ಹೊಸಕೋಟೆ: ನಿಧಿಗಾಗಿ ಮಗುವನ್ನು ಕೊಲ್ಲಲ್ಲು ಸಂಚು ರೂಪಿಸಿದ್ದ ಪ್ರಕರಣದ ಸಂಬಂಧ ಏಳು ಜನರ ವಿರುದ್ಧ ಸೂಲಿಬೆಲೆ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ.
ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಅನಿತಾ ಲಕ್ಷ್ಮಿ ಅವರು ನೀಡಿದ ದೂರಿನ ಅನ್ವಯ ಪೊಲೀಸರು, ಏಳು ಜನರ ವಿರುದ್ಧ ಎಫ್ಐಆರ್ ದಾಖಲಿಸಿಕೊಂಡು ವಿಚಾರಣೆ ಆರಂಭಿಸಿದ್ದಾರೆ. ಮಗುವನ್ನು ದತ್ತು ಪಡೆದಿದ್ದಿದ್ದೇವೆ ಎಂದು ಹೇಳಿದ್ದ ಇಮ್ರಾನ್, ನಜ್ಮಾಕೌಸರ್ ದಂಪತಿಗಳು, ರಾಮಪ್ಪ, ಮಂಜುಳಾ ಹಾಗೂ ಇತರರ ಮೇಲೆ ಪ್ರಕರಣ ದಾಖಲಾಗಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ಹೋಬಳಿಯ ಸೂಲಿಬೆಲೆಯಲ್ಲಿ ದೂರಿನ ಹಿನ್ನೆಲೆಯಲ್ಲಿ ರಕ್ಷಣಾಧಿಕಾರಿ ಅನಿತಾ ಲಕ್ಷ್ಮಿ ನೇತೃತ್ವದಲ್ಲಿ ದಾಳಿ ನಡೆಸಿ, ಮಗುವನ್ನು ರಕ್ಷಣೆ ಮಾಡಲಾಗಿತ್ತು. ಈ ವೇಳೆ ಮನೆಯಲ್ಲಿಯೇ ಗುಂಡಿ ತೋಡಿರುವುದು ಹಾಗೂ ಪೂಜಾ ಸಾಮಗ್ರಿಗಳು ಪತ್ತೆಯಾಗಿದ್ದವು.

ಮಗುವನ್ನು ವಶಕ್ಕೆ ಪಡೆದಿದ್ದ ರಕ್ಷಣಾಧಿಕಾರಿಗಳು ಇದೀಗ ಏಳು ಆರೋಫಿಗಳ ವಿರುದ್ಧ ದೂರು ನೀಡಿದ್ದಾರೆ. ಎಂಟು ತಿಂಗಳ ಪುಟ್ಟ ಮಗುವಿನ ಮೂಲ ತಾಯಿ ಮಂಜುಳಾ ಎಂಬುವವರಿAದ ಅನಧಿಕೃತವಾಗಿ ದತ್ತು ಪಡೆದಿದ್ದ ಆರೋಪಿಗಳು, ಪೂಜಾರಿಯೊಬ್ಬನ ಸಲಹೆಯಂತೆ ಬಲಿ ನೀಡಲು ಸಿದ್ಧತೆ ನಡೆಸಿದ್ದರು ಎನ್ನಲಾಗಿದೆ.
ಇದೀಗ ಪೊಲೀಸರು ಇಮ್ರಾನ್, ನಜ್ಮಾಕೌಸರ್ ವಶಕ್ಕೆ ಪಡೆದಿದ್ದು, ಮಗುವಿನ ಮೂಲ ತಾಯಿ ಮಂಜುಳಾ ಅವರನ್ನು ವಿಚಾರಣೆ ನಡೆಸುತ್ತಿದ್ದಾರೆ. ಉಳಿದ ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದು, ತನಿಖೆ ಮುಂದುವರಿದಿದೆ.

