ಸುದ್ದಿ

ಪರಿಸರ ಪ್ರವಾಸೋಧ್ಯಮ ಆಹ್ಲಾದಿಸಲು ಚಾಮರಾಜನಗರ ಉತ್ತಮ ಜಿಲ್ಲೆ: ಸಿಎಂ

Share It

ನೀವು ನನ್ನ ಕುರ್ಚಿ ಅಲ್ಲಾಡಿಸ್ತಾನೇ ಇರಿ. ನನ್ನ‌ ಕುರ್ಚಿ ಗಟ್ಟಿ ಆಗ್ತನೇ ಇರ್ತದೆ: ಬಿಜೆಪಿ-ಜೆಡಿಎಸ್ ಷಡ್ಯಂತ್ರವನ್ನು ಲೇವಡಿ ಮಾಡಿದ ಸಿಎಂ

ಚಾಮರಾಜನಗರ: ನೀವು ನನ್ನ ಕುರ್ಚಿ ಅಲ್ಲಾಡಿಸ್ತಾನೇ ಇರಿ. ನನ್ನ‌ ಕುರ್ಚಿ ಗಟ್ಟಿ ಆಗ್ತನೇ ಇರ್ತದೆ: ಬಿಜೆಪಿ-ಜೆಡಿಎಸ್ ಷಡ್ಯಂತ್ರವನ್ನು ಸಿಎಂ ಲೇವಡಿ ಮಾಡಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಪ್ರವಾಸೋಧ್ಯಮ ಇಲಾಖೆ ಮತ್ತು ಜಿಲ್ಲಾಡಳಿತ ವತಿಯಿಂದ ಆಯೋಜಿಸಿದ್ದ ‘ಚೆಲುವ ಚಾಮರಾಜನಗರ’ “ಭರಚುಕ್ಕಿ ಜಲಪಾತೋತ್ಸವ” ವನ್ನು ಉದ್ಘಾಟಿಸಿ ಮಾತನಾಡಿದರು.

ಪರಿಸರ ಪ್ರವಾಸೋಧ್ಯಮ ಆಹ್ಲಾದಿಸಲು ಚಾಮರಾಜನಗರ ಉತ್ತಮ ಜಿಲ್ಲೆಯಾಗಿದೆ. ಆದರೆ ಆರ್ಥಿಕವಾಗಿ, ಸಾಮಾಜಿಕವಾಗಿ ಬಹಳ ಹಿಂದೆ ಉಳಿದಿದೆ ಎಂದರು.

ಈ ಜಿಲ್ಲೆಗೆ ಕಾಲಿಟ್ಟರೆ ಅಧಿಕಾರ ಹೋಗ್ತದೆ ಎನ್ನುವ ಮೂಢನಂಬಿಕೆ ಬಿತ್ತಿದ್ದರು. ಆದರೂ ನಾನು ಹತ್ತಕ್ಕೂ ಹೆಚ್ವು ಬಾರಿ ಜಿಲ್ಲೆಗೆ ಮುಖ್ಯಮಂತ್ರಿಯಾಗಿ ಬಂದಿದ್ದೇನೆ. ಇಲ್ಲಿಗೆ ಬಂದಾಗೆಲ್ಲಾ ನನ್ನ ಕುರ್ಚಿ ಹೆಚ್ಚು ಗಟ್ಟಿಯಾಗಿದೆ ಎಂದರು.

ನನ್ನ ಕುರ್ಚಿಯನ್ನು ಬಿಜೆಪಿ-ಜೆಡಿಎಸ್ ನವರು ಅಲ್ಲಾಡಿಸ್ತಾನೇ ಇದಾರೆ. ಅವರು ಎಷ್ಟೇ ಅಲ್ಲಾಡಿಸಿದ್ರೂ ನಾನು ಇನ್ನಷ್ಟು ಗಟ್ಟಿಯಾಗಿ ಅಧಿಕಾರದ ಚುಕ್ಕಾಣಿ ಹಿಡಿದು ಬಡವರ, ಶೋಷಿತರ ಪರವಾಗಿ ಕಾರ್ಯಕ್ರಮಗಳನ್ನು ರೂಪಿಸ್ತಲೇ ಇರ್ತೇನೆ ಎಂದು ಬಿಜೆಪಿ-ಜೆಡಿಎಸ್ ಅವರ ಜಂಟಿ ಷಡ್ಯಂತ್ರವನ್ನು ಲೇವಡಿ ಮಾಡಿದರು.

