ಪ್ರತಿಭಟನೆ ನಡೆಸಿ, ಸರಕಾರಕ್ಕೆ ಒತ್ತಾಯಿಸಿದ ಹೋರಾಟಗಾರರು
ಸಾಹಿತಿಗಳು, ಪ್ರಗತಿಪರರು, ಮಹಿಳಾಪರ ಸಂಘಟನೆಗಳು ಭಾಗಿ
ಹಾಸನ: ಲೈಂಗಿಕ ದೌರ್ಜನ್ಯ ಪ್ರಕರಣದ ಪ್ರಮುಖ ಆರೋಪಿ ಪ್ರಜ್ವಲ್ ರೇವಣ್ಣನನ್ನು ಬಂಧಿಸುವAತೆ ಆಗ್ರಹಿಸಿ ವಿವಿಧ ಸಂಘಟನೆಗಳು ಹಾಸನ ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಸಿವೆ.
ದೇವೇಗೌಡರ ಕುಟುಂಬವನ್ನು ಹಾಡಿ ಹೊಗಳಿದ ಜನರೇ ಇಂದು ಅವರ ಕುಟುಂಬದ ವಿರುದ್ಧ ಪ್ರತಿಭಟನೆ ಗಿಳಿಯುವಂತೆ ಆಗಿರುವುದು ವಿಪರ್ಯಾಸ. ಇದಕ್ಕೆ ಕಾರಣ ಪ್ರಜ್ವಲ್ ರೇವಣ್ಣ ಮಾಡಿರುವ ಲೈಂಗಿಕ ದೌರ್ಜನ್ಯ ಮತ್ತು ಅದನ್ನು ವಿಡಿಯೋ ಮಾಡಿಕೊಂಡು, ಸಿಕ್ಕಸಿಕ್ಕವರಿಗೆ ಹಂಚುವಂತೆ ಮಾಡಿ ಮಹಿಳೆಯ ಘನತೆಗೆ ದಕ್ಕೆ ತಂದಿರುವುದು ಎನ್ನಬಹುದು.
ಪ್ರಗತಿಪರ ಚಿಂತಕರು, ಸಾಹಿತಿಗಳು, ಮಹಿಳಾ ಹೋರಾಟಗಾರರು, ದಲಿತ ಸಂಘಟನೆಗಳು, ಕಾರ್ಮಿಕ ಸಂಘಟನೆಗಳು ಸೇರಿ ನಾಡಿನ ವಿವಿಧ ಜಿಲ್ಲೆಗಳಿಂದ ಆಗಮಿಸಿ, ಪ್ರತಿಭಟನೆಯಲ್ಲಿ ಭಾಗವಹಿಸಿದ್ದವು. ಪ್ರಜ್ವಲ್ ರೇವಣ್ಣ ನೂರಾರು ಹೆಣ್ಣುಮಕ್ಕಳಿಗೆ ಲೈಂಗಿಕ ಕಿರುಕುಳ ಕೊಟ್ಟು, ಅವರ ವಿಡಿಯೋ ಹಾದಿಬೀದಿಯಲ್ಲಿ ಹರಿಬಿಟ್ಟು, ಆರಾಮಾಗಿ ವಿದೇಶದಲ್ಲಿದ್ದಾನೆ. ಆತನ ಬಂಧನಕ್ಕೆ ಸರಕಾರ ಹಿಂದೇಟು ಹಾಕುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸರಕಾರ ಎಸ್‌ಐಟಿ ರಚನೆ ಮಾಡಿ ಒಂದು ತಿಂಗಳು ಕಳೆದಿದೆ. ಈಗಲೂ ಮಹಿಳೆಯರ ಅಶ್ಲೀಲ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ, ವಾಟ್ಸಾಪ್‌ಗಳಲ್ಲಿ ಹರಿದಾಡುತ್ತಿವೆ. ಅದಕ್ಕೆ ಕಡಿವಾಣ ಹಾಕುವ ಕೆಲಸವನ್ನು ಪೊಲೀಸರು ಮಾಡಿಲ್ಲ, ಒಂದು ತಿಂಗಳಿಂದ ತಲೆ ಮರೆಸಿಕೊಂಡಿರುವ ಲೈಂಗಿಕ ಪ್ರಕರಣದ ಆರೋಪಿಯನ್ನು