ಬೆಂಗಳೂರು: ಧರ್ಮಸ್ಥಳದ ವ್ಯಾಪ್ತಿಯಲ್ಲಿ ನಡೆದಿವೆ ಎನ್ನಲಾಗುತ್ತಿರುವ ನೂರಾರು ಮಹಿಳೆಯರ ಸಾವುಗಳಿಗೆ ಸಂಬಂಧಿಸಿದಂತೆ ಸೂಕ್ತ ತನಿಖೆ ನಡೆಸಲು ವಿಶೇಷ ತನಿಖಾ ತಂಡವನ್ನು ನಿಯೋಜನೆ ಮಾಡುವಂತೆ ಮಹಿಳಾ ಆಯೋಗ ಸಿಎಂ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದೆ.
ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮೀ ಚೌಧರಿ ಅವರು, ಸಿಎಂ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದು, ಧರ್ಮಸ್ಥಳ ವ್ಯಾಪ್ತಿಯಲ್ಲಿನ ಸಾವಿನ ಪ್ರಕರಣಗಳಿಗೆ ಸಂಬಂಧಿಸಿದಂತೆ ವಿಶೇಷ ತನಿಖಾ ತಂಡ ರಚನೆ ಮಾಡಬೇಕು. ಧರ್ಮಸ್ಥಳದ ವ್ಯಾವ್ತಿಯಲ್ಲಿ ನೂರಾರು ಶವಗಳನ್ನು ಹೂತಿರುವುದಾಗಿ ನ್ಯಾಯಾಲಯದ ಮುಂದೆ ಹೇಳಿಕೆ ದಾಖಲಿಸಿದ್ದಾನೆ. ಈ ಸಂಬಂಧ ಸೂಕ್ತ ತನಿಖೆಯ ಅಗತ್ಯವಿದೆ ಎಂದು ಒತ್ತಾಯಿಸಿದ್ದಾರೆ.
ಇಪ್ಪತ್ತು ವರ್ಷಗಳಿಂದ ಈ ಭಾಗದಲ್ಲಿ ಮಹಿಳೆಯರ ಮೇಲೆ ಗಂಭೀರ ಸ್ವರೂಪದ ದೌರ್ಜನ್ಯ, ಹತ್ಯೆ, ಅತ್ಯಾಚಾರ, ಅಸ್ವಾಭಿವಕ ಸಾವು ಮತ್ತು ನಾಪತ್ತೆ ಪ್ರರಣಗಳು ನಡೆದಿರುವ ಬಗ್ಗೆ ಆಗಾಗ ವರದಿಯಾಗುತ್ತಲೇ ಇದೆ. ಈ ಬಗ್ಗೆ ದೂರು ನೀಡಲು ಹೋದಾಗ ಪೊಲೀಸರು ಕುಟುಂಬಸ್ಥರಿಗೆ ಸೂಕ್ತ ರೀತಿಯಲ್ಲಿ ಸ್ಪಂದಿಸಿಲ್ಲ ಎಂದು ಕೂಡ ಹೇಳಲಾಗಿದೆ. ಹೀಗಾಗಿ, ಇಡೀ ಪ್ರಕರಣದ ಸೂಕ್ತ ತನಿಖೆಯಾಗಬೇಕು. ಆ ತನಿಖೆಗೆ ಒಂದು ವಿಶೇಷ ತನಿಖಾ ತಂಡವನ್ನು ರಚನೆ ಮಾಡಬೇಕು ಎಂದು ಅವರು ಸಿಎಂಗೆ ಮನವಿ ಮಾಡಿದ್ದಾರೆ.