ಸುದ್ದಿ

‘ನ್ಯಾಯಾಂಗದಲ್ಲಿ ಭ್ರಷ್ಟಾಚಾರ’ ಅಧ್ಯಾಯ ವಿವಾದ; ಕ್ಷಮೆಯಾಚಿಸಿ, ಪಠ್ಯ ಪುಸ್ತಕ ಹಿಂಪಡೆದ NCERT

Share It

ನವದೆಹಲಿ: ಸುಪ್ರೀಂ ಕೋರ್ಟ್​ ಆಕ್ರೋಶಕ್ಕೆ ಗುರಿಯಾಗಿದ್ದ ವಿವಾದಿತ 8ನೇ ತರಗತಿ ಸಮಾಜ ವಿಜ್ಞಾನ ಪಠ್ಯಪುಸ್ತಕದ “ನ್ಯಾಯಾಂಗದಲ್ಲಿ ಭ್ರಷ್ಟಾಚಾರ” ಅಧ್ಯಯನ ವಿಚಾರ ಕುರಿತಾಗಿ ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿ (NCERT) ಸಾರ್ವಜನಿಕವಾಗಿ ಕ್ಷಮೆ ಕೋರಿ ಇಡೀ ಪಠ್ಯಪುಸ್ತಕವನ್ನು ಹಿಂಪಡೆದಿದೆ.

ಎನ್​ಸಿಇಆರ್​ಟಿ 8ನೇ ತರಗತಿ ಸಮಾಜ ವಿಜ್ಞಾನ ಪಠ್ಯಪುಸ್ತಕದಲ್ಲಿ ನ್ಯಾಯಾಂಗದಲ್ಲಿ ಭ್ರಷ್ಟಾಚಾರ ಅಧ್ಯಯನದಲ್ಲಿ ಭ್ರಷ್ಟಾಚಾರ, ಬೃಹತ್ ಪ್ರಮಾಣದ ಪ್ರಕರಣಗಳು ಬಾಕಿ ಸೇರಿ ನ್ಯಾಯಾಧೀಶರ ಕೊರತೆ, ನ್ಯಾಯಾಂಗ ವ್ಯವಸ್ಥೆ ಎದುರಿಸುತ್ತಿರುವ ಸವಾಲುಗಳ ವಿಚಾರಗಳನ್ನು ಸೇರಿಸಲಾಗಿತ್ತು. ಈ ವಿಚಾರ ಕುರಿತು ವಿವಾದ ಉಂಟಾಗಿ, ಸಾಕಷ್ಟು ಆಕ್ರೋಶ ವ್ಯಕ್ತವಾಗಿತ್ತು. ಪ್ರಧಾನಿ ಮೋದಿ ಅವರು ಕೂಡ ಈ ಬಗ್ಗೆ ವಿಷಾದ ವ್ಯಕ್ತಪಡಿಸಿದ್ದರು.

ಎನ್​ಸಿಇಆರ್​ಟಿಯಲ್ಲಿ ಪ್ರಕಟಿಸಲಾಗಿದ್ದ ಈ ವಿಷಯದ ಕುರಿತು ಎನ್‌ಸಿಇಆರ್‌ಟಿ ನಿರ್ದೇಶಕರು ಮತ್ತು ಸದಸ್ಯರು ಕ್ಷಮೆಯಾಚಿಸುತ್ತಾರೆ. ಈ ಅಧ್ಯಯನ ಇದೀಗ ಪಠ್ಯದಲ್ಲಿ ಲಭ್ಯವಿಲ್ಲ ಎಂದು ಎನ್​ಸಿಇಆರ್​ಟಿ ಸಾರ್ವಜನಿಕವಾಗಿ ಕ್ಷಮೆ ಕೋರಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​ ಮಾಡಿದೆ.

ಹಿರಿಯ ವಕೀಲ ಕಪಿಲ್ ಸಿಬಲ್, ಅಭಿಷೇಕ್ ಸಿಂಘ್ವಿ ಅವರು ತುರ್ತು ಪರಿಗಣನೆಗೆ ವಿಷಯವನ್ನು ಪ್ರಸ್ತಾಪಿಸಿದ ನಂತರ ಸುಪ್ರೀಂ ಕೋರ್ಟ್​ ಸಿಜೆಐ ಸೂರ್ಯ ಕಾಂತ್ ಮತ್ತು ನ್ಯಾಯಮೂರ್ತಿಗಳಾದ ಜೋಯ್ಮಲ್ಯ ಬಾಗ್ಚಿ ಮತ್ತು ವಿಪುಲ್ ಎಂ. ಪಂಚೋಲಿ ಅವರನ್ನು ಒಳಗೊಂಡ ತ್ರಿಸದಸ್ಯ ಪೀಠವು ಎನ್‌ಸಿಇಆರ್‌ಟಿ ಪಠ್ಯಪುಸ್ತಕಗಳಲ್ಲಿ ನ್ಯಾಯಾಂಗದ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ವಿರುದ್ಧ ಸ್ವಯಂ ಪ್ರೇರಿತವಾಗಿ ವಿಚಾರಣೆಗೆ ಕೈಗೆತ್ತಿಕೊಂಡಿತು.

ಈ ವಿಚಾರವಾಗಿ ಕೇಂದ್ರ ಸರ್ಕಾರದ ವಿರುದ್ಧ ಸುಪ್ರೀಂ ಕೋರ್ಟ್​ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಇದು ಆಳವಾಗಿ ಬೇರೂರಿರುವ ಪಿತೂರಿ ಮತ್ತು ಉತ್ತಮವಾಗಿ ಯೋಜಿಸಿರುವ ಕೃತ್ಯ ಎಂದು ಕರೆದಿತ್ತು. ಆನ್‌ಲೈನ್‌ನಲ್ಲಿ ಲಭ್ಯವಿರುವ ಸಂಬಂಧಿತ ವಿಭಾಗದ ಪಿಡಿಎಫ್​ ಆವೃತ್ತಿ ರದ್ದು ಮಾಡುವಂತೆ ಸರ್ಕಾರಕ್ಕೆ ಸೂಚನೆ ನೀಡಿತ್ತು. ನ್ಯಾಯಾಲಯವು ಈ ವಿಷಯದ ಬಗ್ಗೆ ಆಳವಾದ ತನಿಖೆಗೆ ಆದೇಶಿಸಬಹುದಾಗಿದೆ ಎಂದು ಸಿಜೆಐ ತಿಳಿಸಿದ್ದರು.

ಈ ಕುರಿತು ಸರ್ಕಾರ ತೀವ್ರ ಅಸಮಾಧಾನ ಮತ್ತು ಕಳವಳ ವ್ಯಕ್ತಪಡಿಸಿತ್ತು. ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಮಾತನಾಡಿ, ಈ ವಿಚಾರದ ಹೊಣೆಗಾರಿಕೆ ಸರಿಪಡಿಸುವುದಾಗಿ ಮತ್ತು ಪಠ್ಯ ರಚಿಸುವಲ್ಲಿ ಭಾಗಿಯಾಗಿರುವವರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದರು.


Share It

You cannot copy content of this page