ಅಪರಾಧ ರಾಜಕೀಯ ಸುದ್ದಿ

DCC ಬ್ಯಾಂಕ್ ನೌಕರರ ಸಂಘದ ಅಧ್ಯಕ್ಷನ ಮೇಲೆ ಹಲ್ಲೆ ಪ್ರಕರಣ: ಅಥಣಿ ಶಾಸಕ ಲಕ್ಷ್ಮಣ ಸವದಿ ಮತ್ತು ಪುತ್ರನ ಮೇಲೆ FIR

Share It

ಚಿಕ್ಕೋಡಿ: ಬೆಳಗಾವಿ ಕೇಂದ್ರ ಸಹಕಾರಿ ಬ್ಯಾಂಕ್ (ಡಿಸಿಸಿ ಬ್ಯಾಂಕ್) ನೌಕರರ ಸಂಘದ ಅಧ್ಯಕ್ಷನ ಮೇಲೆ ನಡೆದಿದ್ದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅಥಣಿ ಕ್ಷೇತ್ರದ ಕಾಂಗ್ರೆಸ್ ಶಾಸಕ ಲಕ್ಷ್ಮಣ್ ಸವದಿ ಹಾಗೂ ಅವರ ಪುತ್ರ ಚಿದಾನಂದ ಸವದಿ ವಿರುದ್ಧ ಎಫ್‌ಐಆರ್ ದಾಖಲಾಗಿದೆ.

ಹಲ್ಲೆಗೊಳಗಾದ ನಿಂಗರಾಜ ಕರೆಣ್ಣವರ ಬೆಳಗಾವಿ ಆಸ್ಪತ್ರೆಗೆ ದಾಖಲಾಗಿದ್ದು, ಆಸ್ಪತ್ರೆಯಿಂದಲೇ ಅಥಣಿ ಪೊಲೀಸರಿಗೆ ದೂರು ನೀಡಿದ್ದಾರೆ. ಹೀಗಾಗಿ ಶಾಸಕ ಸವದಿ, ಪುತ್ರ ಚಿದಾನಂದ ಸೇರಿ ಒಟ್ಟು 8 ಜನರ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

“ನನ್ನನ್ನು ಲಕ್ಷ್ಮಣ್ ಸವದಿ ಅವರು ಮನೆಗೆ ಕರೆಯಿಸಿ ಅವಾಚ್ಯ ಶಬ್ಧಗಳಿಂದ ನಿಂದಿಸಿ ಹಲ್ಲೆ ಮಾಡಿದರು. ಲಕ್ಷ್ಮಣ ಸವದಿ ಅವರೇ ಕಪಾಳಕ್ಕೆ ಹೊಡೆದರು. ಪುತ್ರ ಚಿದಾನಂದ ಸವದಿ ಬಲವಾಗಿ ಸೊಂಟಕ್ಕೆ ಒದ್ದರು. ಬಳಿಕ ಕುಸಿದು ನೆಲಕ್ಕೆ ಬಿದ್ದ ನನ್ನ ಮೇಲೆ 7ರಿಂದ 8 ಜನರು ಹಲ್ಲೆ ನಡೆಸಿದರು” ಎಂದು ನಿಂಗರಾಜ ಕರೆಣ್ಣವರ ಆರೋಪಿಸಿದ್ದಾರೆ.

ಅಕ್ರಮ ತಂಡ ಸೇರಿ ಹಲ್ಲೆ, ಮಾರಣಾಂತಿಕ ಹಲ್ಲೆ, ಜೀವ ಬೆದರಿಕೆ, ಅವಾಚ್ಯ ಶಬ್ಧಗಳಿಂದ ನಿಂದಿಸಿರುವ ಕುರಿತಂತೆ ಬಿಎನ್‌ಎಸ್ ಕಾಯ್ದೆಯ 189(2), 191(2), 115(2), 351(2), 352 (2), 190 ಕಲಂ ಅಡಿ ಪ್ರಕರಣ ದಾಖಲಿಸಲಾಗಿದೆ.


Share It

You cannot copy content of this page