ದಾವಣಗೆರೆ: “ದಿವಂಗತ ಶಾಮನೂರು ಶಿವಶಂಕರಪ್ಪನವರು ಮಾಡಿರುವ ಸೇವೆ, ಕೊಟ್ಟಿರುವ ಕೊಡುಗೆಗಳನ್ನು ಈ ಭಾಗದ ಜನ ಸ್ಮರಿಸುತ್ತಿದ್ದಾರೆ. ಈ ಬಾರಿಯ ಉಪಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಸಮರ್ಥ್ ಶಾಮನೂರು ಮಲ್ಲಿಕಾರ್ಜುನ ಅವರು ದೊಡ್ಡ ಅಂತರದ ಗೆಲುವು ಸಾಧಿಸಲಿದ್ದಾರೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ವಿಶ್ವಾಸ ವ್ಯಕ್ತಪಡಿಸಿದರು.
ದಾವಣೆಗೆರೆಯಲ್ಲಿ ಮಾಧ್ಯಮಗಳ ಪ್ರಶ್ನೆಗಳಿಗೆ ಶಿವಕುಮಾರ್ ಅವರು ಮಂಗಳವಾರ ಪ್ರತಿಕ್ರಿಯೆ ನೀಡಿದರು. ಎರಡು ಕ್ಷೇತ್ರಗಳಲ್ಲಿನ ಉಪಚುನಾವಣೆ ಪ್ರಚಾರದ ಬಗ್ಗೆ ಕೇಳಿದಾಗ, “ನಮ್ಮ ಮುಖ್ಯಮಂತ್ರಿಗಳು ಈಗಾಗಲೇ ಉಪಚುನಾವಣೆ ಕ್ಷೇತ್ರಗಳಲ್ಲಿ ಪ್ರಚಾರ ಆರಂಭಿಸಿದ್ದಾರೆ. ನಮ್ಮ ರಾಜ್ಯ ಹಾಗೂ ಹೊರ ರಾಜ್ಯಗಳಲ್ಲಿ ಪಕ್ಷ ಯಾರಿಗೆ ಎಲ್ಲಿ ಪ್ರಚಾರ ಮಾಡಲು ಜವಾಬ್ದಾರಿ ನಿಡಿದೆಯೋ ಆಯಾ ನಾಯಕರು ಅಲ್ಲಿ ಪ್ರಚಾರನಿರತರಾಗಿದ್ದಾರೆ.
ನಾನು ಅಸ್ಸಾಂನಲ್ಲಿ ಎರಡು ದಿನ ಪ್ರಚಾರ ಮುಗಿಸಿ ಇಲ್ಲಿಗೆ ಬಂದಿದ್ದೇನೆ. ಇಂದು ದಾವಣಗೆರೆ, ನಾಳೆ ಬಾಗಲಕೋಟೆಯಲ್ಲಿ ಪ್ರಚಾರ ಮಾಡುತ್ತೇವೆ. ನಂತರ ಮತ್ತೆ ದಾವಣಗೆರೆ ಹಾಗೂ ಬಾಗಲಕೋಟೆಯಲ್ಲಿ ಪ್ರಚಾರ ಮಾಡುತ್ತೇವೆ. ಈ ಮಧ್ಯೆ ಎರಡು ದಿನ ಕೇರಳಕ್ಕೆ ಹಾಗೂ ಒಂದು ದಿನ ಅಸ್ಸಾಂಗೆ ಹೋಗಿ ಪ್ರಚಾರ ಮಾಡುತ್ತೇನೆ” ಎಂದು ಹೇಳಿದರು.
