ಪವಿತ್ರಾಗೌಡಗೆ ಜೈಲಲ್ಲಿ ಡಿ ಬ್ಯಾರಕ್: ಜೈಲಲ್ಲೇ ನಿದ್ರೆಯಿಲ್ಲದೇ ಕಳೆದ ಪವಿತ್ರಾ ಗೌಡ
ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ನಟ ದರ್ಶನ್, ಅವರ ಗೆಳೆತಿ ಪವಿತ್ರಾ ಗೌಡ ಸೇರಿ ಹಲವು ಮಂದಿ ಅರೆಸ್ಟ್ ಆಗಿದ್ದಾರೆ. ಈ ಪೈಕಿ ದರ್ಶನ್, ಧನರಾಜ್, ವಿನಯ್, ಪ್ರದೋಶ್ನ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ. ಉಳಿದವರನ್ನು ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ. ಹೀಗಾಗಿ ಪವಿತ್ರಾ ಗೌಡ ಸೇರಿ ಅನೇಕರು ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲು ಸೇರಿದ್ದಾರೆ. ಅವರು ಜೈಲಲ್ಲಿ ಒಂದು ದಿನ ಕಳೆದಿದ್ದಾರೆ.
ದರ್ಶನ್ಗೆ ಡಿ ಬಾಸ್ ಎಂದು ಕರೆಲಾಗುತ್ತದೆ. ಪವಿತ್ರಾ ಹಾಗೂ ದರ್ಶನ್ ಮಧ್ಯೆ ಒಳ್ಳೆಯ ಗೆಳೆತನ ಇದೆ. ಕಾಕತಾಳೀಯವೋ ಎಂಬಂತೆ ಜೈಲಲ್ಲಿ ಪವಿತ್ರಾಗೆ ಡಿ ಬ್ಯಾರಕ್ ಸಿಕ್ಕಿದೆ. ಉಳಿದ ಆರೋಪಿಗಳು ಜೈಲಿನ ಕ್ವಾರೆಂಟೈನ್ ಬ್ಯಾರಕ್ನಲ್ಲಿ ಇಡಲಾಗಿದೆ.
ಗುರುವಾರ (ಜೂನ್ 20) ಜೈಲಿಗೆ ಆರೋಪಿಗಳನ್ನು ತಡವಾಗಿ ಕರೆತರಲಾಗಿದೆ. ಹೀಗಾಗಿ, ಇಂದು ಎಲ್ಲಾ ಆರೋಪಿಗಳಿಗೆ ವಿಚಾರಣಾಧೀನ ಕೈದಿ ನಂಬರ್ ನೀಡಲಾಗುತ್ತದೆ. 10 ಗಂಟೆಯ ಬಳಿಕ ಜೈಲಾಧಿಕಾರಿಗಳು ಈ ಸಂಖ್ಯೆಯನ್ನು ನೀಡಲಿದ್ದಾರೆ.
ಪವಿತ್ರಾಗೆ ನಿನ್ನೆ ರಾತ್ರಿ ವೇಳೆ ನಿದ್ದೆ ಬಂದಿಲ್ಲವಂತೆ. ರಾತ್ರಿ 11 ಗಂಟೆಯ ಸುಮಾರಿಗೆ ಪವಿತ್ರಾ ನಿದ್ರೆಗೆ ಜಾರಿದ್ದರು. ಸರಿಯಾಗಿ ನಿದ್ರೆ ಮಾಡದೆ ಆಗಾಗ ಎದ್ದು ಕುಳಿತು ಪವಿತ್ರಾ ಗೌಡ ಯೋಚನೆ ಮಾಡಿದ್ದಾರೆ. ಹೊರಗೆ ಅವರು ಹೈಫೈ ಜೀವನ ನಡೆಸುತ್ತಿದ್ದರು. ನಿತ್ಯ ಹಾಯಾದ ಬೆಡ್ನಲ್ಲಿ ಮಲಗುತ್ತಿದ್ದರು. ಆದರೆ, ಈಗ ಜೀವನ ಹಾಗಿಲ್ಲ.
ಜೈಲಿನಲ್ಲಿದ್ದರೂ ಫಿಟ್ನೆಸ್ ಬಗ್ಗೆ ಅವರು ಗಮನ ಹರಿಸುತ್ತಿದ್ದಾರೆ. ಮುಂಜಾನೆ 5 ಗಂಟೆಗೆ ಎದ್ದು ಜೈಲಿನ ಬ್ಯಾರಕ್ನಲ್ಲಿ ವಾಕಿಂಗ್ ಮಾಡಿದ್ದಾರೆ. ಆ ಬಳಿಕ ಜೈಲಿನ ಸಿಬ್ಬಂದಿ ನೀಡಿದ ಕಾಫಿಯನ್ನು ಪವಿತ್ರಾ ಹೀರಿದ್ದಾರೆ. ಆ ಬಳಿಕ ಅವರು ಸುದ್ದಿ ಪತ್ರಿಕೆ ಓದಿದ್ದಾರೆ. ಜೈಲಿನ ಮೆನುವಿನಂತೆ ಕೈದಿಗಳಿಗೆ ಇಂದು ತಿಂಡಿಗೆ ಉಪ್ಪಿಟ್ಟು ನೀಡಲಾಗಿದೆ.
