ಅಪರಾಧ ಸಿನಿಮಾ ಸುದ್ದಿ

ರೇಣುಕಾಸ್ವಾಮಿ ಶವ ಎಸೆಯಲು 30 ಲಕ್ಷ ರೂ. ಕೊಟ್ಟಿದ್ದ ದರ್ಶನ್!

Share It

ಬೆಂಗಳೂರು: ಗೆಳತಿ ಪವಿತ್ರಾ ಗೌಡ ಅವರಿಗೆ ಅಶ್ಲೀಲ ಮೊಬೈಲ್ ಮೆಸೇಜ್ ಮಾಡಿದ್ದ ಚಿತ್ರದುರ್ಗದ ರೇಣುಕಾ ಸ್ವಾಮಿ ‌ಎಂಬ ವ್ಯಕ್ತಿಯ ಕೊಲೆ ಆರೋಪದಲ್ಲಿ ನಟ ದರ್ಶನ್, ಪವಿತ್ರಾ ಗೌಡ ಸೇರಿ 13 ಜನರ ಬಂಧನವಾಗಿದೆ. ನಿನ್ನೆ ರಾತ್ರಿಪೂರ ದರ್ಶನ್ ಮತ್ತು ಗ್ಯಾಂಗ್ ಜೈಲಿನಲ್ಲಿ ಸಮಯ ಕಳೆದಿದೆ. ಇದರ ನಡುವೆ ರೇಣುಕಾ ಸ್ವಾಮಿ ಕೊಲೆ ಪ್ರಕರಣದ ಬಗ್ಗೆ ಹಲವು ಆಘಾತಕಾರಿ ವಿಷಯಗಳು ಹೊರಬರುತ್ತಿವೆ. ರೇಣುಕಾ ಸ್ವಾಮಿಯ ಶವವನ್ನು ಎಸೆದು, ಕೊಲೆ ಆರೋಪವನ್ನು ಹೊತ್ತುಕೊಳ್ಳಲು ಮೂವರಿಗೆ 30 ಲಕ್ಷ ರೂಪಾಯಿ ಹಣವನ್ನು ದರ್ಶನ್ ನೀಡಿದ್ದರು ಎನ್ನಲಾಗುತ್ತಿದೆ.

ರೇಣುಕಾ ಸ್ವಾಮಿಯನ್ನು ಚಿತ್ರದುರ್ಗದಿಂದ ಅಪಹರಣ ಮಾಡಿ ಕರೆದುಕೊಂಡು ಬಂದು ಶೆಡ್​ನಲ್ಲಿ ಇರಿಸಿಕೊಂಡು ಹಲ್ಲೆ ಮಾಡಿದ್ದ ದರ್ಶನ್ ಮತ್ತು ಗ್ಯಾಂಗ್​, ಹಲ್ಲೆಯಿಂದ ರೇಣುಕಾ ಸ್ವಾಮಿ ನಿಧನ ಹೊಂದಿದ ಬಳಿಕ ಆತಂಕಗೊಂಡು, ಶವವನ್ನು ಸಾಗಿಸುವ ದಾರಿ ಹುಡುಕಿದೆ. ಆಗ ಬೇರೆ ಗ್ಯಾಂಗ್ ಒಂದನ್ನು ಕರೆಸಿ ಅವರಿಗೆ ಶವ ಒಪ್ಪಿಸಿ, ಅದನ್ನು ವಿಲೇವಾರಿ ಮಾಡುವಂತೆ ಹೇಳಿ ಅವರಿಗೆ 30 ಲಕ್ಷ ರೂಪಾಯಿ ಹಣ ನೀಡಿದ್ದಾರೆ. ಈ ಹಣವನ್ನು ದರ್ಶನ್ ಅವರೇ ನೀಡಿದ್ದಾರೆ ಎನ್ನಲಾಗುತ್ತಿದೆ.