ಪಕ್ಷ ಎಲ್ಲರನ್ನು ಒಟ್ಟಾಗಿ ತೆಗೆದುಕೊಂಡು ಹೋಗುತ್ತಿದೆ: “ನಾವು ಎಲ್ಲಾ ಗೊಂದಲಗಳಿಗೆ ತೆರೆ ಎಳೆದಿದ್ದು, ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡುತ್ತಿದ್ದೇವೆ. ಕಾಂಗ್ರೆಸ್ ಪಕ್ಷ ಎಲ್ಲಾ ಸಮಾಜ, ಎಲ್ಲಾ ವರ್ಗಗಳನ್ನು ಒಟ್ಟಿಗೆ ತೆಗೆದುಕೊಂಡು ಹೋಗುತ್ತಿದೆ. ಶಾಮನೂರು ಶಿವಶಂಕರಪ್ಪ ಅವರು ರಾಷ್ಟ್ರೀಯ ವೀರಶೈವ ಲಿಂಗಾಯತ ಮಹಾಸಭಾ ಅಧ್ಯಕ್ಷರಾಗಿದ್ದವರು. ಅವರ ಕೊಡುಗೆ ಅಪಾರವಾಗಿದೆ. ನಾನು ಇಲ್ಲಿ ಪ್ರತ್ಯೇಕ ಸಮೀಕ್ಷೆ ಮಾಡಿಸಿದ್ದು, ಕೋವಿಡ್ ಸಮಯದಲ್ಲಿ ಶಾಮನೂರು ಶಿವಶಂಕರಪ್ಪನವರು ಮಾಡಿದ ಸಹಾಯ, ಸಹಕಾರವನ್ನು ಜನ ಸ್ಮರಿಸುತ್ತಿದ್ದಾರೆ. ವಿದ್ಯಾ ಕ್ಷೇತ್ರದಲ್ಲಿ ಅವರು ನೀಡಿರುವ ಸೇವೆಯನ್ನು ನೆನೆಯುತ್ತಿದ್ದಾರೆ” ಎಂದರು.
“ಸಾವಿರಾರು ಜನ ಹೊರಗಡೆಯಿಂದ ಬಂದು ಇಲ್ಲಿ ಶಿಕ್ಷಣ ಪಡೆಯುವಂತೆ ಮಾಡಿರುವವರು ಶಿವಶಂಕರಪ್ಪನವರು. ಅವರಿಂದ ಈ ಜಿಲ್ಲೆ ಪ್ರಸಿದ್ಧವಾಗಿದೆ. ಅವರ ಕುಟುಂಬಕ್ಕೆ ಶಕ್ತಿ ತುಂಬಲು ಜನ ತೀರ್ಮಾನಿಸಿದ್ದಾರೆ. 79% ಜನ ಕಾಂಗ್ರೆಸ್ ಅಭ್ಯರ್ಥಿ ಆಯ್ಕೆ ಮಾಡುವುದಾಗಿ ಹೇಳಿದ್ದು, ಇದು ಬಹಳ ಸಂತೋಷದ ವಿಚಾರ. ನಮ್ಮ ಗ್ಯಾರಂಟಿಗಳು ಕ್ಷೇತ್ರದ ಮನೆ ಮನೆಗೂ ತಲುಪಿವೆ. 59 ಸಾವಿರ ಬಡ ಮಹಿಳೆಯರಿಗೆ ಗೃಹಲಕ್ಷ್ಮಿ ಯೋಜನೆ ತಲುಪುತ್ತಿದೆ. 1.40 ಲಕ್ಷ ಜನರಿಗೆ ಅನ್ನ ಭಾಗ್ಯ ಯೋಜನೆ, 59 ಸಾವಿರ ಮನೆಗಳಿಗೆ ಉಚಿತ ವಿದ್ಯುತ್ ಸಿಗುತ್ತಿದೆ. ಮಹಿಳೆಯರು ಬಸ್ ನಲ್ಲಿ ಉಚಿತ ಪ್ರಯಾಣ ಮಾಡುತ್ತಿದ್ದಾರೆ” ಎಂದು ವಿವರಿಸಿದರು.
“ಗ್ಯಾಸ್, ಪೆಟ್ರೋಲ್, ಡೀಸೆಲ್, ಕಬ್ಬಿಣ, ಸೀಮೆಂಟ್ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗುತ್ತಿದೆ. ಇನ್ನು ಮುಂದೆಯೂ ಏರಿಕೆಯಾಗಲಿದೆ. ಈ ಬೆಲೆ ಏರಿಕೆಯಿಂದ ಜನರನ್ನು ರಕ್ಷಣೆ ಮಾಡಲು ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದೆ. ನಮ್ಮ ಈ ಯೋಜನೆ ಮಹತ್ವ ಈಗ ಅರಿವಾಗುತ್ತಿದೆ” ಎಂದರು.