ಬಂಧಿಸಲು ಸಾಧ್ಯವಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ದೇವೇಗೌಡರು ಮತ್ತು ಕುಮಾರಸ್ವಾಮಿ, ತಮ್ಮ ಕುಟುಂಬ ಕುಡಿಯನ್ನು ಕಾಪಾಡಿಕೊಳ್ಳುವ ಕೆಲಸ ಮಾಡುತ್ತಿದ್ದಾರೆ. ಪ್ರಕರಣವನ್ನೇ ರಾಜಕೀಯ ಷಡ್ಯಂತ್ರ ಎಂದು ಹೇಳುತ್ತಿದ್ದಾರೆ. ಆದರೆ, ನೊಂದ ಮಹಿಳೆಯರಿಗೆ ನ್ಯಾಯ ಕೊಡಿಸುವ ಕೆಲಸವನ್ನು ಮಾಜಿ ಪ್ರಧಾನಿಗಳಾಗಲೀ, ಮಾಜಿ ಮುಖ್ಯಮಂತ್ರಿಯಾಗಲೀ ಮಾಡುತ್ತಿಲ್ಲ. ಈ ಹೆಣ್ಣುಮಕ್ಕಳು ನೊಂದಿರುವುದು ಸುಳ್ಳು ಎಂದು ಹೇಳಿಬಿಡಲಿ ನೋಡೋಣ ಎಂದು ಸಾಹಿತಿ ರೂಪಾ ಹಾಸನ್ ತಿಳಿಸಿದ್ದಾರೆ.
ಪ್ರಜ್ವಲ್ ಎಸ್‌ಐಟಿ ಮುಂದೆ ಬಂದು ಶರಣಾಗುತ್ತೇನೆ ಎಂದು ಹೇಳುತ್ತಿದ್ದಾನೆ. ಆತನ ಸ್ವಾಗತಕ್ಕೆ ಎಸ್‌ಐಟಿ ಸಿದ್ಧವಾದಂತೆ ನಡೆದುಕೊಳ್ಳುತ್ತಿದೆ. ಮಾಧ್ಯಮಗಳು ಯುದ್ಧ ಗೆದ್ದು ಬಂದ ವೀರನನ್ನು ಸ್ವಾಗತಿಸುವಂತೆ “ಪ್ರಜ್ವಲ್ ಆಗಮನಕ್ಕೆ ಕ್ಷಣಗಣನೆ” ಎಂದು ತೋರಿಸುತ್ತಿವೆ. ಇದೆಲ್ಲ ನೊಂದಿರುವ ಮಹಿಳೆಯರನ್ನು ಎಷ್ಟು ಘಾಸಿಗೊಳಿಸುತ್ತದೆ ಎಂಬುದರ ಅರಿವು ಯಾರಿಗೂ ಇಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ ನ್ಯಾಯವಾದಿ ಎಸ್. ಬಾಲನ್, ಬಿಲ್ಕಿಸ್ ಭಾನು ಪ್ರಕರಣದ ಹೋರಾಟಗಾರ್ತಿ ಸುಭಾಷಿಣಿ ಅಲಿ, ಸಾಮಾಜಿಕ ಹೋರಾಟಗಾರ ಎಸ್.ಆರ್.ಹಿರೇಮಠ್, ಜರ್ನಾದನ್ ಜನ್ನಿ, ಭಾನು ಮುಷ್ತಾಕ್, ಮಾವಳ್ಳಿ ಶಂಕರ್, ಕೋಟಗಾನಹಳ್ಳಿ ರಾಮಯ್ಯ, ಭೀಮ್ ಆರ್ಮಿ ರಾಜ್ಯಾಧ್ಯಕ್ಷ ಡಿ.ಎಸ್. ರಾಜಗೋಪಾಲ್, ಧರ್ಮೇಶ್ ಹಿರೇಹಳ್ಳಿ, ಎಚ್.ಕೆ. ಸಂದೇಶ್, ಇಂದಿರಾ ಕೃಷ್ಣಪ್ಪ, ರೂಪಾ ಹಾಸನ್, ದಂಡೋರ ಮಂಜುನಾಥ್, ಭೀಮ್ ಆರ್ಮಿ ಜಿಲ್ಲಾಧ್ಯಕ್ಷ ಪ್ರಸನ್ನ, ಸೋಮಶೇಖರ್ ಸೇರಿ ೧೧೩ ಸಂಘಟನೆಗಳ ಮುಖಂಡರು ಪ್ರತಿಭಟನಾ ಮೆರವಣಿಗೆಯಲಿ ಭಾಗವಹಿಸಿದ್ದರು.