ಉಪಯುಕ್ತ ರಾಜಕೀಯ ಸುದ್ದಿ

ರಾಜ್ಯದ ಎಲ್ಲ ಶಾಲೆಗಳಲ್ಲಿ ಹಳೇ ವಿದ್ಯಾರ್ಥಿಗಳ ಸಂಘ ಕಡ್ಡಾಯ: ಶಿಕ್ಷಣ ಸಚಿವರಿಗೆ ಡಿಸಿಎಂ ಸಲಹೆ

Share It

ಬೆಂ.ದಕ್ಷಿಣ (ಚನ್ನಪಟ್ಟಣ): “ಇಡೀ ರಾಜ್ಯದ ಎಲ್ಲಾ ಶಾಲೆಗಳಲ್ಲಿ ಹಳೇ ವಿದ್ಯಾರ್ಥಿಗಳ ಸಂಘವನ್ನು ಕಡ್ಡಾಯವಾಗಿ ರಚನೆ ಮಾಡಲು ಆದೇಶ ಹೊರಡಿಸಿ. ಈ ಸಂಘಗಳಿಂದ ಸರ್ಕಾರಿ ಶಾಲೆಗಳಿಗೆ ಶಕ್ತಿ ತುಂಬುವ ಕೆಲಸ ಆಗುತ್ತದೆ. ಇದಕ್ಕೆ ಅಗತ್ಯ ಮಾರ್ಗದರ್ಶನ ನೀಡುತ್ತೇನೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಪ್ರಾಥಮಿಕ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರಿಗೆ ಸಲಹೆ ನೀಡಿದರು.

ಬೆಂಗಳೂರು ದಕ್ಷಿಣ ಜಿಲ್ಲೆ ಚನ್ನಪಟ್ಟಣ ತಾಲೂಕಿನ ಹೊಂಗನೂರಿನಲ್ಲಿ ಡಾ. ವೆಂಕಟಪ್ಪ ಅವರು ತಮ್ಮ ಕಣ್ವ ಫೌಂಡೇಶನ್ ನಿಂದ ನಿರ್ಮಿಸಿರುವ ಶ್ರೀಮತಿ ಚನ್ನಮ್ಮ ಮಂಚೇಗೌಡ ಕರ್ನಾಟಕ ಪಬ್ಲಿಕ್ ಶಾಲೆ ನೂತನ ಕಟ್ಟಡವನ್ನು ಶಿವಕುಮಾರ್ ಅವರು ಶುಕ್ರವಾರ ಉದ್ಘಾಟಿಸಿ ಮಾತನಾಡಿದರು.

“ಸರ್ಕಾರಿ ಶಾಲೆಯಲ್ಲಿ ಓದಿ ದೊಡ್ಡ ಮಟ್ಟಕ್ಕೆ ಬೆಳೆದಿರುವವರು ಆ ಶಾಲೆಯ ಕಲ್ಯಾಣಕ್ಕೆ ಅಗತ್ಯ ನೆರವು ನೀಡುತ್ತಾರೆ. ಇದಕ್ಕೆ ಅಗತ್ಯ ಸಂಘಟನೆ ಆಗಬೇಕು. ವೆಂಕಟಪ್ಪನವರು ಮಾಡಿರುವ ಸಾಹಸಕ್ಕೆ ಇನ್ನು ಹೆಚ್ಚಿನ ಜನ ಕೈ ಹಾಕಬೇಕು. ಇಂತಹ ಕೆಲಸಗಳು ಸಮಾಜದಲ್ಲಿ ಅವರ ಹೆಸರುಗಳನ್ನು ಶಾಶ್ವತವಾಗಿ ಉಳಿಸುತ್ತವೆ” ಎಂದು ತಿಳಿಸಿದರು.

