ಉಪಯುಕ್ತ ಸುದ್ದಿ

ಜನಗಣತಿ–2027 ತರಬೇತಿ ಕೇಂದ್ರಕ್ಕೆ ಆಯುಕ್ತರ ಭೇಟಿ: ನಿಖರ ಅಂಕಿಅಂಶ ಸಂಗ್ರಹಣೆಗೆ ಒತ್ತು

Share It

ಬೆಂಗಳೂರು: ಬೆಂಗಳೂರು ಉತ್ತರ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಜನಗಣತಿ–2027ರ ಅಂಗವಾಗಿ ಯಲಹಂಕದಲ್ಲಿರುವ ಏಟ್ರಿಯಾ ವಿಶ್ವವಿದ್ಯಾಲಯದಲ್ಲಿ ನಡೆಯುತ್ತಿರುವ ತರಬೇತಿ ಕೇಂದ್ರಕ್ಕೆ ಆಯುಕ್ತ ಪೊಮ್ಮಲ ಸುನೀಲ್ ಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಈ ಸಂದರ್ಭದಲ್ಲಿ ಗಣತಿದಾರರು ಹಾಗೂ ಸೂಪರ್ವೈಸರ್‌ಗಳಿಗೆ ಮಾರ್ಗದರ್ಶನ ನೀಡಿದ ಆಯುಕ್ತರು, ಅಂಕಿಅಂಶಗಳ ನಿಖರತೆ ಅತ್ಯಂತ ಮುಖ್ಯವಾಗಿದ್ದು, ಯಾವುದೇ ತಪ್ಪು ಮಾಹಿತಿ ನೀಡದೇ ಸರಿಯಾದ ಮಾಹಿತಿ ಸಂಗ್ರಹಿಸಬೇಕು ಎಂದು ಸೂಚಿಸಿದರು.

ಜನಗಣತಿ ಮೂಲಕ ಸಂಗ್ರಹವಾಗುವ ಮಾಹಿತಿ ದೇಶದ ಅಭಿವೃದ್ಧಿಗೆ ಮಹತ್ವದ ಆಧಾರವಾಗಿದ್ದು, ಇನ್ನೂ ಹಲವು ಸಂದರ್ಭಗಳಲ್ಲಿ 2011ರ ಜನಗಣತಿ ಮಾಹಿತಿಯನ್ನೇ ಬಳಸುತ್ತಿರುವುದು ಇದರ ಮಹತ್ವ ತೋರಿಸುತ್ತದೆ ಎಂದು ಹೇಳಿದರು.

ಗಣತಿದಾರರು, ಸೂಪರ್ವೈಸರ್‌ಗಳು ಹಾಗೂ ಚಾರ್ಜ್ ಅಧಿಕಾರಿಗಳು ಯಾವುದೇ ಕಾರಣಗಳನ್ನು ನೀಡದೆ ತಮ್ಮ ಕರ್ತವ್ಯವನ್ನು ಸಮರ್ಪಕವಾಗಿ ನಿರ್ವಹಿಸಿ, ಸಮಯಕ್ಕೆ ಸರಿಯಾಗಿ ಕೆಲಸವನ್ನು ಪೂರ್ಣಗೊಳಿಸಬೇಕು ಎಂದು ತಿಳಿಸಿದರು.

ಜನಗಣತಿ ಕಾರ್ಯದಲ್ಲಿ ನಿರ್ಲಕ್ಷ್ಯ ತೋರಿದಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುವುದಾಗಿ ಎಚ್ಚರಿಕೆ ನೀಡಿದ ಅವರು, ದೇಶ ನಿರ್ಮಾಣದ ಮಹತ್ವದ ಕಾರ್ಯದಲ್ಲಿ ಪ್ರತಿಯೊಬ್ಬರೂ ಹೆಮ್ಮೆ ಮತ್ತು ಜವಾಬ್ದಾರಿಯಿಂದ ಭಾಗವಹಿಸಬೇಕು ಎಂದು ಹೇಳಿದರು.

ಸ್ವಯಂ ಗಣತಿಗೆ ಮನವಿ : ತರಬೇತಿ ಕೇಂದ್ರಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಆಯುಕ್ತರು ಸ್ವಯಂ ಜನಗಣತಿ (Self-Enumeration) ಪ್ರಕ್ರಿಯೆಯಲ್ಲಿ ಗಣತಿದಾರರು ಹಾಗೂ ಮೇಲ್ವಿಚಾರಕರು ಪಾಲ್ಗೊಳ್ಳಲು ಕೋರಿದರು. ಸಾರ್ವಜನಿಕರು ಸಹ ‘ಸ್ವಯಂ ಜನಗಣತಿ’ (Self-Enumeration) ಪ್ರಕ್ರಿಯೆಯಲ್ಲಿ ಭಾಗವಹಿಸಬೇಕಾಗಿ ಮತೊಮ್ಮೆ ವಿನಂತಿಸಿದ್ದಾರೆ.

ತರಬೇತಿ ವಿವರಗಳು: ಏಟ್ರಿಯಾ ವಿಶ್ವವಿದ್ಯಾಲಯದಲ್ಲಿ ಒಟ್ಟು 4 ಚಾರ್ಜ್‌ಗಳಿಗೆ ತರಬೇತಿ ನೀಡಲಾಗುತ್ತಿದ್ದು, 686 ಗಣತಿದಾರರು ಮತ್ತು ಸೂಪರ್ವೈಸರ್‌ಗಳು ಈ ತರಬೇತಿಯಲ್ಲಿ ಭಾಗವಹಿಸಿದ್ದರು.

ಪೌರಕಾರ್ಮಿಕರ ಕ್ರೀಡಾ ಕಾರ್ಯಕ್ರಮಕ್ಕೆ ಭೇಟಿ: ನಂತರದಲ್ಲಿ, ಯಲಹಂಕ ಹೊಯ್ಸಳ ಆಟದ ಮೈದಾನದಲ್ಲಿ ಪೌರಕಾರ್ಮಿಕರಿಗಾಗಿ ನಡೆಯುತ್ತಿರುವ ಕ್ರೀಡಾಕೂಟಕ್ಕೆ ಭೇಟಿ ನೀಡಿದ ಆಯುಕ್ತರು, ಕ್ರೀಡಾ ವ್ಯವಸ್ಥೆಯನ್ನು ಪರಿಶೀಲಿಸಿ, ಪೌರಕಾರ್ಮಿಕರ ಆಟಗಳನ್ನು ವೀಕ್ಷಿಸಿದರು.

ಈ ಸಂದರ್ಭದಲ್ಲಿ ಜಂಟಿ ಆಯುಕ್ತರಾದ ಮೊಹಮ್ಮದ್ ನಯೀಮ್ ಮೊಮಿನ್ ಮತ್ತು ಪಲ್ಲವಿ, ಚಾರ್ಜ್ ಅಧಿಕಾರಿಗಳು ಹಾಗೂ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.


Share It

You cannot copy content of this page