ಅಪರಾಧ ಸಿನಿಮಾ ಸುದ್ದಿ

ದರ್ಶನ್ ಪತ್ನಿ ಪವಿತ್ರಾ ಗೌಡ ಅಲ್ಲ: ಬೆಂಗಳೂರು ಪೊಲೀಸ್ ಆಯುಕ್ತರಿಗೆ ವಿಜಯಲಕ್ಷ್ಮಿ ಪತ್ರ

Share It

ಬೆಂಗಳೂರು: ನಟ ದರ್ಶನ್​ ತೂಗುದೀಪ್ ಅವರ ಖಾಸಗಿ ಜೀವನದ ವಿಚಾರಗಳು ರಾಷ್ಟ್ರಮಟ್ಟದಲ್ಲಿ ಚರ್ಚೆ ಆಗುತ್ತಿವೆ. ಅದೆಲ್ಲ ಶುರುವಾಗಿದ್ದು ರೇಣುಕಾಸ್ವಾಮಿ ಹತ್ಯೆ ಕೇಸ್​ನಿಂದಾಗಿ. ಈ ಪ್ರಕರಣದಲ್ಲಿ ದರ್ಶನ್​, ನಟಿ ಪವಿತ್ರಾ ಗೌಡ ಸೇರಿದಂತೆ ಅನೇಕರನ್ನು ಬಂಧಿಸಲಾಗಿದೆ.

ಈ ಕುರಿತು ಸುದ್ದಿಗೋಷ್ಠಿ ಮಾಡುವಾಗ ‘ಪವಿತ್ರಾ ಗೌಡ ಅವರು ದರ್ಶನ್​ ಪತ್ನಿ’ ಎಂದು ಬೆಂಗಳೂರು ನಗರ ಪೊಲೀಸ್​ ಆಯುಕ್ತ ದಯಾನಂದ್​ ಹೇಳಿಕೆ ನೀಡಿದ್ದರು. ಆ ಬಳಿಕ ರಾಷ್ಟ್ರ ಮಟ್ಟದ ಮಾಧ್ಯಮಗಳಲ್ಲಿ ಕೂಡ ಅದೇ ರೀತಿ ಸುದ್ದಿ ಪ್ರಸಾರ ಆಯಿತು. ಇದಕ್ಕೆ ಸಂಬಂಧಿಸಿದಂತೆ ದರ್ಶನ್ ಪತ್ನಿ ವಿಜಯಲಕ್ಷ್ಮಿ, ಬೆಂಗಳೂರು ನಗರ ಪೊಲೀಸ್ ಆಯುಕ್ತ ದಯಾನಂದ್ ಅವರಿಗೆ ಪತ್ರ ಬರೆದಿದ್ದಾರೆ.

‘ನೀವು ಸುದ್ದಿಗೋಷ್ಠಿ ಮಾಡುವಾಗ ದರ್ಶನ್​ ಪತ್ನಿ ಪವಿತ್ರಾ ಗೌಡ ಎಂದು ತಪ್ಪಾಗಿ ಹೇಳಿದ್ದೀರಿ. ಆ ಬಳಿಕ ರಾಜ್ಯದ ಗೃಹಮಂತ್ರಿಗಳು, ರಾಷ್ಟ್ರಮಟ್ಟದ ಮಾಧ್ಯಮದರು ಕೂಡ ಅದನ್ನೇ ಹೇಳಿದರು. ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್​ ದಂಪತಿ ಅರೆಸ್ಟ್​ ಅಂತ ಸುದ್ದಿ ಮಾಡಿದರು.

ಇದರಿಂದಾಗಿ ನಾನು ಮತ್ತು ನನ್ನ ಮಗ ವಿನೀಶ್​ ಮುಂದಿನ ದಿನಗಳಲ್ಲಿ ತೊಂದರೆ ಅನುಭವಿಸುವಂತೆ ಆಗಬಾರದು. ಪವಿತ್ರಾ ಗೌಡಗೆ ಸಂಜಯ್​ ಸಿಂಗ್​ ಜೊತೆ ಮದುವೆ ಆಗಿತ್ತು. ಅವರಿಂದ ಮಗಳನ್ನೂ ಪಡೆದಿದ್ದಾರೆ. ಪೊಲೀಸ್​ ದಾಖಲೆಗಳಲ್ಲಿ ಈ ಮಾಹಿತಿ ಸ್ಪಷ್ಟವಾಗಿರಲಿ. ಇದರಿಂದ ನನಗೆ ಭವಿಷ್ಯದಲ್ಲಿ ತೊಂದರೆ ಆಗದಿರಲಿ’ ಎಂದು ಪತ್ರದಲ್ಲಿ ವಿಜಯಲಕ್ಷ್ಮಿ ಅವರು ಮನವಿ ಮಾಡಿಕೊಂಡಿದ್ದಾರೆ.

