ದೆಹಲಿ, ಬೆಂಗಳೂರು, ಚೆನ್ನೈ , ಕೋಲ್ಕತ್ತಾ , ಮುಂಬಯಿ ಮಹಾನಗರಗಳ ಸಾಧನೆ ಶೂನ್ಯ
ಬೆಂಗಳೂರು: ಮಹಾನಗರದ ಜನತೆಗೆ ಅದೇಕೋ ಕಾಂಗ್ರೆಸ್ ಕಡೆಗೆ ಗಮನ ಅಷ್ಟಕ್ಕಷ್ಟೇ. ಅದು ಮತ್ತೊಮ್ಮೆ ಸಾಭೀತಾಗಿದೆ. 2024 ರ ಲೋಕಸಭಾ ಚುನಾವಣೆಯಲ್ಲಿ ಆರು ಮಹಾನಗರಗಳ ಪೈಕಿ ಕಾಂಗ್ರೆಸ್ ಸಾಧನೆ ಬಹುತೇಕ ಶೂನ್ಯ
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಬಿಜೆಪಿ ಏಳಕ್ಕೆ ಏಳು ಸ್ಥಾನವನ್ನು ಗಳಿಸಿಕೊಂಡಿದ್ದು, ಅಂತೆಯೇ ಬೆಂಗಳೂರು ನಗರ ವ್ಯಾಪ್ತಿಯ ನಾಲ್ಕು ಸ್ಥಾನಗಳನ್ನು ತನ್ನ ತೆಕ್ಕೆಗೆ ಹಾಕಿಕೊಂಡಿದೆ. ಇನ್ನುಳಿದಂತೆ ಚೆನ್ನೈ, ಕೊಲ್ಕತ್ತಾ ಮತ್ತು ಮುಂಬೈನಲ್ಲಿ ಸ್ಥಳೀಯ ಪಕ್ಷಗಳು ಪ್ರಾಬಲ್ಯ ಮೆರೆದಿದ್ದು, ಅಲ್ಲಿ ಕಾಂಗ್ರೆಸ್ ಸಾಧನೆ ಅಷ್ಟಕ್ಕಷ್ಟೇ.
ಬಿಜೆಪಿ ಮಹಾನಗರ ಪ್ರದೇಶಗಳಲ್ಲಿ ಶೇ 44 ರಷ್ಟು ಮತಗಳಿಕೆ ಮಾಡಿಕೊಂಡಿದೆ. ಈ ಪ್ರಮಾಣ 2019 ರಲ್ಲಿ ಶೇ. 39 ರಷ್ಟಿತ್ತು ಎಂಬುದನ್ನು ಗಮನಿಸಬಹುದು. ಒಟ್ಟಾರೆ ಶೇ. 5 ರಷ್ಟು ಮತಗಳಿಗೆ ಪ್ರಮಾಣ ಹೆಚ್ಚಿಸಿಕೊಳ್ಳುವ ಜತೆಗೆ ಸ್ಥಾನಗಳನ್ನು ಹೆಚ್ಚಿಸಿಕೊಂಡಿದೆ.
ಕಾಂಗ್ರೆಸ್ ಸೋಲು ಕಂಡಿದ್ದರು ಕೂಡ ನಗರ ವ್ಯಾಪ್ತಿಯ ಮತಗಳಿಕೆಯಲ್ಲಿ ಸುಧಾರಣೆ ಕಂಡಿರುವುದು ಗಮನಿಸಬೇಕಾದ ಅಂಶ. ಮೆಟ್ರೋ ಸಿಟಿಗಳ ವ್ಯಾಪ್ತಿಯಲ್ಲಿ 30 ಲೋಕಸಭಾ ಕ್ಷೇತ್ರಗಳಿದ್ದು, ಅದರಲ್ಲಿ ಕಾಂಗ್ರೆಸ್ ಸ್ವತಂತ್ರವಾಗಿ 12 ಸ್ಥಾನಗಳಲ್ಲಿ ಮಾತ್ರವೇ ಸ್ಪರ್ಧೆ ಮಾಡಿತ್ತು. ಇನ್ನುಳಿದ ಕಡೆ ಇಂಡಿಯಾ ಒಕ್ಕೂಟದ ಇತರೆ ಪಕ್ಷಗಳು ಸ್ಪರ್ಧೆ ಮಾಡಿದ್ದವು.