ಸಿದ್ದರಾಮಯ್ಯರ ಕಾಲುಗುಣ ಸರಿ ಇಲ್ಲ. ಅದಕ್ಕೆ ರಾಜ್ಯದಲ್ಲಿ ಮಳೆ ಇಲ್ಲ ಎಂದು ನನ್ನ ಬಗ್ಗೆ ಆರೋಪಿಸಿದ್ದರು. ಆದರೆ, ಈ ಬಾರಿ ಉತ್ತಮ ಮಳೆಯಾಗಿ ವಾಡಿಕೆಗಿಂತ ಹೆಚ್ಚು ಮಳೆಯಾಗಿದೆ. ಹೀಗಾಗಿ ನನ್ನ ಬಗ್ಗೆ ಮೂಡಿಸಿದ್ದ ಮತ್ತೊಂದು ಮೂಢನಂಬಿಕೆ ಕೂಡ ಸುಳ್ಳಾಗಿದೆ ಎಂದರು.

ಚಾಮರಾಜನಗರ ಜಿಲ್ಲೆಯಲ್ಲಿ ಪ್ರವಾಸೋಧ್ಯಮ ಅಭಿವೃದ್ಧಿಪಡಿಸಲು ಸರ್ಕಾರ ಅಗತ್ಯ ಎಲ್ಲ ನೆರವನ್ನೂ ನೀಡಲಿದೆ. ಅಗತ್ಯಬಿದ್ದರೆ ಹೊಸ ಪ್ರವಾಸೋಧ್ಯಮ ನೀತಿಯನ್ನೂ ರಚಿಸಲಾಗುವುದು ಭರವಸೆ ನೀಡಿದರು.

ಬಿಳಿಗಿರಿರಂಗನಬೆಟ್ಟ, ಗಗನಚುಕ್ಕಿ ರೋಪ್ ವೇ, ಇಲ್ಲಿನ ದೇವಸ್ಥಾನ ಅಭಿವೃದ್ಧಿ, ಸುಬರ್ಣಾವತಿ ಜಲಾಶಯದಲ್ಲಿ ಜಲ ಸಾಹನ ಕ್ರೀಡೆಗಳನ್ನು ಆರಂಭಿಸುವುದೂ ಸೇರಿ ಎಲ್ಲಾ ಯೋಜನೆಗಳಿಗೂ ಸರ್ಕಾರ ಜೊತೆಗೆ ನಿಲ್ಲಲಿದೆ. ಜಿಲ್ಲೆಯಲ್ಲಿ ಪ್ರವಾಸೋದ್ಯಮದ ಮೂಲಕ ಆರ್ಥಿಕವಾಗಿ ವೇಗದ ಪ್ರಗತಿ ಕಾಣಿಸಲು ಎಲ್ಲಾ ಸಹಕಾರವನ್ನೂ ಸರ್ಕಾರ ನೀಡಲಿದೆ ಎಂದು ಭರವಸೆ ನೀಡಿದರು.

ಸಚಿವರಾದ ಎಚ್.ಕೆ.ಪಾಟೀಲ್, ಕೆ.ವೆಂಕಟೇಶ್, ಶಿವರಾಜ ತಂಗಡಗಿ, ಶಾಸಕರಾದ ಹನೂರು ಮಂಜುನಾಥ್, ಪುಟ್ಟರಂಗಶೆಟ್ಟಿ, ಗಣೇಶ್ ಪ್ರಸಾದ್, ಸಂಸದರಾದ ಸುನಿಲ್ ಬೋಸ್, ವಿಧಾನ‌ ಪರಿಷತ್ ಸದಸ್ಯರಾದ ಡಾ.ತಿಮ್ಮಯ್ಯ ಸೇರಿ ಹಲವು ಪ್ರಮುಖರು ವೇದಿಕೆಯಲ್ಲಿದ್ದರು.


Share It

You cannot copy content of this page