‘ನನಗೆ ನ್ಯಾಯಾಂಗದ ಮೇಲೆ ಸಂಪೂರ್ಣ ನಂಬಿಕೆ ಇದೆ. ಕಾನೂನು ತನ್ನದೇ ಸಮಯ ತೆಗೆದುಕೊಳ್ಳುತ್ತದೆ ಅಂತ ನಾನು ನಂಬಿದ್ದೇನೆ. ಈ ಕೇಸ್​ನ ಮಾಸ್ಟರ್​ ಮೈಂಡ್​ ಆಗಿರುವ ಪವಿತ್ರಾ ಗೌಡ ವಿಚಾರದಲ್ಲಿ ಮಾಹಿತಿ ಸೂಕ್ತವಾಗಿರಲಿ ಎಂದು ನಾನು ಒತ್ತಾಯಿಸುತ್ತೇನೆ. ಆಕೆ ನನ್ನ ಗಂಡನ ಸ್ನೇಹಿತೆ ಎಂಬುದು ನಿಜ. ಆದರೆ ಆಕೆ ನನ್ನ ಗಂಡನ ಪತ್ನಿ ಅಲ್ಲ ಎಂಬುದು ನಿಮಗೆ ದಯವಿಟ್ಟು ತಿಳಿದಿರಲಿ.

ನಾನು ಮಾತ್ರ ದರ್ಶನ್​ ಅವರನ್ನು ಕಾನೂನಾತ್ಮಕವಾಗಿ ಮದುವೆ ಆದವಳು. ಧರ್ಮಸ್ಥಳದಲ್ಲಿ 2003ರ ಮೇ 19ರಂದು ನಮ್ಮ ಮದುವೆ ನಡೆದಿತ್ತು’ ಎಂದು ವಿಜಯಲಕ್ಷ್ಮಿ ಅವರು ಬೆಂಗಳೂರು ಪೊಲೀಸ್ ಕಮೀಷನರ್ ದಯಾನಂದ್ ಅವರಿಗೆ ಬರೆದಿರುವ ಈ ಪತ್ರದಲ್ಲಿ ಮಾಹಿತಿ ನೀಡಿದ್ದಾರೆ.

ದರ್ಶನ್​ ಅವರ ಸಂಸಾರದಲ್ಲಿ ಬಿರುಕು ಮೂಡಲು ಪವಿತ್ರಾ ಗೌಡ ಅವರೇ ಕಾರಣ ಎಂಬ ಮಾತಿದೆ. ಈಗ ರೇಣುಕಾಸ್ವಾಮಿ ಕೊಲೆ ಕೇಸ್​ನಲ್ಲಿ ಕೂಡ ಪವಿತ್ರಾ ಎ1 ಆಗಿದ್ದಾರೆ. ದರ್ಶನ್​ ಎ2 ಆಗಿದ್ದಾರೆ. ಪವಿತ್ರಾ ಗೌಡಗೆ ಅಶ್ಲೀಲ ಸಂದೇಶ ಕಳಿಸಿದ್ದ ಎಂಬ ಕಾರಣಕ್ಕೆ ಚಿತ್ರದುರ್ಗದ ರೇಣುಕಾಸ್ವಾಮಿಯನ್ನು ಬೆಂಗಳೂರಿಗೆ ಕರೆಸಿ ಹತ್ಯೆ ಮಾಡಿದ ಆರೋಪ ದರ್ಶನ್​ ಮೇಲಿದೆ. ಅವರ ಜೊತೆ ಅನೇಕರು ಪೊಲೀಸರ ಬಲೆಗೆ ಬಿದ್ದಿದ್ದಾರೆ. ಈ ಕೇಸ್​ನ ಬಗ್ಗೆ ಸಮಗ್ರ ತನಿಖೆ ನಡೆಯುತ್ತಿದೆ.


Share It

You cannot copy content of this page