ಬೆಂಗಳೂರು: ಎಲೆಕ್ಟ್ರಾನಿಕ್ ಸಿಟಿ ಫ್ಲೈ ಓವರ್ ಮೇಲೆ ನಡೆದ ಅಪಘಾತದಲ್ಲಿ ಸಾವನ್ನಪ್ಪಿದ ಮಂಜುನಾಥ್ ಸಾವಿಗೆ ನ್ಯಾಯ ಒದಗಿಸಬೇಕು ಎಂದು ಒತ್ತಾಯಿಸಿ ಶವವನ್ನು ಬಿಇಟಿಪಿಎಲ್ ಮುಂದಿಟ್ಟು ಪ್ರತಿಭಟನೆ ನಡೆಸಲಾಗುತ್ತಿದೆ.
ಮೃತ ಮಂಜುನಾಥ್ ಬಿಇಟಿಪಿಎಲ್ ನಲ್ಲಿ ವ್ಯವಸ್ಥಾಪಕರಾಗಿ ಕೆಲಸ ಮಾಡುತ್ತಿದ್ದರು. ಎಲೆಕ್ಟ್ರಾನಿಕ್ ಸಿಟಿ ಫ್ಲೈ ಓವರ್ ಮೇಲೆ ಕಾರೊಂದು ಕೆಟ್ಟುನಿಂತಿರುವ ದೂರು ಬಂದಿತ್ತು. ಟೋಯಿಂಗ್ ಸಿಬ್ಬಂದಿ ಜತೆ ವಾಹನದಲ್ಲಿ ತೆರಳಿದ ಮಂಜುನಾಥ್, ಟೋಯಿಂಗ್ ಪ್ರಕ್ರಿಯೆ ನಡೆಸುತ್ತಿದ್ದರು. ಹಿಂದಿನಿಂದ ಟಾಟಾ ಏಸ್ ವಾಹನ ಡಿಕ್ಕಿ ಹೊಡೆದಿದೆ.
ಅಪಘಾತದ ರಭಸಕ್ಕೆ ಟೋಯಿಂಗ್ ವಾಹನ, ಕೆಟ್ಟುನಿಂತಿದ್ದ ಕಾರು ಸೇರಿ ಮುಂದೆ ಬರುತ್ತಿದ್ದ ಕೆಲ ವಾಹನಗಳಿಗೂ ಹಾನಿಯಾಗಿದೆ. ಜತೆಗೆ, ವಾಹನ ಟೋಯಿಂಗ್ ಮಾಡಿಸುತ್ತಾ ನಿಂತಿದ್ದ ಮಂಜುನಾಥ್ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಇನ್ನಿಬ್ಬರು ಸಿಬ್ಬಂದಿ ಗಾಯಗೊಂಡಿದ್ದಾರೆ.
ಮಂಜುನಾಥ್ ಮೃತಪಟ್ಟಿದ್ದರೂ, ಟೋಲ್ ಆಡಳಿತ ಮಂಡಳಿ ಅವರಿಗೆ ಯಾವುದೇ ಪರಿಹಾರ ಘೋಷಣೆ ಮಾಡಿಲ್ಲ, ಅವರ ಅಂತ್ಯ ಸಂಸ್ಕಾರಕ್ಕೂ ಸಹಕಾರ ನೀಡುತ್ತಿಲ್ಲ ಎಂದು ಆಗ್ರಹಿಸಿ, ಮಂಜುನಾಥ್ ಕುಟುಂಬಸ್ಥರು ಮತ್ತು ಟೋಲ್‌ನ ಇತರೆ ಸಿಬ್ಬಂದಿ ಕಚೇರಿ ಮುಂದೆ ಪ್ರತಿಭಟನೆ ನಡೆಸುತ್ತಿದ್ದಾರೆ.
ಮಂಜುನಾಥ್ ಶವವನ್ನು ಕಚೇರಿ ಮುಂದಿಟ್ಟು ಪ್ರತಿಭಟನೆ ನಡೆಸುತ್ತಿದ್ದು, ಸೂಕ್ತ ಪರಿಹಾರ ಸಿಗುವವರೆಗೆ ಅಂತ್ಯಸಂಸ್ಕಾರ ಮಾಡುವುದಿಲ್ಲ ಎಂದು ಪಟ್ಟುಹಿಡಿದಿದ್ದಾರೆ. ಮಂಜುನಾಥ್ ಪುತ್ರಿಯ ವಿವಾಹ ಇದೇ ಆಗಸ್ಟ್ 10 ರಂದು ನಿಗದಿಯಾಗಿದ್ದು, ಮಗಳ ಮದುವೆಗೆ ಮುಂಚೆಯೇ ತಂದೆ ಸಾವಿಗೀಡಾಗಿರುವುದು ದುರಂತವೇ ಸರಿ.