ಅಪರಾಧ ಸಿನಿಮಾ ಸುದ್ದಿ

ಪವಿತ್ರಾ ಗೌಡಗೆ ಮನೆಯೂಟ ಕುರಿತು ನ್ಯಾಯಾಲಯದ ಸ್ಪಷ್ಟ ಸೂಚನೆ; ಜೈಲು ಆಡಳಿತಕ್ಕೆ ಕಟ್ಟುನಿಟ್ಟಿನ ನಿರ್ದೇಶನ

Share It

ಬೆಂಗಳೂರು : ರಾಜ್ಯಾದ್ಯಂತ ಗಮನ ಸೆಳೆದಿರುವ ಈ ಪ್ರಕರಣದ ವಿಚಾರಣೆ ಮುಂದುವರಿದಿರುವ ನಡುವೆಯೇ, ಪವಿತ್ರಾ ಗೌಡ ಅವರ ಆಹಾರ ಸಂಬಂಧಿತ ಮನವಿಗೆ ನ್ಯಾಯಾಲಯ ತೀರ್ಮಾನ ನೀಡಿದೆ.

ಜೈಲಿನ ಊಟ ಸೇವಿಸಿದ ಬಳಿಕ ದೇಹದಲ್ಲಿ ಅಲರ್ಜಿಯ ಲಕ್ಷಣಗಳು ಕಾಣಿಸಿಕೊಂಡಿವೆ ಎಂಬ ಆರೋಪದ ಹಿನ್ನೆಲೆ, ಆರೋಗ್ಯದ ಅಂಶವನ್ನು ಪರಿಗಣಿಸಿ ವಾರಕ್ಕೆ ಒಮ್ಮೆ ಮನೆಯೂಟ ನೀಡುವಂತೆ ಕೋರ್ಟ್ ಜೈಲು ಆಡಳಿತಕ್ಕೆ ಆದೇಶಿಸಿದೆ. ಲಭ್ಯವಿರುವ ಮಾಹಿತಿಯಂತೆ, ಪವಿತ್ರಾ ಗೌಡ, ನಾಗರಾಜ್ ಹಾಗೂ ಲಕ್ಷ್ಮಣ್ ಅವರಿಗೆ ವಾರಕ್ಕೊಮ್ಮೆ ಮಾತ್ರ ಮನೆಯೂಟ ಸವಿಯಲು ಅವಕಾಶ ನೀಡಲಾಗಿದೆ.

ಆದರೆ ಆರೋಗ್ಯದಲ್ಲಿ ಗಂಭೀರ ಸಮಸ್ಯೆಗಳು ಕಂಡುಬಂದರೆ, ವೈದ್ಯರ ಸಲಹೆಯ ಆಧಾರದ ಮೇಲೆ ಹೆಚ್ಚುವರಿ ಸೌಲಭ್ಯ ನೀಡುವ ಬಗ್ಗೆ ಪರಿಗಣಿಸಬಹುದು ಎಂದು ಕೋರ್ಟ್ ಸ್ಪಷ್ಟಪಡಿಸಿದೆ. ಈ ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕೆಂದು ಜೈಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಪವಿತ್ರಾ ಗೌಡ ಪರ ವಕೀಲ ನಾರಾಯಣಸ್ವಾಮಿ ಅವರು, ಜೈಲಿನ ಆಹಾರವು ಆರೋಗ್ಯಕ್ಕೆ ತೊಂದರೆ ಉಂಟುಮಾಡುತ್ತಿದೆ ಎಂದು ವಾದಿಸಿ, ಕೆಲವರಿಗೆ ಮನೆಯೂಟದ ಸೌಲಭ್ಯ ಇರುವುದನ್ನೂ ಕೋರ್ಟ್ ಗಮನಕ್ಕೆ ತಂದರು.

ನ್ಯಾಯಾಲಯದ ಹಿಂದಿನ ಸೂಚನೆಗಳಿದ್ದರೂ ಕೂಡ ಪವಿತ್ರಾ ಗೌಡ ಅವರಿಗೆ ಮನೆಯೂಟ ನೀಡಲಾಗಿಲ್ಲ ಎಂಬ ಅಸಮಾಧಾನವನ್ನೂ ಅವರು ವ್ಯಕ್ತಪಡಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಜೈಲು ಅಧಿಕಾರಿಗಳು, ಜೈಲಿನಲ್ಲಿ ಸಾವಿರಾರು ಕೈದಿಗಳಿದ್ದು ಎಲ್ಲರಿಗೂ ಸಮಾನ ಗುಣಮಟ್ಟದ ಆಹಾರ ಒದಗಿಸಲಾಗುತ್ತಿದೆ ಎಂದು ಹೇಳಿದರು. ಒಬ್ಬರಿಗೆ ವಿಶೇಷ ಸೌಲಭ್ಯ ನೀಡಿದರೆ ಇತರ ಕೈದಿಗಳಿಂದಲೂ ಇದೇ ರೀತಿಯ ಬೇಡಿಕೆಗಳು ಬರಲಿವೆ; ಇದು ಜೈಲು ಶಿಸ್ತು ಹಾಗೂ ಭದ್ರತೆ ದೃಷ್ಟಿಯಿಂದ ಸವಾಲಾಗುತ್ತದೆ ಎಂದು ಅವರು ಕೋರ್ಟ್‌ಗೆ ತಿಳಿಸಿದರು.

ಎರಡೂ ಪಕ್ಷಗಳ ವಾದಗಳನ್ನು ಪರಿಶೀಲಿಸಿದ 57ನೇ ಸೆಷನ್ಸ್ ಕೋರ್ಟ್, ಕೊನೆಗೆ ವಾರಕ್ಕೊಮ್ಮೆ ಮನೆಯೂಟಕ್ಕೆ ಮಾತ್ರ ಅನುಮತಿ ನೀಡುವಂತೆ ಆದೇಶ ಹೊರಡಿಸಿದೆ.

ವಿಡಿಯೋ ಕಾನ್ಫರೆನ್ಸ್ ಮೂಲಕ ಹಾಜರಿ: ಈ ಪ್ರಕರಣದ ಮುಂದಿನ ವಿಚಾರಣೆಯನ್ನು ನ್ಯಾಯಾಲಯ ನಾಳೆಗೆ ಮುಂದೂಡಿದೆ. ಜೈಲಿನಲ್ಲಿ ಇರುವ ನಟ ದರ್ಶನ್, ಪವಿತ್ರಾ ಗೌಡ ಸೇರಿ ಏಳು ಆರೋಪಿಗಳು ವಿಡಿಯೋ ಕಾನ್ಫರೆನ್ಸ್ ಮೂಲಕ ಕೋರ್ಟ್ ಮುಂದೆ ಹಾಜರಾದರೆ, ಉಳಿದ ಹತ್ತು ಮಂದಿ ಖುದ್ದಾಗಿ ನ್ಯಾಯಾಲಯಕ್ಕೆ ಹಾಜರಾಗಿದ್ದರು. ಜತೆಗೆ, ಆರೋಪಿ ಪ್ರದೂಷ್ ಅವರು ತಮ್ಮ ತಂದೆಯ ತಿಥಿ ಕಾರ್ಯದ ಕಾರಣ ಜನವರಿ 17ರಿಂದ 22ರವರೆಗೆ ಮಧ್ಯಂತರ ಜಾಮೀನು ಕೋರಿ ಸಲ್ಲಿಸಿರುವ ಅರ್ಜಿ ವಿಚಾರಣೆಯೂ ಮುಂದಿನ ದಿನ ನಡೆಯಲಿದೆ.


Share It

You cannot copy content of this page