ಅಪರಾಧ ಸಿನಿಮಾ ಸುದ್ದಿ

ಮನೆ ಊಟ, ಬಟ್ಟೆಗಾಗಿ ಬೇಡಿಕೆ: ಮ್ಯಾಜಿಸ್ಟ್ರೇಟ್ ಕೋರ್ಟ್ ತೀರ್ಪು ಪ್ರಶ್ನಿಸಿ ಹೈಕೋರ್ಟಿಗೆ ದರ್ಶನ್ ಮೇಲ್ಮನವಿ

Share It

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಕೇಸ್​ನಲ್ಲಿ ನಟ ದರ್ಶನ್ ಸೇರಿ ಅನೇಕರು ಅರೆಸ್ಟ್ ಆಗಿದ್ದಾರೆ. ಜೈಲಿನಲ್ಲಿ ನೀಡುವ ಊಟ ದರ್ಶನ್ ಅವರಿಗೆ ಒಗ್ಗುತ್ತಿಲ್ಲ. ಪರಿಣಾಮ ದರ್ಶನ್ ಅವರಿಗೆ ಭೇದಿ, ಅತಿಸಾರ ಮತ್ತಿತ್ಯಾದಿ ಸಮಸ್ಯೆ ಉಂಟಾಗುತ್ತಿದೆ, ಜೊತೆಗೆ ದೇಹದ ತೂಕ ಇಳಿಕೆ ಆಗುತ್ತಿದೆ ಎಂದು ಅವರ ಪರ ವಕೀಲರು ಹೇಳಿದ್ದರು. ಹೀಗಾಗಿ ಅವರು ಮನೆ ಊಟ, ಬಟ್ಟೆಗಾಗಿ ಮ್ಯಾಜಿಸ್ಟ್ರೇಟ್ ಕೋರ್ಟ್​ಗೆ ಅರ್ಜಿ ಸಲ್ಲಿಕೆ ಮಾಡಿದ್ದರು. ಮ್ಯಾಜಿಸ್ಟ್ರೇಟ್ ಕೋರ್ಟ್ ಈ ಅರ್ಜಿಯನ್ನು ರಿಜೆಕ್ಟ್ ಮಾಡಿತ್ತು. ಈಗ ಮನೆ ಊಟ, ಬಟ್ಟೆ, ಹಾಸಿಗೆಗಾಗಿ ಮತ್ತೆ ಹೈಕೋರ್ಟ್​ಗೆ ನಟ ದರ್ಶನ್ ಮೇಲ್ಮನವಿ ಸಲ್ಲಿಕೆ ಮಾಡಿದ್ದಾರೆ.

ಹೈಕೋರ್ಟ್​ನಲ್ಲಿ ಅರ್ಜಿ
ಮ್ಯಾಜಿಸ್ಟ್ರೇಟ್ ಕೋರ್ಟ್ ಈ ಮೊದಲು ಮನೆಯಿಂದ ಊಟ, ಬಟ್ಟೆ, ಹಾಸಿಗೆ ಪಡೆಯಲು ಅನುಮತಿ ನಿರಾಕರಿಸಿತ್ತು. ಮ್ಯಾಜಿಸ್ಟ್ರೇಟ್ ಕೋರ್ಟ್ ಆದೇಶ ಪ್ರಶ್ನಿಸಿ ನಟ ದರ್ಶನ್ ಅವರು ಹೈಕೋರ್ಟ್ ಮೊರೆ ಹೋಗಿದ್ದಾರೆ. ಹೈಕೋರ್ಟ್ ಎದುರು ದರ್ಶನ್ ಅವರ ಪರ ವಕೀಲರು ಯಾವ ರೀತಿಯ ವಾದ ಮಂಡಿಸುತ್ತಾರೆ ಎಂಬುದನ್ನು ಕಾದುನೋಡಬೇಕಿದೆ.

ಜೈಲಿನಲ್ಲಿ ಮನೆ ಊಟ ಹಾಗೂ ಹಾಸಿಗೆ ನೀಡಬೇಕು ಎಂದು ದರ್ಶನ್ ಪರ ವಕೀಲರು ಈ ಮೊದಲು ಹೈಕೋರ್ಟ್​ಗೆ ಅರ್ಜಿ ಸಲ್ಲಿಕೆ ಮಾಡಿದ್ದರು. ಆದರೆ, ಈ ಅರ್ಜಿಯನ್ನು ತಾಂತ್ರಿಕ ಕಾರಣ ನೀಡಿ ದರ್ಶನ್ ಪರ ವಕೀಲರು ಹಿಂಪಡೆದಿದ್ದರು. ಪ್ರಕರಣದ ಕುರಿತಾಗಿ ಮ್ಯಾಜಿಸ್ಟ್ರೇಟ್ ಕೋರ್ಟ್ ನೀಡಿರುವ ಆದೇಶ ಪ್ರಶ್ನಿಸಬೇಕಿದೆ. ಈ ಹಿನ್ನೆಲೆಯಲ್ಲಿ ಹಳೆಯ ಅರ್ಜಿಯನ್ನು ವಾಪಸ್ ಪಡೆಯಲಾಗಿತ್ತು. ಈಗ ಮತ್ತೆ ಮನೆ ಊಟ, ಬಟ್ಟೆ, ಹಾಸಿಗೆ, ಪುಸ್ತಕ ಬೇಡಿಕೆ ಮುಂದಿಟ್ಟು ಹೊಸದಾಗಿ ಅರ್ಜಿ ಸಲ್ಲಿಕೆ ಮಾಡಲಾಗಿದೆ.

ರೇಣುಕಾಸ್ವಾಮಿ ಕೊಲೆ ಕೇಸ್​ನಲ್ಲಿ ದರ್ಶನ್ ಸೇರಿ ಅನೇಕರು ಬಂಧನಕ್ಕೆ ಒಳಗಾಗಿದ್ದಾರೆ. ಶೀಘ್ರವೇ ದರ್ಶನ್ ಅವರ ನ್ಯಾಯಾಂಗ ಬಂಧನ ಪೂರ್ಣಗೊಳ್ಳಲಿದೆ. ಅವರನ್ನು ಮತ್ತೆ ಪೊಲೀಸರು ಕೋರ್ಟ್ ಎದುರು ಹಾಜರುಪಡಿಸಲಿದ್ದಾರೆ. ಈಗಾಗಲೇ ದರ್ಶನ್ ಪರ ವಕೀಲರು ಜಾಮೀನಿಗೆ ಅರ್ಜಿ ಸಲ್ಲಿಸದ ಕಾರಣ ಮತ್ತೆ ನ್ಯಾಯಾಂಗ ಬಂಧನ ವಿಸ್ತರಣೆ ಆಗಲಿದೆ.


Share It

You cannot copy content of this page