ಗಾಳಿಯ ಗುಣಮಟ್ಟವನ್ನು ಸುಧಾರಿಸಬಹುದು.
ಇಂಗ್ಲಿಷ್ ಐವಿ
ಇಂಗ್ಲಿಷ್ ಐವಿ ಮಲಗುವ ಕೋಣೆಗಳಿಗೆ ಅತ್ಯಂತ ಸೂಕ್ತವಾದ ಸಸ್ಯವಾಗಿದೆ. ಇದು ಫಾರ್ಮಾಲ್ಡಿಹೈಡ್, ಬೆಂಜೀನ್ ಮತ್ತು ಇತರ ವಿಷಕಾರಿ ಅಂಶಗಳನ್ನು ಗಾಳಿಯಿಂದ ಫಿಲ್ಟರ್ ಮಾಡುತ್ತದೆ. ಸರಿಯಾದ ಗಾಳಿ ಮತ್ತು ಕನಿಷ್ಠ ಆರೈಕೆಯೊಂದಿಗೆ ಈ ಗಿಡವನ್ನು ಮನೆಯೊಳಗೆ ಸುಲಭವಾಗಿ ಬೆಳೆಸಬಹುದು.
ಮನಿ ಪ್ಲಾಂಟ್
ವಾಸ್ತುಶಾಸ್ತ್ರದಲ್ಲಿ ಬಹಳ ಪ್ರಾಮುಖ್ಯತೆ ಹೊಂದಿರುವ ಈ ಗಿಡ, ಗಾಳಿ ಶುದ್ಧೀಕರಣಕಾರಕವಾಗಿಯೂ ಕಾರ್ಯನಿರ್ವಹಿಸುತ್ತದೆ. ಇದು ಕಾರ್ಬನ್ ಮಾನಾಕ್ಸೈಡ್ ಮತ್ತು ಫಾರ್ಮಾಲ್ಡಿಹೈಡ್‌ನಂತಹ ವಿಷಕಾರಿ ಅಂಶಗಳನ್ನು ಫಿಲ್ಟರ್ ಮಾಡಿ, ಶುದ್ಧ ಗಾಳಿ ಉಸಿರಾಡಲು ಸಹಕಾರಿಯಾಗುತ್ತದೆ.
ಗರ್ಬೆರಾ ಡೈಸಿ
ಗರ್ಬೆರಾ ಡೈಸಿ ತನ್ನ ಸುಂದರ ಹೂವುಗಳಿಂದ ಮನೆಗೆ ಅಂದವನ್ನು ಹೆಚ್ಚಿಸುವುದಲ್ಲದೆ, ಗಾಳಿಯನ್ನು ಕೂಡ ಶುದ್ಧಗೊಳಿಸುತ್ತದೆ. ಇದು ಗಾಳಿಯಲ್ಲಿರುವ ಮಲಿನತೆ ಮತ್ತು ವಿಷಕಾರಿ ಅಂಶಗಳನ್ನು ತೆಗೆದುಹಾಕಿ, ರಾತ್ರಿಯಲ್ಲಿ ಶಾಂತಿಯುತ ನಿದ್ರೆಗೆ ಅಗತ್ಯವಾದ ಆಮ್ಲಜನಕವನ್ನು ಹೊರಸೂಸುತ್ತದೆ.
ಇದೇ ರೀತಿಯ ಹಲವಾರು ಗಿಡಗಳನ್ನು ಮನೆಯಲ್ಲಿ ನೆಡುವುದರಿಂದ ಆರೋಗ್ಯ ಹಾಗೂ ಮನೆಯ ವಾತಾವರಣವನ್ನು ಕಾಪಾಡಿಕೊಳ್ಳಬಹುದು


