ಬೆಂಗಳೂರು: ಅರಸೀಕೆರೆ ಎಕ್ಸ್ಪ್ರೆಸ್ ಎಂದೇ ಖ್ಯಾತರಾಗಿದ್ದ ಟೀಂ ಇಂಡಿಯಾ ಮತ್ತು ಕರ್ನಾಟಕ ರಣಜಿ ತಂಡದ ಮಾಜಿ ಕ್ರಿಕೆಟಿಗ ಡೇವಿಡ್ ಜಾನ್ಸನ್ (52) ಆತ್ಮಹತ್ಯೆ ಮಾಡಿಕೊಂಡಿದ್ದು, ಕ್ರಿಕೆಟ್ ಜಗತ್ತಿನಲ್ಲಿ ಆಘಾತ ಉಂಟಾಗಿದೆ.
ಇಂದು ಗುರುವಾರ ಬೆಳಗ್ಗೆ 10:30 ರ ಸುಮಾರಿಗೆ ಬೆಂಗಳೂರಿನ ಹೆಣ್ಣೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ಕೊತ್ತನೂರು ಬಳಿಯ ಬಹುಮಹಡಿ ಕಟ್ಟಡದಿಂದ ಜಿಗಿದು ಡೇವಿಡ್ ಜಾನ್ಸನ್ ಅವರು ಆತ್ಮಹತ್ಯೆ ಮಾಡಿಕೊಂಡರು ಎಂದು ತಿಳಿದುಬಂದಿದೆ.
ಕೊತ್ತನೂರಿನ ಬಹುಮಹಡಿ ಕಟ್ಟಡದ 3ನೇ ಅಂತಸ್ತಿನಿಂದ ಜಿಗಿದು ಡೇವಿಡ್ ಜಾನ್ಸನ್ ಅವರು ಆತ್ಮಹತ್ಯೆ ಮಾಡಿಕೊಂಡರು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಮೃತ ಡೇವಿಡ್ ಜಾನ್ಸನ್ ಅವರು ಈ ಹಿಂದೆ ಹೊಟ್ಟೆ ನೋವು, ಬೇಧಿ ಹಾಗೂ ಇನ್ನಿತರ ಅನಾರೋಗ್ಯ ಸಮಸ್ಯೆಗಳಿಂದ ನಿತ್ರಾಣಗೊಂಡಿದ್ದರು.
ಹಣಕಾಸಿನ ಮುಗ್ಗಟ್ಟಿನಿಂದ ತೊಂದರೆಗೀಡಾದಾಗ ಡೇವಿಡ್ ಜಾನ್ಸನ್ ಅವರಿಗೆ ಹಲವಾರು ಕ್ರಿಕೆಟಿಗರು ಸಹಾಯರ್ಥಕ ಪಂದ್ಯ ಏರ್ಪಡಿಸಿ ನೆರವು ನೀಡಿದ್ದರು.
ಇಷ್ಟಾದರೂ ಇತ್ತೀಚೆಗಿನ ಮದ್ಯಪಾನ ಚಟಕ್ಕೆ ಅಂಟಿಕೊಂಡಿದ್ದರು. ಮೃತ ಕ್ರಿಕೆಟಿಗ ಡೇವಿಡ್ ಜಾನ್ಸನ್ ಅವರು ಪತ್ನಿ ಮತ್ತು 3 ಮಕ್ಕಳನ್ನು ಅಗಲಿದ್ದಾರೆ.
ಇತ್ತೀಚೆಗೆ ಕೆಪಿಎಲ್ ರಾಜ್ಯ ಮಟ್ಟದ ಟಿ-20 ಕ್ರಿಕೆಟ್ ಲೀಗ್ ನಲ್ಲಿ ಬೆಳಗಾವಿ ಪ್ಯಾಂಥರ್ಸ್ ತಂಡಕ್ಕೆ ತರಬೇತುದಾರನಾಗಿ ಡೇವಿಡ್ ಜಾನ್ಸನ್ ಉತ್ತಮ ತರಬೇತಿ ನೀಡಿದ್ದರು. ಇದಕ್ಕಾಗಿ ಹಿಂದೆ ಆಡಿದ್ದ ರಣಜಿ ಕ್ರಿಕೆಟ್ ಮತ್ತು ಐಪಿಎಲ್ ಪಂದ್ಯಾವಳಿಯ ಅನುಭವವನ್ನು ಕಿರಿಯ ಕ್ರಿಕೆಟಿಗರಿಗೆ ಧಾರೆ ಎರೆದಿದ್ದರು.
