ಬೆಂಗಳೂರು: ಬೆಂಗಳೂರು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ವಾರ್ಡ್ ವಿಂಗಡಣೆ ಪ್ರಕ್ರಿಯೆಯನ್ನು ನವೆಂಬರ್ 1ರೊಳಗೆ ಪೂರ್ಣಗೊಳಿಸಬೇಕು ಎಂದು ಸುಪ್ರೀಂ ಕೋರ್ಟ್ ರಾಜ್ಯ ಚುನಾವಣಾ ಆಯೋಗಕ್ಕೆ ಕಟ್ಟುನಿಟ್ಟಿನ ಸೂಚನೆ ನೀಡಿದೆ.
ಸೋಮವಾರ ಅರ್ಜಿ ವಿಚಾರಣೆ ಮುಂದುವರಿಸಿದ ಸುಪ್ರೀಂ ಕೋರ್ಟ್, ನವೆಂಬರ್ 1ರೊಳಗೆ ವಾರ್ಡ್ ವಿಂಗಡಣೆ ಪ್ರಕ್ರಿಯೆ ಪೂರ್ಣಗೊಳಿಸಬೇಕು. ಅದಾದ ನಂತರ ಮತದಾರರ ಪಟ್ಟಿಯನ್ನು ಅಂತಿಮಗೊಳಿಸಬೇಕು ಎಂದು ಸೂಚನೆ ನೀಡುವ ಮೂಲಕ ಮುಂದಿನ ವಿಚಾರಣೆಯನ್ನು ನವೆಂಬರ್ 3ಕ್ಕೆ ಮುಂದೂಡಿತು.
ಕ್ಷೇತ್ರ ಪುನರ್ ವಿಂಗಡಣೆ ಮಾಡಲು ಕನಿಷ್ಠ 60ರಿಂದ 90 ದಿನಗಳು ಬೇಕಾಗುತ್ತವೆ ಹೀಗಾಗಿ, ನ್ಯಾಯಾಲಯ ಹೆಚ್ಚಿನ ಕಾಲಾವಕಾಶ ನೀಡಬೇಕು ಎಂದು ನ್ಯಾಯಾಲಯಕ್ಕೆ ಚುನಾವಣಾ ಆಯೋಗದ ಪರ ವಕೀಲರಾದ ಪಣೀಂದ್ರ ಮನವಿ ಮಾಡಿಕೊಂಡರು. ಆದರೆ, ಇದಕ್ಕೆ ಒಪ್ಪದ ನ್ಯಾಯಾಲಯ ಇಂತಹ ಸಬೂಬು ಹೇಳಿಕೊಂಡೇ ಚುನಾವಣೆ ಮುಂದೂಡುತ್ತಾ ಬಂದಿದ್ದೀರಿ, ಇನ್ನು ಹೆಚ್ಚಿನ ಅವಕಾಶ ಕೊಡಲು ಸಾಧ್ಯವಿಲ್ಲ ಎಂದು ಹೇಳಿತು.
ನವೆಂಬರ್ 1ರಂದು ಪುನರ್ ವಿಂಗಡಣೆ ಪ್ರಕ್ರಿಯೆ ಪೂರ್ಣವಾಗಿರಬೇಕು. ಮುಂದಿನ ವಿಚಾರಣೆ ನವೆಂಬರ್ 3ಕ್ಕೆ ಇದ್ದು, ಆಗ ಯಾವುದೇ ಸಬೂಬು ಹೇಳುವಂತಿಲ್ಲ ಎಂದು ಖಡಕ್ ಸೂಚನೆ ನೀಡಿತು.