ಬೆಂಗಳೂರು: ದರ್ಶನ್ ಪ್ರಕರಣವನ್ನು ದುರ್ಬಲಗೊಳಿಸುವ ಪ್ರಯತ್ನವನ್ನು ಆಪ್ತ ರಾಜಕಾರಣಿಗಳು ಇನ್ನೂ ಮುಂದುವರಿಸಿದ್ದು, ಎಸ್ ಪಿ ಪಿ ಬದಲಾವಣೆಗೆ ಪ್ರಯತ್ನ ನಡೆಸಿದ್ದಾರೆ ಎಂಬ ಮಾತುಗಳು ಕೇಳಿಬಂದಿವೆ.
ರೇಣುಕಾ ಸ್ವಾಮಿ ಕೊಲೆಬಕೇಸ್ ನಲ್ಲಿ ದರ್ಶನ್ ಅವರನ್ನು ಉಳಿಸುವ ಪ್ರಯತ್ನ ಪ್ರಕರಣ ಬೆಳಕಿಗೆ ಬಂದ ದಿನದಿಂದಲೂ ನಡೆಯುತ್ತಿದೆ. ಆದರೆ ಪೊಲೀಸರು ಇಂತಹ ಯಾವುದೇ ಪ್ರಯತ್ನಗಳಿಗೆ ಸೊಪ್ಪು ಹಾಕಿಲ್ಲ. ಹೀಗಾಗಿ, ಸರಕಾರ ನೇಮಿಸಿರುವ ಸರಕಾರಿ ವಕೀಲರನ್ನು ಬದಲಾಯಿಸಿ, ಪ್ರಕರಣವನ್ನು ದುರ್ಬಲಗೊಳಿಸುವ ಪ್ರಯತ್ನ ನಡೆಯುತ್ತಿದೆ ಎನ್ನಲಾಗಿದೆ.
ದರ್ಶನ್ ಬಂಧನ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಸರಕಾರ ಪಿ. ಪ್ರಸನ್ನ ಕುಮಾರ್ ಅವರನ್ನು ಎಸ್ ಪಿಪಿಯಾಗಿ ನೇಮಿಸಿದೆ. ಅವರು ನೇಮಕವಾದ ದಿನದಿಂದಲೂ ದರ್ಶನ್ ಪರ ಓಡಾಡುತ್ತಿರುವ ಕೆಲ ರಾಜಕಾರಣಿಗಳಿಗೆ ನಿದ್ದೆಗೆಟ್ಟಿದೆ. ಈ ಹಿನ್ನೆಲೆಯಲ್ಲಿ ಅವರನ್ನು ಬದಲಾಯಿಸುವಂತೆ ಸರಕಾರದ ಮೇಲೆ ಒತ್ತಡ ತರಲಾಗುತ್ತಿದೆ.
ಪ್ರಸನ್ನ ಕುಮಾರ್ ಸರಕಾರಿ ವಕೀಲರಾಗಿ ಈ ಹಿಂದೆ ಉತ್ತಮ ಟ್ರ್ಯಾಕ್ ರೆಕಾರ್ಡ್ ಹೊಂದಿದ್ದಾರೆ. ಅವರು ಕೈಗೆತ್ತಿಕೊಂಡ ಕೆಲಸ ಅಷ್ಟು ಸುಲಭವಾಗಿ ಬಿಡುವುದಿಲ್ಲ ಎಂಬ ಮಾತಿದೆ. ಅವರು ವಕೀಲರಾಗಿದ್ದ ಬಹುತೇಕ ಪ್ರಕರಣಗಳು ತಾರ್ಕಿತ ಅಂತ್ಯ ಕಂಡಿದ್ದು, ಆರೋಪಿಗಳಿಗೆ ಶಿಕ್ಷೆಯಾಗಿದೆ. ಈ ಹಿನ್ನೆಲೆಯೇ ಪ್ರಸನ್ನ ಕುಮಾರ್ ಅವರ ಬದಲಾವಣೆಗೆ ಪ್ರಯತ್ನ ನಡೆಯುವಂತೆ ಮಾಡಿದೆ ಎನ್ನಬಹುದು.
ಪ್ರಸನ್ನ ಕುಮಾರ್ ಕಂಡ್ರೆ ಭಯ ಯಾಕೆ?
ಪ್ರಸನ್ನ ಕುಮಾರ್ ಪ್ರಭಾವಿ ವಕೀಲರಾಗಿದ್ದು, ರಾಮೇಶ್ವರಂ ಕೆಫೆ ಬ್ಲಾಸ್ಟ್ ಪ್ರಕರಣದಲ್ಲಿ ಸರಕಾರದ ಪರ ವಾದ ಮಂಡನೆ ಮಾಡಿದ್ದರು. ಚಿನ್ನಸ್ವಾಮಿ ಸ್ಟೇಡಿಯಂ ಸ್ಫೋಟ, ಚರ್ಚ್ ಸ್ಟ್ರೀಟ್ ಸ್ಪೋಟ, ಮೈಸೂರು ಕೋರ್ಟ್ ಸಭಾಂಗಣದಲ್ಲಿ ನಡೆದ ಸ್ಫೋಟ ಸೇರಿದಂತೆ ಅನೇಕ ಭಯೋತ್ಪಾದಕ ಪ್ರಕರಣಗಳಲ್ಲಿ ಸಮರ್ಥವಾಗಿ ವಾದ ಮಂಡನೆ ಮಾಡಿದ್ದಾರೆ. ಸಿಬಿಐ ಮತ್ತು ಎನ್ ಐ ಎ ಪ್ರಕರಣಗಳಲ್ಲಿ ವಕೀಲರಾಗಿ ಸಮರ್ಥ ಕೆಲಸ ಮಾಡಿದ್ದಾರೆ. ಹೀಗಾಗಿ, ಇವರು ವಾದ ಮಾಡಿದರೆ ದರ್ಶನ್ ಗೆ ಶಿಕ್ಷೆ ಎಂಬ ಕಾರಣಕ್ಕೆ ಅವರನ್ನು ಬದಲಾಯಿಸುವ ಪ್ರಯತ್ನ ನಡೆಯುತ್ತಿದೆ.