ಡೇವಿಡ್ ಜಾನ್ಸನ್ ಅವರು ಮೊದಲು ದೇಶೀಯ ಕ್ರಿಕೆಟ್ ನ ರಣಜಿ ಟ್ರೋಫಿ ಪಂದ್ಯಾವಳಿಯಲ್ಲಿ ಕರ್ನಾಟಕ ತಂಡಕ್ಕೆ ವೇಗದ ಬೌಲರ್ ಆಗಿ ಆಟ ಶುರು ಮಾಡಿದರು.ವರಣಜಿ ಟ್ರೋಫಿಯಲ್ಲಿ ಕೇರಳ ವಿರುದ್ಧ ಆಡಿ ಒಂದು ಇನಿಂಗ್ಸ್ ನ ಎಲ್ಲಾ 10 ವಿಕೆಟ್ ಗಳನ್ನು ಪಡೆದು ಅರಸೀಕೆರೆ ಎಕ್ಸ್ಪ್ರೆಸ್ ಎಂದೇ ರಾಷ್ಟ್ರ ಮಟ್ಟದಲ್ಲಿ ಖ್ಯಾತಿ ಗಳಿಸಿದರು.
ನಂತರ ಭಾರತ ತಂಡಕ್ಕಾಗಿ ಮಧ್ಯಮ ವೇಗದ ಬೌಲರ್ ಆಗಿ ಡೇವಿಡ್ ಜಾನ್ಸನ್ 2 ಟೆಸ್ಟ್ ಪಂದ್ಯಗಳನ್ನು ಆಡಿ 3 ವಿಕೆಟ್ ಗಳನ್ನು ಗಳಿಸಿದ್ದರು. 1996ರ ಅಕ್ಟೋಬರ್ 10 ರಂದು ವೇಗದ ಬೌಲರ್ ಜಾವಗಲ್ ಶ್ರೀನಾಥ್ ಅನುಪಸ್ಥಿತಿಯಲ್ಲಿ ಬದಲಿ ವೇಗದ ಬೌಲರ್ ಆಗಿ ಆಸ್ಟ್ರೇಲಿಯಾ ವಿರುದ್ಧ ಟೀಂ ಇಂಡಿಯಾಗೆ ಆಡಿದ್ದರು.
ಆ ಪಂದ್ಯದಲ್ಲಿ ಆಸ್ಟ್ರೇಲಿಯಾದ ಬ್ಯಾಟ್ಸ್ ಮನ್ ಮೈಕಲ್ ಸ್ಲಾಟರ್ ಅವರನ್ನು ಔಟ್ ಮಾಡಿದ್ದರು.
ಬಳಿಕ 1996ರ ಡಿಸೆಂಬರ್ 26 ರಂದು ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಪರ ವೇಗದ ಬೌಲರ್ ಆಗಿ ಆಡಿದ್ದರು. ಹೀಗೆ ಟೀಂ ಇಂಡಿಯಾ ಪರ 2 ಟೆಸ್ಟ್ ಪಂದ್ಯಗಳಲ್ಲಿ 3 ವಿಕೆಟ್ ಪಡೆದಿದ್ದರು.
ಡೇವಿಡ್ ಜಾನ್ಸನ್ ಆತ್ಮಹತ್ಯೆ ಮಾಡಿಕೊಂಡಿರುವುದು ಮಾಜಿ ಕ್ರಿಕೆಟಿಗರಿಗೆ ಆಘಾತ ಉಂಟುಮಾಡಿದೆ.
