ಮುಂಬೈ: ಜೂನ್ 29 ರಂದು ವಿಶ್ವ ಕಪ್ ಗೆದ್ದು 4 ದಿನಗಳ ಬಳಿಕ ರಾಷ್ಟ್ರ ರಾಜಧಾನಿಯಾದ ನವದೆಹಲಿಗೆ ರೋಹಿತ್ ಪಡೆ ಬಂದಿಳಿದಿತ್ತು.ನಂತರ ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ಅಧಿಕೃತ ನಿವಾಸಕ್ಕೆ ಆಹ್ವಾನಿಸಿ ವಿಶೇಷ ಆತಿಥ್ಯ ನೀಡಿ ಟೀಮ್ ಇಂಡಿಯಾದ ಆಟಗಾರರಿಗೆ ಅಭಿನಂದನೆ ಸಲ್ಲಿಸಿದರು.
ಮುಂಬೈಗೆ ಬಂದಿಳಿದ ರೋಹಿತ್ ಪಡೆ ಮರೀನಾ ಡ್ರೈವ್ ನಿಂದ ವಾಂಖೆಡೆ ಸ್ಟೇಡಿಯಂ ಬಳಿಗೆ 2 ಕಿಲೋಮೀಟರ್ ದೂರದ ಪೆರೇಡ್ ನಲ್ಲಿ ಭಾಗವಹಿಸಿತ್ತು.ಅಲ್ಲಿಗಾಗಲೇ ತಾಯಿ ನಾಡಿಗೆ ವಿಶ್ವಕಪ್ ತಗೆದುಕೊಂಡು ಬಂದ ವೀರರನ್ನು ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳು ಕೈಯಲ್ಲಿ ರಾಷ್ಟಧ್ವಜ ಹಿಡಿದು ಬಂದು ಸ್ವಾಗತಿಸಿ ಅಭಿನಂದಿಸಿದರು.
ವಿಕ್ಟರಿ ಪೆರೇಡ್ ನಲ್ಲಿ ಟ್ರೊಫಿಯನ್ನು ಹಿಡಿದು ರೋಹಿತ್ ಶರ್ಮ ಮತ್ತು ವಿರಾಟ್ ಕೊಹ್ಲಿ ಸಂಭ್ರಮಿಸಿದರು. ನಂತರ ವಾಂಖೆಡೆ ಸ್ಟೇಡಿಯಂನಲ್ಲಿ ಬಿಸಿಸಿಐಯಿಂದ ಆಟಗಾರರಿಗೆ ಸನ್ಮಾನಿಸಿ ಬರೋಬ್ಬರಿ 125 ಕೋಟಿ ರೂಪಾಯಿಗಳ ಬೃಹತ್ ಮೊತ್ತವನ್ನು ಉಡುಗೊರೆಯಾಗಿ ನೀಡಲಾಯಿತು.
ನಂತರ ಮಾತನಾಡಿದ ತಂಡದ ನಾಯಕ ರೋಹಿತ್ ಶರ್ಮ, ಈ ಗೆಲುವಿಗಾಗಿ ನಮ್ಮಷ್ಟೇ ಅಭಿಮಾನಿಗಳೂ ಸಹ ತುಡಿತ ಹೊಂದಿದ್ದರು ಎಂದು ಇಲ್ಲಿ ಸೇರಿರುವ ಜನಸಾಗರವೇ ಹೇಳುತ್ತಿದೆ, ನಮ್ಮ ಗೆಲುವು ಕೋಟ್ಯಂತರ ಮುಖಗಳಲ್ಲಿ ನಗು ತಂದಿದೆ. ಇದು ವಿಶೇಷವಾದಂತಹ ತಂಡ. ಈ ಟ್ರೊಫಿ ದೇಶಕ್ಕೆ ಸೇರಿದ್ದು ಎಂದು ಹೇಳಿದರು.