“ಮಕ್ಕಳ ಕೈಯಲ್ಲಿ ಈ ಶಾಲೆ ಉದ್ಘಾಟನೆ ಮಾಡಿಸಿದ್ದೇವೆ. ನನ್ನಂತೆಯೇ ಈ ಊರಿನ ಮಕ್ಕಳು ಬೆಳೆಯಬೇಕು ಎಂಬ ವೆಂಕಟಪ್ಪನವರ ದೂರದೃಷ್ಟಿಯಿಂದ ಈ ಜ್ಯೋತಿಯನ್ನು ಬೆಳಗಿಸಲಾಗಿದೆ. ಶುಭಂ ಕರೋತಿ ಕಲ್ಯಾಣಂ ಆರೋಗ್ಯ, ಧನಸಂಪದಂ. ಜ್ಞಾನ ಶಕ್ತಿ ಸ್ವರೂಪಸ್ಯ ದೀಪ ಜ್ಯೋತಿ ಪ್ರಕಾಶಿತಃ ಎಂಬ ಶ್ಲೋಕದ ಆಶಯದಂತೆ ನಿಮ್ಮೆಲ್ಲರಿಗೂ ಮಂಗಳವಾಗಲಿ ಎಂದು ಇಲ್ಲಿರುವ ಎಲ್ಲಾ ಹಿರಿಯರು ಆಶೀರ್ವಾದ ಮಾಡಿದ್ದೇವೆ.

“ದೀಪದಿಂದ ಜ್ಯೋತಿ ಬೆಳಗುತ್ತಿದ್ದು, ಅಕ್ಷರದಿಂದ ಬದುಕು ಬೆಳಗುತ್ತದೆ. ನಿಮ್ಮ ಶಿಕ್ಷಕರು ಹೇಳಿಕೊಟ್ಟ ಅಕ್ಷರದಿಂದ ನಿಮ್ಮ ಬದುಕು ಬೆಳಗಲಿ. ಎದೆಯೊಳಗೆ ಅಕ್ಷರ, ಭೂಮಿಗೆ ಬಿದ್ದ ಬೀಜ ಇಂದಲ್ಲ ನಾಳೆ ಫಲ ಕೊಟ್ಟೇ ಕೊಡುತ್ತದೆ. ನಾವು ಎಷ್ಟೇ ದೊಡ್ಡವರಾದರೂ ಕೊನೆಗೆ ಶಿಕ್ಷಕರಿಗೆ ಕೊಡುವ ಸ್ಥಾನಮಾನವನ್ನು ಬೇರೆಯವರಿಗೆ ನೀಡುವುದಿಲ್ಲ. ಅನ್ನ ಹೊಟ್ಟೆ ತುಂಬಿಸುತ್ತದೆ. ಆದರೆ ಅಕ್ಷರ ಹೊಟ್ಟೆ ತುಂಬಿಸಲು ಮಾರ್ಗದರ್ಶನ ನೀಡುತ್ತದೆ.

ಇಡೀ ರಾಜ್ಯದಲ್ಲಿ 2 ಸಾವಿರ ಸಿಎಸ್ಆರ್ ಶಾಲೆ ನಿರ್ಮಿಸಲು ಸರ್ಕಾರ ಸಂಕಲ್ಪ ಮಾಡಿದೆ. ಶಿಕ್ಷಣ ನನ್ನ ನೆಚ್ಚಿನ ಕ್ಷೇತ್ರ. ನಾನು ಹುಟ್ಟುತ್ತಾ ಕೃಷಿಕ, ವೃತ್ತಿಯಲ್ಲಿ ಉದ್ಯಮಿ, ಆಯ್ಕೆಯಲ್ಲಿ ಶಿಕ್ಷಣ ಪ್ರೇಮಿ, ಆಸಕ್ತಿಯಲ್ಲಿ ರಾಜಕಾರಣಿ ಎಂದು ಹೇಳುತ್ತಿರುತ್ತೇನೆ. ನನಗೆ ಉತ್ತಮ ಶಿಕ್ಷಣ ಕೊಡಿಸಲು ನಮ್ಮ ತಂದೆ ತಾಯಿ ನನ್ನನ್ನು ಬೆಂಗಳೂರಿನಲ್ಲಿ ಶಾಲೆಗೆ ಸೇರಿಸಿದರು. ನಾನು ಕಲಿತ ಸ್ವಲ್ಪ ವಿದ್ಯೆಯಿಂದ ಇಲ್ಲಿಯವರೆಗೂ ಬೆಳೆದಿದ್ದೇನೆ” ಎಂದರು.


Share It

You cannot copy content of this page