ಸಿಎಂ, ಡಿಸಿಎಂ ಹುದ್ದೆ ವಿವಾದಕ್ಕೆ ತಾತ್ಕಾಲಿಕ ತಣ್ಣೀರು
ಸಿದ್ದು, ಡಿಕೆಶಿ ಒಪ್ಪಿದ ನಾಯಕನಿಗೆ ಕೆಪಿಸಿಸಿ ಅಧ್ಯಕ್ಷ ಪಟ್ಟು
ಬೆಂಗಳೂರು: ಬಿಜೆಪಿಗರ ಆಸೆಯಂತೆ ಲೋಕಸಭೆ ಚುನಾವಣೆ ನಂತರ ರಾಜ್ಯ ಕಾಂಗ್ರೆಸ್ ನಲ್ಲಿ ಬಣಜಗಳ ಆರಂಭವಾಗಿದೆ. ಅದರದನ್ನು ತಣಿಸಲು ಹೈಕಮಾಂಡ್ ಮೊದಲ ಹೆಜ್ಜೆಯನ್ನಿಟ್ಟಿದೆ.
ಬಿಜೆಪಿ ಲೋಕಸಭೆ ಚುನಾವಣೆ ಗೆ ಮೊದಲೇ ಕಾಂಗ್ರೆಸ್ ಸರಕಾರ ಮಹಾರಾಷ್ಟ್ರ ಮಾದರಿ ಪತನವಾಗುತ್ತೇ, ರಾಜ್ಯ ಕಾಂಗ್ರೆಸ್ ನಲ್ಲಿ ಶಿಂಧೆ, ಅಜಿತ್ ಪವಾರ್ ಗಳು ಸೃಷ್ಟಿಯಾಗ್ತಾರೆ ಎಂಬೆಲ್ಲ ಹೇಳಿಕೆಗಳನ್ನು ನೀಡುತ್ತಿದ್ದರು. ಇದೀಗ ಕಾಂಗ್ರೆಸ್ ನಾಯಕರ ಮಾತುಗಳು ಬಿಜೆಪಿಗರ ಆರೋಪವನ್ನು ಸತ್ಯ ಮಾಡಲು ಹೊರಟಂತಿವೆ.
ಸಮುದಾಯವಾರು ಡಿಸಿಎಂ ಸ್ಥಾನ ಕೊಡಬೇಕು ಎಂದು ಸತೀಶ್ ಜಾರಕಿಹೊಳಿ, ಕೆ.ಎನ್. ರಾಜಣ್ಣ, ಜಮೀರ್ ಅಮಹದ್ ಹೊತ್ತಿಸಿದ ಬೆಂಕಿ ಕಾಂಗ್ರೆಸ್ ಪಕ್ಷದ ಬುಡವನ್ನು ಸುಡಲು ಹೊರಟಿದೆ. ಇದನ್ನು ಆರಂಭದಲ್ಲೇ ಅರಿತ ಹೈಕಮಾಂಡ್ ತಣ್ಣೀರು ಹಾಕಿ ಬೆಂಕಿ ಶಮನಗೊಳಿಸುವ ಪ್ರಯತ್ನ ನಡೆಸಿದೆ.
ಸಿದ್ದರಾಮಯ್ಯ ಬಣದಿಂದ ಡಿಸಿಎಂ ವಿವಾದ ತಾರಕಕ್ಕೇರುತ್ತಿದ್ದಂತೆ ಒಕ್ಕಲಿಗ ಸ್ವಾಮೀಜಿಯೊಬ್ಬರು, ಸಿಎಂ ಬಾಂಬ್ ಹಾಕಿ ಭೀತಿ ಹುಟ್ಟಿಸಿದರು. ಮಾತಿನಂತೆ ಸಿಎಂ ಸ್ಥಾನವನ್ನೇ ಬಿಟ್ಟುಕೊಡಿ ಎನ್ನುತ್ತಿದ್ದಂತೆ ವಿವಾದ ತಾರಕಕ್ಕೇರಿತು. ಡಿಸಿಎಂ ವಿವಾದ ಸಿಎಂ ಬುಡಕ್ಕೆ ಬರುತ್ತಿದ್ದಂತೆ, ಡಿಸಿಎಂ, ಸಿಎಂ ವಿಚಾರ ಕೆಪಿಸಿಸಿ ಅಧ್ಯಕ್ಷ ಸ್ಥಾನದ ಕಡೆಗೆ ತಿರುಗಿತು. ಕೊನೆಗಿದೆಲ್ಲ ದೆಹಲಿ ಅಂಗಳ ತಲುಪಿತು.
