ಬೆಂಗಳೂರು: ಎಸ್ಐಟಿ ತನಿಖೆಗೆ ಸಹಕರಿಸದೆ ತಲೆಮರೆಸಿಕೊಂಡಿರುವ ಭವಾನಿ ರೇವಣ್ಣ ವಿರುದ್ಧ ನ್ಯಾಯಾಲಯ ವಾರಂಟ್ ಜಾರಿ ಮಾಡಿ ಆದೇಶ ಹೊರಡಿಸಿದೆ.
ಭವಾನಿರೇವಣ್ಣಗೆ ವಿಚಾರಣೆಗೆ ಹಾಜರಾಗುವಂತೆ ಎಸ್ಐಟಿ ಮೂರು ಬಾರಿ ನೊಟೀಸ್ ನೀಡಿತ್ತು. ಆದರೆ, ಭವಾನಿ, ವಿಚಾರಣೆ ತಪ್ಪಿಸಿಕೊಂಡು ಓಡಾಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಅವರ ಬಂಧನಕ್ಕೆ 42 ನೇ ಎಸಿಎಂಎಂ ನ್ಯಾಯಾಲಯ ಬಂಧನದ ವಾರಂಟ್ ಜಾರಿಮಾಡಿದೆ.
ಪ್ರಜ್ವಲ್ ರೇವಣ್ಣನ ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆಯನ್ನು ಕೆ.ಆರ್. ನಗರದಲ್ಲಿ ಅಪಹರಣ ಮಾಡಿ ಕೂಢಿಟ್ಟ ಪ್ರಕರಣದಲ್ಲಿ ಭವಾನಿ ಪ್ರಮುಖ ಆರೋಪಿಯಾಗಿದ್ದಾರೆ. ಹೀಗಾಗಿ, ವಿಚಾರಣೆಗೆ ಹಾಜರಾಗುವಂತೆ ಎಸ್ ಐಟಿ ನೊಟೀಸ್ ನೀಡಿತ್ತು. ಆದರೆ, ಅವರು ವಿಚಾರಣೆಗೆ ಹಾಜರಾಗದೆ ಕಳ್ಳಾಟ ಆಡುತ್ತಿದ್ದರು.

ಈ ನಡುವೆ ಭವಾನಿ ರೇವಣ್ಣ ನಿರೀಕ್ಷಣಾ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದು, ನ್ಯಾಯಾಲಯ ನಿರೀಕ್ಷಣಾ ಜಾಮೀನು ಅರ್ಜಿ ತಿರಸ್ಕರಿಸಿತ್ತು. ಹೀಗಾಗಿ, ಭವಾನಿ ರೇವಣ್ಣ ಎಸ್ಐಟಿ ಮುಂದೆ ಹಾಜರಾಗದೆ, ತಪ್ಪಿಸಿಕೊಂಡಿದ್ದಾರೆ. ಎಸ್ಐಟಿ ಪೊಲೀಸರು ಈಗಾಗಲೇ, ಅವರ ಸಂಬಂಧಿಕರು, ಆಪ್ತರ ಮನೆಗಳನ್ನು ತಡಕಾಡಿದೆ. ಇದೀಗ ನ್ಯಾಯಾಲಯದ ವಾರಂಟ್ ಜಾರಿಯಾಗಿದ್ದು, ಅವರ ಬಂಧನಕ್ಕೆ ಸಿದ್ಧತೆ ನಡೆದಿದೆ.
ಭವಾನಿ ರೇವಣ್ಣ ಬಂಧನವಾದರೆ, ಇಡೀ ರೇವಣ್ಣ ಕುಟುಂಬ ಜೈಲು ಪಾಲಾದಂತಾಗುತ್ತದೆ. ಈಗಾಗಲೇ ರೇವಣ್ಣ ಜೈಲು ಸೇರಿ ಜಾಮೀನಿನ ಮೇಲೆ ಹೊರಗೆ ಬಂದಿದ್ದಾರೆ. ಪ್ರಜ್ವಲ್ ರೇವಣ್ಣನನ್ನು ಬಂಧಿಸಿ, ಎಸ್ಐಟಿ ಕಸ್ಟಡಿಯಲ್ಲಿ ವಿಚಾರಣೆ ನಡೆಸಲಾಗುತ್ತಿದೆ. ಇದೀಗ ಭವಾನಿ ರೇವಣ್ಣ ಬಂಧನವಾದರೆ, ಅವರ ಕುಟುಂಬವಿಡೀ ಜೈಲು ಸೇರಿದಂತಾಗುತ್ತದೆ.

