ಸುದ್ದಿ

ಜಿಲ್ಲಾಧಿಕಾರಿಗಳ ಭರವಸೆಗೆ ಒಪ್ಪಿದ ನಿವೇಶನ ವಂಚಿತರು

Share It

ತುಮಕೂರು : ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಅವರು ನೀಡಿದ ಭರವಸೆಯಿಂದ ನಿವೇಶನ ಹಕ್ಕುಪತ್ರ, ಸಾಗುವಳಿ ಚೀಟಿ, ಖಾತೆ ಪಹಣಿ ಒದಗಿಸಬೇಕೆಂದು ಕಳೆದ 8 ದಿನಗಳಿಂದ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ನಿವೇಶನ ವಂಚಿತರು ಆಹೋರಾತ್ರಿ ನಡೆಸುತ್ತಿದ್ದ ಧರಣಿಯನ್ನು ಹಿಂಪಡೆದರು.

ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಮಂಗಳವಾರ ರಾತ್ರಿ ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿಯ ಪದಾಧಿಕಾರಿಗಳೊಂದಿಗೆ ಸಭೆ ನಡೆಸಿದ ಜಿಲ್ಲಾಧಿಕಾರಿಗಳು ವಸತಿ ಹಕ್ಕು ವಂಚಿತರ ಬೇಡಿಕೆಗಳನ್ನು ಒಂದೊಂದಾಗಿ ಆಲಿಸಿ ಪರಿಹರಿಸುವ ಭರವಸೆ ನೀಡಿದರು.

ಜಿಲ್ಲೆಯ ತುಮಕೂರು, ಮಧುಗಿರಿ ಹಾಗೂ ಕೊರಟಗೆರೆ ತಾಲ್ಲೂಕಿನ ಕೆಲ ಗ್ರಾಮಗಳಲ್ಲಿ ಗುಡಿಸಲು ಹಾಕಿಕೊಂಡು ವಾಸವಿರುವ ಬಡ ಜನರು ಸುಮಾರು ಮೂರು ತಲೆಮಾರುಗಳಿಂದ ವಾಸಿಸಲು ಮನೆಗಳಿಲ್ಲದೆ, ನಿವೇಶನಗಳಿಲ್ಲದೆ, ವ್ಯವಸಾಯ ಮಾಡಿ ಜೀವನ ನಡೆಸಲು ಭೂಮಿಯಿಲ್ಲದೆ ತೊಂದರೆ ಅನುಭವಿಸುತ್ತಿದ್ದಾರೆ. ಭೂಮಿಗಾಗಿ ನಮೂನೆ 50, 53, 57ರಲ್ಲಿ ಸ್ಥಳೀಯ ಆಡಳಿತಕ್ಕೆ ಅರ್ಜಿ ಸಲ್ಲಿಸಿದ್ದು, ನಮ್ಮ ಅರ್ಜಿಗಳನ್ನು ಪರಿಗಣಿಸಿರುವುದಿಲ್ಲ. ಅರ್ಹ ಫಲಾನುಭವಿಗಳಿಗೆ ನಿವೇಶನ, ಸಾಗುವಳಿ ಚೀಟಿ, ಖಾತೆ, ಪಹಣಿ ಸೌಲಭ್ಯ ಕಲ್ಪಿಸಬೇಕೆಂದು ಸಮಿತಿಯ ಸಂಚಾಲಕ ಹಂದ್ರಾಳ್ ನಾಗಭೂಷಣ್ ಸಭೆಗೆ ಮನವಿ ಮಾಡಿದರು.

ತುಮಕೂರು ನಗರದ ಹೃದಯಭಾಗದಲ್ಲಿರುವ ಸರ್ಕಾರಿ ಚಿತ್ರಕಲಾ ಕಾಲೇಜಿಗೆ ಸ್ವಂತ ಕಟ್ಟಡವಿಲ್ಲದೆ ಮೂಲಭೂತ ಸೌಕರ್ಯಗಳಿಲ್ಲದೆ ಪ್ರತೀ ವರ್ಷ ವಿದ್ಯಾರ್ಥಿಗಳ ದಾಖಲಾತಿ ಸಂಖ್ಯೆ ಕ್ಷೀಣಿಸುತ್ತಿದ್ದು, ಪ್ರಸ್ತುತ ನಡೆಯುತ್ತಿರುವ ಕಾಲೇಜಿನ ನಿವೇಶನವನ್ನು ಸರ್ಕಾರಿ ಚಿತ್ರಕಲಾ ಕಾಲೇಜಿನ ಹೆಸರಿಗೆ ಖಾತೆ ಮಾಡಿಸಿಕೊಡಬೇಕಾಗಿ ಹೋರಾಟ ಸಮಿತಿ ಸಭೆಗೆ ಮನವಿ ಮಾಡಿತು.

ತುಮಕೂರು ತಾಲ್ಲೂಕಿನ ಕೋರಾ ಹೋಬಳಿ ಶಂಭೋನಹಳ್ಳಿ ಗ್ರಾಮದ ವಾಸಿ ರಾಮಯ್ಯ ಅವರು ಸಾಗುವಳಿ ಚೀಟಿ, ಖಾತೆ, ಪಹಣಿಗಾಗಿ ಮನವಿ ಸಲ್ಲಿಸಿದ್ದು, ಪರಿಗಣಿಸಲು ತುರ್ತಾಗಿ ಕ್ರಮಕೈಗೊಳ್ಳಬೇಕೆಂದು ಸಭೆಗೆ ಮನವಿ ಮಾಡಲಾಯಿತು.

