ಸುದ್ದಿ

ಜಾಮೀನಿನ ಆಸೆಯಲ್ಲಿರುವ ದರ್ಶನ್ ಗೆ ಮುಳುವಾಗಲಿದೆಯಂತೆ ಚಾರ್ಜ್ ಶೀಟ್!

Share It

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಹಾಗೂ ಸಂಗಡಿಗರ ಬಂಧನವಾಗಿ ಇಂದಿಗೆ 2 ತಿಂಗಳಾಯ್ತು. ಪ್ರಕರಣದ ತನಿಖೆ ಬಹುತೇಕ ಮುಗಿದಿದ್ದು ಪೊಲೀಸರು ಚಾರ್ಜ್ ಶೀಟ್ ಸಲ್ಲಿಕೆಗೆ ತಯಾರಿ ನಡೆಸುತ್ತಿದ್ದಾರೆ. ಹಲವು ಸಾಕ್ಷ್ಯಗಳ ಒಟ್ಟುಗೂಡಿಸುವಿಕೆ, ಪರಸ್ಪರ ಲಿಂಕ್ ಜೋಡಿಸುವಿಕೆ ಇನ್ನಿತರೆ ಕಾರ್ಯಗಳು ನಡೆಯುತ್ತಿದ್ದು, ಪ್ರಕರಣದಲ್ಲಿ ಎಲ್ಲ ಆರೋಪಿಗಳ ಭಾಗೀದಾರಿಕೆ, ಕೊಲೆಯಲ್ಲಿ ಪ್ರತಿಯೊಬ್ಬರ ಪಾಲ್ಗೊಳ್ಳುವಿಕೆ. ಪ್ರತಿಯೊಬ್ಬ ಆರೋಪಿ ವಿರುದ್ಧ ಇರುವ ಸಾಕ್ಷ್ಯಗಳು ಇವುಗಳನ್ನೆಲ್ಲ ಸವಿಸ್ತಾರವಾಗಿ ಚಾರ್ಜ್​ ಶೀಟ್​ನಲ್ಲಿ ಪೊಲೀಸರು ಉಲ್ಲೇಖ ಮಾಡಲಿದ್ದಾರೆ.

ದರ್ಶನ್ ಮತ್ತು ಗ್ಯಾಂಗ್​ಗೆ ಬೇಗನೆ ಜಾಮೀನು ದೊರೆಯಬಾರದೆಂಬ ಕಾರಣಕ್ಕೆ ಪೊಲೀಸರು ಚಾರ್ಜ್​ ಶೀಟ್ ಸಲ್ಲಿಕೆ ತಡ ಮಾಡುತ್ತಿದ್ದಾರೆ ಎಂದು ಕೆಲವು ಆರೋಪಗಳು ಕೇಳಿಬಂದಿವೆ. ಸರಳ ಪ್ರಕರಣವಾದರೆ ಅಥವಾ ಒಬ್ಬರೊ, ಇಬ್ಬರೊ ಆರೋಪಿಗಳಿದ್ದರೆ ಸಾಮಾನ್ಯವಾಗಿ 30 ದಿನಗಳಲ್ಲಿ ಚಾರ್ಜ್ ಶೀಟ್ ಸಲ್ಲಿಕೆ ಆಗುತ್ತದೆ. ಆದರೆ ಈ ಪ್ರಕರಣದಲ್ಲಿ 17 ಆರೋಪಿಗಳಿದ್ದಾರೆ. ಕೊಲೆ ಆಗುವ ಕೆಲವು ದಿನಗಳ ಮುಂಚಿನಿಂದಲೂ ಯೋಜನೆ ರೂಪಿಸಲಾಗಿದೆ. ಕೊಲೆಯಾದ 2 ದಿನಗಳವರೆಗೆ ಹಲವು ಘಟನೆಗಳು ನಡೆದಿವೆ. ಹಾಗಾಗಿ ಸಾಕ್ಷ್ಯ, ಮಹಜರು ಮಾಡಿರುವ ಸ್ಥಳಗಳ ಸಂಖ್ಯೆ ಎಲ್ಲ ಹೆಚ್ಚಿವೆ ಹಾಗಾಗಿ ಸಹಜವಾಗಿಯೇ ಚಾರ್ಜ್ ಶೀಟ್ ಸಲ್ಲಿಕೆ ತಡವಾಗುತ್ತಿದೆ.