ಸಂತಾಪ ಸೂಚಿಸಿದ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಹಾಗೂ ಟೀಂ ಇಂಡಿಯಾ ಮಾಜಿ ಸ್ಪಿನ್ ದಿಗ್ಗಜ ಅನಿಲ್ ಕುಂಬ್ಳೆ ಸೇರಿದಂತೆ ಅನೇಕ ಮಾಜಿ ಕ್ರಿಕೆಟ್ ಆಟಗಾರರು ಡೇವಿಡ್ ಜಾನ್ಸನ್ ಅವರ ಈ ಅನಿರೀಕ್ಷಿತ ಸಾವಿಗೆ ಮಾಜಿ ಸಂತಾಪ ಸೂಚಿಸಿದ್ದಾರೆ.
ನನ್ನ ಕ್ರಿಕೆಟ್ ಸಹೋದ್ಯೋಗಿ ಡೇವಿಡ್ ಜಾನ್ಸನ್ ಅವರ ನಿಧನವನ್ನು ಕೇಳಿ ದುಃಖವಾಯಿತು. ಅವರ ಕುಟುಂಬಕ್ಕೆ ಹೃತ್ಪೂರ್ವಕ ಸಂತಾಪ ಎಂದು ಅನಿಲ್ ಕುಂಬ್ಳೆ ಎಕ್ಸ್ನಲ್ಲಿ ಸಂತಾಪ ಸೂಚಿಸಿ ಪೋಸ್ಟ್ ಹಂಚಿಕೊಂಡಿದ್ದಾರೆ.
ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಕೂಡ ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದು, “ಮಾಜಿ ಭಾರತೀಯ ವೇಗದ ಬೌಲರ್ ಡೇವಿಡ್ ಜಾನ್ಸನ್ ಅವರ ಕುಟುಂಬ ಮತ್ತು ಸ್ನೇಹಿತರಿಗೆ ಸಂತಾಪಗಳು. ಕ್ರಿಕೆಟ್ಗೆ ಅವರ ಕೊಡುಗೆ ಸದಾ ಸ್ಮರಣೀಯ” ಎಂದು ಹೇಳಿದ್ದಾರೆ.
ಡೇವಿಡ್ ಜಾನ್ಸನ್ ಅವರ ನಿಧನದಿಂದ ದುಃಖವಾಗಿದೆ. ಅವರ ಕುಟುಂಬ ಮತ್ತು ಆತ್ಮೀಯರಿಗೆ ದೇವರು ಶಕ್ತಿ ನೀಡಲಿ ಎಂದು ಟೀಂ ಇಂಡಿಯಾದ ಭಾವೀ ಕೋಚ್
ಗೌತಮ್ ಗಂಭೀರ್ ಸಂತಾಪ ವ್ಯಕ್ತಪಡಿಸಿದ್ದಾರೆ.
ಇನ್ನು ರಾಜ್ಯದ ಮಾಜಿ ಸಚಿವ ಅಶ್ವತ್ಥನಾರಾಯಣ ಕೂಡ ಮಾಜಿ ಕ್ರಿಕೆಟಿಗನ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಅವರು, “ಭಾರತದ ಮಾಜಿ ಕ್ರಿಕೆಟರ್, ಕನ್ನಡಿಗ ಡೇವಿಡ್ ಜಾನ್ಸನ್ ಅವರು ಆತ್ಮಹತ್ಯೆಗೆ ಶರಣಾದ ಸಂಗತಿ ತಿಳಿದು ಮನಸ್ಸಿಗೆ ನೋವಾಯಿತು.
ಅಂದಿನ ಸಮಯದಲ್ಲಿಯೇ ಗಂಟೆಗೆ ಸುಮಾರು 157.8 ವೇಗದಲ್ಲಿ ಬೌಲಿಂಗ್ ಮಾಡುವ ಸಾಮರ್ಥ್ಯ ಹೊಂದಿದ್ದ ಅವರು ಹಾಸನ ಜಿಲ್ಲೆ ಅರಸಿಕೆರೆಯವರು. ಮೃತರ ಆತ್ಮಕ್ಕೆ ಸದ್ಗತಿ ಕೋರಿ ಪ್ರಾರ್ಥಿಸುವೆ. ಓಂ ಶಾಂತಿ.” ಎಂದು ದುಃಖ ವ್ಯಕ್ತಪಡಿಸಿದ್ದಾರೆ.