ಕಾಂಗ್ರೆಸ್ ಸ್ಪರ್ಧೆ ಮಾಡಿದ್ದ 12 ಸ್ಥಾನಗಳಲ್ಲಿ ಶೇ. 36.4 ರಷ್ಟು ಮತಗಳಿಕೆ ಪಡೆದುಕೊಂಡಿದೆ. ಇದು ಕಳೆದ ಚುನಾವಣೆಗಿಂತ ಸುಧಾರಣೆ ಕಂಡಿರುವುದು ಕಾಂಗ್ರೆಸ್ ಪಾಲಿಗೆ ಸಮಾಧಾನಕರ ಸಂಗತಿ. 2019 ರಲ್ಲಿ ಕಾಂಗ್ರೆಸ್ ಶೇ. 28.7 ರಷ್ಟು ಮತಗಳನ್ನು ಪಡೆದುಕೊಂಡಿತ್ತು. ಈ ಸಲ ಮತಗಳಿಕೆಯಲ್ಲಿ ಶೇ. 8 ರಷ್ಟು ಗಣನೀಯ ಏರಿಕೆ ಮಾಡಿಕೊಂಡಿದೆ.
ಕಾಂಗ್ರೆಸ್ ನ ಉಚಿತ ಘೋಷಣೆಗಳು, ಬಿಜೆಪಿ ಸರಕಾರ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ನಗರ ಕೇಂದ್ರಿತ ಅಭಿವೃದ್ಧಿ ಆಯಾಮ ನಗರಿಗರು ಬಿಜೆಪಿ ಕಡೆಗೆ ವಾಲುವಂತೆ ಮಾಡಿವೆ. ಕಾಂಗ್ರೆಸ್ ಅಧಿಕಾರದಲ್ಲಿರುವ ಕಡೆ ಉಚಿತ ಯೋಜನೆ ಜಾರಿ ಮಾಡಿದ್ದು, ಅದರಿಂದ ದುಡಿಯುವವರ ಸಂಖ್ಯೆ ಕ್ಷೀಣಿಸುತ್ತದೆ ಎಂಬುದು ನಗರೀಕರ ಅಂಬೋಣ. ಇದನ್ನು ಮತರೂಪದಲ್ಲಿ ಜನ ಹೊರಹಾಕಿದ್ದಾರೆ.
ಇಂತಹ ಯೋಜನೆಗಳ ಜಾರಿಯಿಂದ ಸರಕಾರದ ಮೇಲೆ ಬೀಳುವ ಹೊರೆಯನ್ನು ನಗರೀಕರು ಕಟ್ಟುವ ತೆರಿಗೆಯಿಂದಷ್ಟೇ ಸರಿದೂಗಿಸಬೇಕು. ನಾವು ದುಡಿದು ಬಡವರನ್ನು ಸಾಕುವಂತೆ ಮಾಡುವುದೇ ಕಾಂಗ್ರೆಸ್ ಗುರಿ ಎಂಬುದು ನಗರಿಕರ ಆಲೋಚನೆ. ಹೀಗಾಗಿ, ಬಹುತೇಕ ಮೆಟ್ರೋ ನಗರಗಳಲ್ಲಿ ಕಾಂಗ್ರೆಸ್ ಗೆ ಹಿನ್ನಡೆಯಾಗುತ್ತದೆ ಎನ್ನಬಹುದು.
ಸಕಲ ಸವಲತ್ತು ಇರುವ ನಗರದ ಜನರಿಗೆ ದೇಶ ಪ್ರೇಮ, ಸೈನ್ಯ, ಸ್ಮಾರ್ಟ್ ಸಿಟಿ, ಸ್ವಚ್ಛ ಭಾರತದಂತಹ ವಿಚಾರಗಳು ಪ್ರಮುಖವೆನಿಸಿಕೊಳ್ಳುತ್ತವೆ. ಹೀಗಾಗಿ, ಬಿಜೆಪಿ ನಗರ ಪ್ರದೇಶದಲ್ಲಿ ಸಹಜವಾಗಿ ಮೇಲುಗೈ ಸಾಧಿಸುತ್ತಾ ಬಂದಿದೆ. ಆದರೆ, ಕಾಂಗ್ರೆಸ್ ಇದಕ್ಕೆ ತದ್ವಿರುದ್ಧ ದಿಕ್ಕಿನಲ್ಲಿ ಯೋಚನೆ ಮಾಡುವ ಪಕ್ಷವಾಗಿದ್ದು, ಇದರಿಂದಲೇ ನಗರ ಪ್ರದೇಶಗಳಲ್ಲಿ ಹಿನ್ನಡೆ ಅನುಭವಿಸುತ್ತಿದೆ ಎನ್ನಬಹುದು.