‘ಚಿತ್ರದುರ್ಗ, ಬೆಂಗಳೂರು, ಮೈಸೂರಿನಲ್ಲಿ ಸ್ಥಳ ಮಹಜರು ನಡೆಸಲಾಗಿದೆ. ಎಲ್ಲಾ ಸ್ಥಳಗಳ ಕೂಲಂಕುಶ ಪರಿಶೀಲನೆ ಆಗಬೇಕಿತ್ತು, ಸಾಕ್ಷಿ ಸಂಗ್ರಹಣೆ, ಸಾಕ್ಷಿಗಳ ವಿಚಾರಣೆ, ಎಫ್ಎಸ್ಎಲ್, ಫಿಂಗರ್ ಪ್ರಿಂಟ್ ವರದಿ ಪಡೆದುಕೊಳ್ಳಬೇಕು, ಎಫ್ಎಸ್ಎಲ್ ವರದಿಗಳು ಬೇಗ ಪೊಲೀಸರ ಕೈಸೇರುವುದಿಲ್ಲ, ಮೊದಲ ದಿನದಿಂದ ಚಾರ್ಜ್ ಶೀಟ್ ಸಲ್ಲಿಕೆಯ ಕೊನೆ ದಿನದವರೆಗೆ ಸಾಕ್ಷಿಗಳು ತಾಳೆ ಆಗಬೇಕು, ಒಂದಕ್ಕೊಂದು ಪೂರಕ ಸಾಕ್ಷಿಗಳು ಇರಬೇಕು, ಸಂಶಯ ಮೂಡುವಂಥ ಸಾಕ್ಷಿಗಳು ಕೂಡ ಇರಬಾರದು, ಕಾನೂನು ಅಡಿಯಲ್ಲಿ ಒಪ್ಪುವಂತಹ ಸಾಕ್ಷಿ ಇರಬೇಕು, ಇದರಿಂದಾಗಿ ಚಾರ್ಜ್ ಶೀಟ್ ಸಲ್ಲಿಕೆ ಹೆಚ್ಚು ದಿನ ತೆಗೆದುಕೊಳ್ಳುತ್ತಿದೆ.

ಇದೆಲ್ಲ ಆದರೂ ಸಹ 90 ದಿನಗಳ ಒಳಗಾಗಿ ಚಾರ್ಜ್ ಶೀಟ್ ಸಲ್ಲಿಕೆ ಮಾಡಲು ಪೊಲೀಸರು ಸಿದ್ಧರಾಗಿದ್ದಾರೆ. 90 ದಿನಗಳ ಬಳಿಕ ಚಾರ್ಜ್ ಶೀಟ್ ಸಲ್ಲಿಸಿದರೆ ಜಾಮೀನು ಪಡೆದುಕೊಳ್ಳುವ ಹಪ-ಹಪಿಯಲ್ಲಿರುವ ದರ್ಶನ್ ಮತ್ತು ಗ್ಯಾಂಗ್​ಗೆ ವರವಾಗಲಿದೆ. ಹಾಗಾಗಿ ಹೇಗಾದರೂ ಮಾಡಿ 90 ದಿನಗಳ ಒಳಗಿಯೇ ಚಾರ್ಜ್ ಶೀಟ್​ ಸಲ್ಲಿಸಲು ಪೊಲೀಸರು ಸಿದ್ಧರಾಗಿದ್ದಾರೆ. ಒಂದೊಮ್ಮೆ ವಿವರವಾದ ಚಾರ್ಜ್ ಶೀಟ್ ಸಲ್ಲಿಸಲು 90 ದಿನಗಳಲ್ಲಿ ಸಲ್ಲಿಸಲು ಸಾಧ್ಯವಾಗದೇ ಇದ್ದರೆ, ಪ್ರಾಥಮಿಕ ಚಾರ್ಜ್ ಶೀಟ್ ಅನ್ನಾದರೂ 90 ದಿನಗಳ ಒಳಗೆ ಸಲ್ಲಿಸಿ ಟ್ರಯಲ್ ಅನ್ನು ಆರಂಭಿಸುವ ಯೋಜನೆಯಲ್ಲಿದ್ದಾರೆ ಪೊಲೀಸರು. ಹೀಗೆ ಮಾಡುವುದರಿಂದ ದರ್ಶನ್​ ಜಾಮೀನಿಗೆ ಅರ್ಜಿ ಹಾಕುವುದು ಕಷ್ಟವಾಗುತ್ತದೆ.

90 ದಿನಗಳವರೆಗೆ ಚಾರ್ಜ್ ಶೀಟ್ ಸಲ್ಲಿಕೆ ಮಾಡದೇ ಇದ್ದರೆ ಅದೇ ಆಧಾರದ ಮೇಲೆ ದರ್ಶನ್ ಜಾಮೀನಿಗೆ ಮನವಿ ಸಲ್ಲಿಸುವ ಸಾಧ್ಯತೆ ಇದೆ. ಹಾಗಾಗಿ ಪೊಲೀಸರು 90 ದಿನಗಳಿಗೆ ಮುಂಚಿತವಾಗಿಯೇ ಚಾರ್ಜ್ ಶೀಟ್ ಸಲ್ಲಿಕೆ ಮಾಡಲು ಯೋಜನೆ ಹಾಕಿಕೊಂಡಿದ್ದಾರೆ. ಜೂನ್ 11 ರಂದು ದರ್ಶನ್, ಪವಿತ್ರಾಗೌಡ ಸೇರಿದಂತೆ ರೇಣುಕಾಸ್ವಾಮಿ ಕೊಲೆ ಪ್ರಕರಣದ ಇತರೆ ಆರೋಪಿಗಳ ಬಂಧನ ಆಗಿದೆ. 14 ಆರೋಪಿಗಳು ಪ್ರಸ್ತುತ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ. ಇನ್ನುಳಿನ ಮೂವರು ಆರೋಪಿಗಳು ತುಮಕೂರು ಜೈಲಿನಲ್ಲಿದ್ದು, ಅವರು ಮೂವರು ಅಪ್ರೂವರ್​ಗಳಾಗಿದ್ದು, ನ್ಯಾಯಾಧೀಶರ ಮುಂದೆ ಹೇಳಿಕೆ ದಾಖಲಿಸಿದ್ದಾರೆ.


Share It

You cannot copy content of this page