ಬೆಂಗಳೂರು: ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲಿನಲ್ಲಿ ಕಾಲ ಕಳೆಯುತ್ತಿರುವ ನಟ ದರ್ಶನ್ ಹೊರತರಲು ಪತ್ನಿ ವಿಜಯಲಕ್ಷ್ಮಿ ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದಾರೆ. ಈ ನಡುವೆ ನಗರದ ಪ್ರಮುಖ ಶಕ್ತಿ ದೇವತೆ ಬಂಡೆ ಮಕಾಳಮ್ಮನ ಮೊರೆ ಹೋಗಿದ್ದಾರೆ.
ದರ್ಶನ್ ಗೆ ಪ್ರಕರಣದಲ್ಲಿ ಯಾವುದೇ ರಿಲೀಫ್ ಸಿಕ್ಕಿದಂತೆ ಕಾಣುತ್ತಿಲ್ಲ. ಈ ಹಿನ್ನೆಲೆಯಲ್ಲಿ ವಿಜಯಲಕ್ಷ್ಮಿ ದರ್ಶನ್, ದೇವರ ಮೊರೆ ಹೋಗಿದ್ದಾರೆ. ಭಾನುವಾರ ಬೆಳಗ್ಗೆ ಬಸವನಗುಡಿಯ ಗವಿಪುರ ಗುಟ್ಟಹಳ್ಳಿಯಲ್ಲಿರುವ ಬಂಡೆ ಮಕಾಳಮ್ಮನ ಸನ್ನಿಗೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದಾರೆ.
ದೇವಸ್ಥಾನಕ್ಕೆ ಏಕಾಂಗಿಯಾಗಿ ಆಗಮಿಸಿದ್ದ ವಿಜಯಲಕ್ಷ್ಮಿ, ತಮ್ಮ ಪತಿಯನ್ನು ಈ ಸಂಕಷ್ಟದಿಂದ ಪಾರು ಮಾಡುವಂತೆ ಬೇಡಿಕೊಂಡಿದ್ದಾರೆ. ಕಾನೂನು ಹೋರಾಟ ನಡೆಸಲು ಅಗತ್ಯವಿರುವ ಶಕ್ತಿ ಕೊಡುವಂತೆಯೂ ತಾಯಿಯಲ್ಲಿ ಮೊರೆಯಿಟ್ಟಿದ್ದಾರೆ ಎನ್ನಲಾಗಿದೆ.
ವಿಶೇಷ ಪೂಜೆ ಸಲ್ಲಿಸಿದ ದೇವಸ್ಥಾನದ ಅರ್ಚಕರು, ದರ್ಶನ್ ಅವರಿಗೆ ಶನಿಕಾಟ, ರಾಹು ಕಾಟವಿರುವ ಕಾರಣ, ಹೀಗೆ ಒಂದಿಲ್ಲೊಂದು ವಿವಾದಕ್ಕೆ ಸಿಲುಕುತ್ತಿದ್ದಾರೆ. ಇದೆಲ್ಲವೂ ಕಳೆದು ಅವರಿಗೆ ರಾಜಯೋಗ ಬರುವ ಸಾಧ್ಯತೆ ಕೂಡ ಇದೆ. ದೇವಿಯ ಪ್ರಾರ್ಥನೆಯಿಂದ ಎಲ್ಲವೂ ಒಳ್ಳೆಯದಾಗಲಿದೆ ಎಂದು ವಿಜಯಲಕ್ಷ್ಮಿ ಅವರಿಗೆ ಹೇಳಿದ್ದಾರೆ ಎಂದು ಮೂಲಗಳು ತಿಳಿಸಿವೆ.