ಇಂತಹದ್ದೇ ನಾಯಕರ ಒಳಜಗಳದಿಂದ ಇಡೀ ದೇಶದಲ್ಲಿ ಸೋತು ಸುಣ್ಣವಾಗಿ, ಈಗಷ್ಟೇ ಚೇತರಿಕೆ ಕಾಣುತ್ತಿರುವ ಕಾಂಗ್ರೆಸ್, ಇಂತಹದ್ದನ್ನು ಸಹಿಸಲು ಸಾಧ್ಯವಿಲ್ಲ ಎಂದು ಮಧ್ಯಪ್ರವೇಶ ಮಾಡಿದೆ. ಇದೆಲ್ಲ ವಿವಾದಗಳಿಗೆ ಸಂಧಾನ ಸೂತ್ರವೊಂದನ್ನು ಹೆಣೆದು ನಾಯಕರ ಬಾಯಿ ಮುಚ್ಚಿಸಿ ವಿವಾದ ತಣ್ಣಗಾಗಿಸಿದೆ.
ಸಿಎಂ,ಡಿಸಿಎಂ ಹುದ್ದೆ ವಿಚಾರ ಬಂದ್ !
ಸಿಎಂ ಸ್ಥಾನ, ಡಿಸಿಎಂ ಹುದ್ದೆಗಳ ಸೃಷ್ಟಿಯ ಪಕ್ಷದ ನಾಯಕರಾಡುವ ಮಾತುಗಳು ಅಪ್ರಸ್ತುತ. ಹೀಗಾಗಿ, ಇಂತಹ ಮಾತುಗಳಿಗೆ ಕಡಿವಾಣ ಹಾಕಬೇಕು ಎಂದು ಹೈಕಮಾಂಡ್ ತಾಕೀತು ಮಾಡಿದೆ. ಈ ವಿಚಾರ ಮಾತನಾಡಿ, ವಿವಾದ ಹುಟ್ಟುಹಾಕುವ ನಾಯಕರಿಗೆ ಎಚ್ಚರಿಕೆಯನ್ನು ನೀಡಿ, ಮುಂದೆ ಈ ವಿಚಾರವನ್ನು ಮಾತನಾಡಲೇಬಾರದು ಎಂದು ತಿಳಿಸಿದೆ. ಅಲ್ಲಿಗೆ ಡಿಸಿಎಂ ಮತ್ತು ಸಿಎಂ ಬದಲಾವಣೆ ವಿಚಾರ ಮುಗಿದ ಅಧ್ಯಾಯವಾಗಿದೆ.
ಕೆಪಿಸಿಸಿ ಅಧ್ಯಕ್ಷರ ಬದಲಾವಣೆ !
ಈ ನಡುವೆ ಇಂತಹ ಹೇಳಿಕೆ ಕೊಡುವ ನಾಯಕರ ಕಣ್ಣು ಕುಕ್ಕಿರುವುದು ಡಿಸಿಎಂ, ಕೆಪಿಸಿಸಿ ಅಧ್ಯಕ್ಷ ಸ್ಥಾನಗಳೆರಡನ್ನು ಇಟ್ಟುಕೊಂಡಿರುವ ಡಿಕೆಶಿ. ಹೀಗಾಗಿ, ಒಂದು ಹುದ್ದೆ ಪಾಲಿಸಿ ಅನುಸರಣೆಗೆ ಒತ್ತಡ ಹಾಕಿದ್ದಾರೆ. ಇದರ ಪರಿಣಾಮ ಕೆಪಿಸಿಸಿ ಅಧ್ಯಕ್ಷ ಸ್ಥಾನ ಬದಲಾವಣೆಗೆ ಹೈಕಮಾಂಡ್ ಒಪ್ಪಿದೆ ಎನ್ನಬಹುದು.
ಡಿಕೆಶಿ, ತಾಪಂ, ಜಿಪಂ ಹಾಗೂ ಬಿಬಿಎಂಪಿ ಚುನಾವಣೆವರೆಗೆ ತಮ್ಮಲ್ಲಿ ಅಧಿಕಾರ ಇರಬೇಕು ಎಂದು ಮನವರಿಕೆ ಮಾಡಿದ್ದಾರೆ. ಆದರೆ, ಸಿದ್ದರಾಮಯ್ಯ ಮತ್ತು ಡಿಕೆಶಿ ಒಪ್ಪುವ ನಾಯಕನನ್ನೇ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ತರುವ ಚಿಂತನೆಯಲ್ಲಿ ಹೈಕಮಾಂಡ್ ಇದೆ ಎಂದು ಕಾಂಗ್ರೆಸ್ ಮೂಲಗಳು ಹೇಳುತ್ತಿವೆ.