ಹಣ ಪಡೆದ ಮತ್ತೊಂದು ಗ್ಯಾಂಗ್ ರೇಣುಕಾ ಸ್ವಾಮಿಯ ಶವವನ್ನು ಕಾಮಾಕ್ಷಿಪಾಳ್ಯ ಪೊಲೀಸ್ ಠಾಣಾ ವ್ಯಾಪ್ತಿಯ ಸುಮನಹಳ್ಳಿ ಮೋರಿಗೆ ಬಿಸಾಡಿ ಹೋಗಿದ್ದಾರೆ. ಶವ ದೊರೆತ ಬಳಿಕ ತಾವೇ ಕೊಲೆ ಮಾಡಿರುವುದಾಗಿ ಹೇಳಿ ಠಾಣೆಗೆ ಒಪ್ಪಿಕೊಂಡಿದ್ದಾರೆ. ಕೊಲೆ ಮಾಡಲು ಹಣಕಾಸಿನ ವಿಚಾರವೇ ಕಾರಣ ಎಂದು ಹೇಳಿದ್ದಾರೆ. ಆದರೆ ಒಬ್ಬೊಬ್ಬರನ್ನೂ ಪ್ರತ್ಯೇಕವಾಗಿ ವಿಚಾರಣೆ ಮಾಡಿದಾಗ ಅವರ ಹೇಳಿಕೆಯಲ್ಲಿ ವ್ಯತ್ಯಾಸ ಕಂಡುಬಂದಿದೆ. ಬಳಿಕ ಪೊಲೀಸರು ತಮ್ಮದೇ ಶೈಲಿಯಲ್ಲಿ ವಿಚಾರಣೆ ಮಾಡಿದಾಗ ನಿಜಾಂಶ ಬಯಲಾಗಿದೆ.

ಪೊಲೀಸರು ತನಿಖೆ ಚುರುಕು ಗೊಳಿಸಿದಂತೆ ಹಣ ಪಡೆದಿದ್ದ ಗ್ಯಾಂಗ್​ನವರು ರಾತ್ರಿ ಯಿಡೀ ದರ್ಶನ್ ಗ್ಯಾಂಗ್​ ಜೊತೆ ಮೊಬೈಲ್ ಮೂಲಕ ಸಂಭಾಷಣೆ ಮಾಡಿರುವ ವಿಚಾರವೂ ಬಹಿರಂಗಗೊಂಡಿದೆ. ಹಣ ಪಡೆದು ಶವ ವಿಲೇವಾರಿ ಜವಾಬ್ದಾರಿ ಹೊತ್ತಿದ್ದ ಗ್ಯಾಂಗ್, ದರ್ಶನ್​ರ ಆಪ್ತನೊಟ್ಟಿಗೆ ಸಂಪರ್ಕದಲ್ಲಿತ್ತಂತೆ. ಶವ ವಿಲೇವಾರಿ ಹಾಗೂ ಕೊಲೆಯ ಆರೋಪ ಹೊರಲೆಂದು ಮುಂಚಿತವಾಗಿಯೇ 30 ಲಕ್ಷ ರೂಪಾಯಿ ಹಣವನ್ನು ದರ್ಶನ್ ಅವರಿಂದ ಈ ಗ್ಯಾಂಗ್ ಪಡೆದಿತ್ತು ಎನ್ನಲಾಗಿದೆ.

ಈಗ ಆ ಶವ ವಿಲೇವಾರಿ ಗ್ಯಾಂಗ್ ಸಹ ದರ್ಶನ್ ಜೊತೆಗೆ ಜೈಲಿನಲ್ಲಿದೆ. ಶೆಡ್​ನಲ್ಲಿ ರೇಣುಕಾ ಸ್ವಾಮಿ ಮೇಲೆ ಹಲ್ಲೆ ಮಾಡಿದವರು, ದರ್ಶನ್​ಗೆ ಗ್ಯಾಂಗ್​ ಅನ್ನು ಪರಿಚಯಿಸಿದವರು, ರೇಣುಕಾ ಸ್ವಾಮಿಯನ್ನು ಅಪಹರಿಸಿಕೊಂಡು ಬಂದವರು ಹೀಗೆ ಎಲ್ಲರನ್ನೂ ಪೊಲೀಸರು ಬಂಧಿಸಿದ್ದಾರೆ.


Share It

You cannot copy content of this page