ಅದೇ ರೀತಿ ಕೊರಟಗೆರೆ ತಾಲ್ಲೂಕು ಓಬನಹಳ್ಳಿ, ಹೊಳವನಹಳ್ಳಿ, ನೀಲಗೊಂಡನಹಳ್ಳಿ, ಇರಕಸಂದ್ರ ಕಾಲೋನಿ, ಮತ್ತಿತರ ಗ್ರಾಮಗಳಲ್ಲಿ ವಾಸಿಸುತ್ತಿರುವ ಎಲ್ಲಾ ಸಮುದಾಯದ ಬಡ ಜನರಿಗೆ ವಸತಿ ಸೌಲಭ್ಯ ಕಲ್ಪಿಸಬೇಕೆಂದು ಸಭೆಗೆ ನಿವೇದಿಸಿತು.

ಹೋರಾಟ ಸಮಿತಿಯ ಮನವಿಗಳಿಗೆ ಸ್ಪಂದಿಸಿ ಮಾತನಾಡಿದ ಜಿಲ್ಲಾಧಿಕಾರಿಗಳು ಮಧುಗಿರಿ ತಾಲ್ಲೂಕಿನಲ್ಲಿ 10 ತಿಂಗಳು ಕಳೆದರೂ ಆಶ್ರಯ ಸಮಿತಿ ಸಭೆಯನ್ನು ನಡೆಸಿಲ್ಲ. ಮುಂದಿನ ಜುಲೈ ೫ರಂದು ಸಮಿತಿ ಸಭೆ ನಡೆಸಿ ನಿವೇಶನ ವಂಚಿತ ಅರ್ಹ ಫಲನುಭವಿಗಳನ್ನು ಆಯ್ಕೆ ಮಾಡಿ ಪಟ್ಟಿ ಸಲ್ಲಿಸಬೇಕೆಂದು ತಹಶೀಲ್ದಾರ್ ಸಿಬ್ಗತುಲ್ಲಾ ಹಾಗೂ ಉಪವಿಭಾಗಾಧಿಕಾರಿ ಗೋಟೂರು ಶಿವಪ್ಪ ಅವರಿಗೆ ನಿರ್ದೇಶನ ನೀಡಿದರು.

ತುಮಕೂರು ನಗರದ ವಿವಿಧ ಬಡಾವಣೆಗಳಲ್ಲಿ ಗುಡಿಸಲು ನಿರ್ಮಿಸಿಕೊಂಡು ವಾಸ ಮಾಡುತ್ತಿರುವ ಸುಮಾರು 1 ಹಂದಿಜೋಗಿ ಕುಟುಂಬಗಳಿಗೆ ಜಿಲ್ಲಾಡಳಿತದಿಂದ ಅಮಲಾಪುರ ಗ್ರಾಮದಲ್ಲಿ ೧ ಎಕರೆ ಭೂಮಿಯನ್ನು ಮಂಜೂರು ಮಾಡಿದ್ದು, ಈವರೆಗೂ ಅಭಿವೃದ್ಧಿ ಕಾರ್ಯ ಕೈಗೊಳ್ಳದೆ ಹಕ್ಕುಪತ್ರ ವಿತರಣೆ ಮಾಡಿಲ್ಲವೆಂದು ಹೋರಾಟ ಸಮಿತಿ ದೂರು ನೀಡಿದ್ದು, ಕೈಗೊಂಡ ಕ್ರಮದ ಬಗ್ಗೆ ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಕೃಷ್ಣಪ್ಪ ಅವರನ್ನು ಪ್ರಶ್ನಿಸಿದಾಗ ಅಮಲಾಪುರದಲ್ಲಿ ಮಂಜೂರು ಭೂಮಿಯನ್ನು ಅಭಿವೃದ್ಧಿಪಡಿಸಲು ೧೫ ಲಕ್ಷ ರೂ.ಗಳ ಅನುದಾನ ಒದಗಿಸಲು ರಾಜೀವಗಾಂಧಿ ವಸತಿ ಅಭಿವೃದ್ಧಿ ನಿಗಮಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಅನುದಾನ ಬಿಡುಗಡೆಯಾದ ಕೂಡಲೇ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗುವುದೆಂದು ಜಿಲ್ಲಾಧಿಕಾರಿಗಳ ಅವಗಾಹನೆಗೆ ತಂದರು.

ಅಮಲಾಪುರದಲ್ಲಿ ತಾತ್ಕಾಲಿಕವಾಗಿ ಕಲ್ಪಿಸಿರುವ ವಿದ್ಯುತ್ ಸಂಪರ್ಕದಿಂದ ಹಾನಿ ಸಂಭವಿಸಬಹುದಾದ ಸೂಕ್ತ ಕ್ರಮಕೈಗೊಳ್ಳಲು ಹೋರಾಟ ಸಮಿತಿ ಪದಾಧಿಕಾರಿಗಳು ಜಿಲ್ಲಾಧಿಕಾರಿಗಳ ಮನವೊಲಿಸಿದಾಗ ಶುಭ ಕಲ್ಯಾಣ್ ತಕ್ಷಣವೇ ಬೆಸ್ಕಾಂ ಕಾರ್ಯನಿರ್ವಹಣಾಧಿಕಾರಿಗಳಿಗೆ ದೂರವಾಣಿ ಕರೆ ಮೂಲಕ ಒಂದು ದಿನದೊಳಗಾಗಿ ಸಮರ್ಪಕ ವಿದ್ಯುತ್ ಸಂಪರ್ಕಕ್ಕೆ ಕ್ರಮ ಕೈಗೊಳ್ಳಬೇಕೆಂದು ನಿರ್ದೇಶನ ನೀಡಿದರು.


Share It

You cannot copy content of this page