ಅಲ್ಪಸಂಖ್ಯಾತರನ್ನು ರಕ್ಷಣೆ ಮಾಡಿಕೊಂಡು, ಅಧಿಕಾರ ನೀಡುತ್ತಾ ಬಂದಿದ್ದೇವೆ: ಪ್ರಚಾರಕ್ಕೆ ಸಚಿವ ಜಮೀರ್ ಅಹ್ಮದ್ ಅವರು ಬರುತ್ತಾರಾ ಎಂದು ಕೇಳಿದಾಗ, “ಪಕ್ಷ ಜಮೀರ್ ಅವರಿಗೆ ಕೇರಳ ಚುನಾವಣೆ ಪ್ರಚಾರದ ಜವಾಬ್ದಾರಿ ನೀಡಿದ್ದು, ಅದನ್ನು ಮುಗಿಸಿಕೊಳ್ಳುತ್ತಾರೆ. ಇನ್ನುಳಿದ ಅಲ್ಪಸಂಖ್ಯಾತ ನಾಯಕರಿಗೂ ನಾವು ಚುನಾವಣಾ ಪ್ರಚಾರದ ಜವಾಬ್ದಾರಿ ವಹಿಸಿದ್ದೇವೆ” ಎಂದರು.
ಜಮೀರ್ ಅವರಿಗೆ ಅಸಮಾಧಾನವಿದೆ ಎಂದು ಕೇಳಿದಾಗ, “ಒಬ್ಬ ವ್ಯಕ್ತಿ ಮೇಲೆ ಪಕ್ಷ ನಡೆಯುವುದಿಲ್ಲ. ಡಿ.ಕೆ. ಶಿವಕುಮಾರ್ ಮೇಲೂ ನಡೆಯುವುದಿಲ್ಲ, ಸಿದ್ದರಾಮಯ್ಯ ಅವರ ಮೇಲೂ ನಡೆಯುವುದಿಲ್ಲ, ಜಮೀರ್ ಅವರ ಮೇಲೂ ನಡೆಯುವುದಿಲ್ಲ. ಪಕ್ಷವು ಸಿದ್ಧಾಂತ ಹಾಗೂ ಕಾರ್ಯಕರ್ತರ ಮೇಲೆ ನಡೆಯುತ್ತದೆ. ಚುನಾವಣೆಯಲ್ಲಿ ನಾವು ಮೊದಲಿನಿಂದಲೂ ಕೆಲಸ ಮಾಡಿಕೊಂಡು ಬಂದಿದ್ದೇವೆ.
ಅಲ್ಪಸಂಖ್ಯಾತರಿಗೆ ನಾವು ಕೊಟ್ಟಿರುವ ಕೊಡುಗೆಯನ್ನು ಬಿಜೆಪಿಯವರು ಮುಸ್ಲಿಂ ಓಲೈಕೆ ಎಂದು ಟೀಕೆ ಮಾಡುತ್ತಿದೆ. ಇದು ಮುಸಲ್ಮಾನರ ಪಕ್ಷ ಎಂದು ಅವರು ಟೀಕೆ ಮಾಡುತ್ತಾರೆ. ಅಲ್ಪಸಂಖ್ಯಾತರನ್ನು ರಕ್ಷಣೆ ಮಾಡುವುದು ನಮ್ಮ ಕರ್ತವ್ಯ. ಈ ದೃಷ್ಟಿಯಿಂದಲೇ ನಾವು ಈ ಭಾಗದ ಜಬ್ಬಾರ್ ಅವರಿಗೆ ವಿಧಾನ ಪರಿಷತ್ ಸದಸ್ಯ ಸ್ಥಾನವನ್ನು ನೀಡಿದ್ದೇವೆ. ಶಿಗ್ಗಾಂವ್ ಕ್ಷೇತ್ರದವರಿಗೂ ಸ್ಥಾನ ನೀಡಿದ್ದು, 16 ನಿಗಮ ಮಂಡಳಿ ಅಧ್ಯಕ್ಷ ಸ್ಥಾನವನ್ನು ಅಲ್ಪಸಂಖ್ಯಾತರಿಗೆ ನೀಡಲಾಗಿದೆ” ಎಂದು ವಿವರಿಸಿದರು.

