ಬೆಂಗಳೂರು: ನೈಸ್ ರಸ್ತೆ ಅಭಿವೃದ್ಧಿ ವೇಳೆ ಭೂಮಿ ನೀಡಿದ್ದ ಸಂತ್ರಸ್ತರಿಗೆ ಪರಿಹಾರ ಸಿಕ್ಕಿಲ್ಲ. ಟೌನ್ಶಿಪ್ ಕೂಡಾ ನಿರ್ಮಿಸಿಲ್ಲ. ಟೋಲ್ ದರ ಅಧಿಕವಾಗಿದ್ದು, ದ್ವಿಚಕ್ರ ವಾಹನಗಳಿಂದಲೂ ಟೋಲ್ ಸಂಗ್ರಹಿಸುತ್ತಿರುವುದು ಸರಿಯಾದ ಕ್ರಮವಲ್ಲ ಎಂದು ಪರಿಷತ್ನಲ್ಲಿ ಕಾಂಗ್ರೆಸ್ ಸದಸ್ಯ ರಾಮೋಜಿಗೌಡ ಆಕ್ರೋಶ ಹೊರಹಾಕಿದರು.
ಪ್ರಶ್ತೋತರ ಕಲಾಪದಲ್ಲಿ ಮಾತನಾಡಿದ ಅವರು, ನೈಸ್ ಕಂಪೆನಿ ಹಾಗೂ ಸರ್ಕಾರದ ನಡುವೆ ಗುತ್ತಿಗೆ ಅವಧಿ ಮುಗಿಯುತ್ತಾ ಬಂದರೂ ಭೂಮಿ ನೀಡಿದ ರೈತರಿಗೆ ಪರಿಹಾರ ದೊರೆತಿಲ್ಲ. ಷರತ್ತಿನಂತೆ ಟೌನ್ ಶಿಪ್ ನಿರ್ಮಾಣ ಮಾಡಿಲ್ಲ. ನೈಸ್ ರಸ್ತೆಯಲ್ಲಿ ಸಂಚರಿಸುವ ವಾಹನ ಸವಾರರಿಂದಲೂ ಟೋಲ್ ವಿಧಿಸಲಾಗುತ್ತಿದೆ. ಇದಲ್ಲದೆ ದ್ವಿಚಕ್ರ ವಾಹನಗಳಿಗೂ ಅಧಿಕ ಟೋಲ್ ಪಾವತಿಸಿಕೊಳ್ಳುವುದು ಸರಿಯಲ್ಲ ಎಂದರು.
ಇದಕ್ಕೆ ಉತ್ತರಿಸಿದ ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ, ಟೋಲ್ ಶುಲ್ಕ ದರ ಪರಿಶೀಲಿಸಲು ಕಳೆದ ವರ್ಷ ಸಚಿವ ಸಂಪುಟ ಸಭೆ ನಿರ್ಣಯದಂತೆ ಉಪ ಸಮಿತಿ ರಚಿಸಲಾಗಿದೆ. ಕಂಪನಿ ರಸ್ತೆ ನಿರ್ಮಾಣ ಮಾಡಿರುವ ಹೂಡಿಕೆ, ಬಳಸಿದ ಜಮೀನು, 2008ರಿಂದ ಈವರೆಗೂ ಟೋಲ್ ಮೂಲಕ ಸಂಗ್ರಹಿಸಿದ ಆದಾಯ ಸೇರಿ ಇನ್ನಿತರ ಅಂಶ ಒಳಗೊಂಡ ಪರಿಶೀಲಿಸಲು ರಚಿಸಲಾಗಿರುವ ಉಪ ಸಮಿತಿ ಸೂಚನೆಯಂತೆ ಟೆಂಡರ್ ಮುಖಾಂತರ ಸಮಾಲೋಚಕರನ್ನು ನೇಮಿಸಲಾಗಿದೆ. ಅಂತಿಮ ವರದಿ ಬಂದ ಬಳಿಕ ದ್ವಿಚಕ್ರ ವಾಹನಗಳಿಗೆ ಟೋಲ್ ರದ್ದು ಮಾಡಲು ಚಿಂತಿಸಲಾಗಿದೆ ಎಂದು ಹೇಳಿದರು.
ನೈಸ್ ರಸ್ತೆಯಲ್ಲಿ ಸಂಭವಿಸುತ್ತಿರುವ ಅಪಘಾತಗಳನ್ನು ತಗ್ಗಿಸಲು ಹಾಗೂ ವೇಗದ ಮಿತಿ ನಿಯಂತ್ರಿಸಲು ಬೆಂಗಳೂರು-ಮೈಸೂರು ರಸ್ತೆಯಲ್ಲಿ ಅಳವಡಿಸಿರುವಂತೆ ನೈಸ್ ರಸ್ತೆಯಲ್ಲೂ ಸಹ ಎಐ ಕ್ಯಾಮೆರಾಗಳನ್ನು ಅಳವಡಿಸಲು ಚರ್ಚಿಸಲಾಗಿದೆ. ಈಗಾಗಲೇ ಗುರುತಿಸಲಾಗಿರುವ 40 ಸ್ಥಳಗಳ ಪೈಕಿ ಎರಡು ಕಡೆಗಳಲ್ಲಿ ಎಐ ಕ್ಯಾಮೆರಾ ಅಳವಡಿಸಲಾಗಿದೆ ಎಂದು ಸಚಿವರು ಮಾಹಿತಿ ನೀಡಿದರು.

