ಅಪರಾಧ ಸುದ್ದಿ

ತಂದೆ ಮತ್ತು ಮಗನ ಕಸ್ಟಡಿ ಸಾವು: 9 ಪೊಲೀಸರಿಗೆ ಮರಣದಂಡನೆ ತೀರ್ಪು

Share It

ಮದುರೈ: ತಂದೆ ಮತ್ತು ಮಗ ಪೊಲೀಸ್ ಕಸ್ಟಡಿಯಲ್ಲಿ ಸಾವನ್ನಪ್ಪಿದ್ದ ಪ್ರಕರಣದಲ್ಲಿ ಮದುರೈ ಮೊದಲ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಲಯ ಐತಿಹಾಸಿಕ ತೀರ್ಪು ನೀಡಿದ್ದು, 9 ಪೊಲೀಸರಿಗೆ ಮರಣದಂಡನೆ ಶಿಕ್ಷೆ ವಿಧಿಸಿದೆ.

ಟುಟಿಕಾರಿನ್ ಜಿಲ್ಲೆಯ ಸಾಥನ್ ಕುಲಂ ನಲ್ಲಿ ಕೋವಿಡ್ 19 ಲಾಕ್‌ಡೌನ್ ಸಮಯದಲ್ಲಿ ಅವಧಿ ಮೀರಿ ತಮ್ಮ ಅಂಗಡಿ ತೆರೆದಿದ್ದ ಕಾರಣಕ್ಕೆ ಜೂನ್ 19 2020ರಂದು ಪಿ. ಜಯರಾಜ್ ಮತ್ತು ಅವರ ಮಗ ಜೆ.ಬೆನಿಕ್ಸ್‌ನಲ್ಲಿ ಪೊಲೀಸರು ಕಸ್ಡಿಗೆ ತೆಗೆದುಕೊಂಡು ಹೋಗಿದ್ದರು.

ಅಂದು ರಾತ್ರಿಯಿಡೀ ಅವರನ್ನು ಠಾಣೆಯಲ್ಲಿ ಥಳಿಸಿ, ಬೆಳಗ್ಗೆಗೆ ಕೋವಿಲ್ ಪಟ್ಟಿ ಸಬ್ ಜೈಲಿಗೆ ಕಳುಹಿಸಿದರು. ಜೂನ್ 22ರಂದು ಕೋವಿಲ್ ಪಟ್ಟಿ ಸರಕಾರಿ ಆಸ್ಪತ್ರೆಯಲ್ಲಿ ಪೊಲೀಸರ ಏಟಿನಿಂದಾಗಿ ಬೆನಿಕ್ಸ್‌ ಸಾವನ್ನಪ್ಪಿದ್ದರೆ, ಜೂನ್ 23ರಂದು ತಂದೆ ಜಯರಾಜ್ ಕೂಡ ನಿಧನರಾಗಿದ್ದರು.

ಆಗಿನ ಇನ್ಸ್‌ಪೆಕ್ಟರ್ ಎಸ್.ಶ್ರೀಧರ್, ಸಬ್ ಇನ್ಸ್‌ಪೆಕ್ಟರ್‌ಗಳಾದ ಕೆ.ಬಾಲಕೃಷ್ಣನ್ ಮತ್ತು ಪಿ.ರಘು ಗಣೇಶ್, ಹೆಡ್ ಕಾನ್ಸ್‌ಟೇಬಲ್‌ಗಳಾದ ಎಸ್.ಮುರುಗನ್, ಎ.ಸಮದುರೈ ಮತ್ತು ನಾಲ್ವರು ಕಾನ್ಸ್‌ಟೇಬಲ್‌ಗಳಾದ ಎಂ.ಮುತ್ತುರಾಜ್, ಎ.ಚೆಲ್ಲಾದುರೈ, ಎಕ್ಸ್‌ ಥಾಮಸ್ ಪ್ರಾನ್ಸಿಸ್ ಮತ್ತು ಎಸ್.ವೈಲ್‌ಮುತ್ತು ಆರೋಪಿಗಳಾಗಿದ್ದರು.

10 ನೇ ಆರೋಪಿ ಆಗಿನ ವಿಶೇಷ ಸಬ್ ಇನ್ಸ್‌ಪೆಕ್ಟರ್ ಪಾಲ್ದುರೈ ಕೂಡ ಬಂಧಿಸಲ್ಪಟ್ಟಿದ್ದು, ಆಗಸ್ಟ್‌ 2020ರಲ್ಲಿ ಕೋವಿಡ್‌ನಿಂದ ಮೃತಪಟ್ಟಿದ್ದರು. ಈ ಜೋಡಿ ಕೊಲೆಗೆ ಸಂಬಂಧಿಸಿದಂತೆ ಉಳಿದ 9 ಆರೋಪಿಗಳಿಗೆ ಮರಣದಂಡನೆ ವಿಧಿಸಿದ ನ್ಯಾಯಾಲಯ ಎಲ್ಲ ಆರೋಪಿಗಳಿಂದ ಒಂದು ಕೋಟಿಗೂ ಹೆಚ್ಚು ದಂಡ ವಸೂಲಿ ಮಾಡುವಂತೆಯೂ ಸೂಚನೆ ನೀಡಿತು.

ಪ್ರಕರಣದ ವಿಚಾರಣೆ ನಡೆಸಿದ ಮದುರೈ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಲಯದ ನ್ಯಾಯಧೀಶರಾದ ಮುತ್ತುಕುಮಾರನ್ ಅವರು, ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ಸಾಕಾಗುವುದಿಲ್ಲ. ಇಂತಹ ಘಟನೆಗಳು ಮರುಕಳಿಸಬಾರದು ಎಂದರೆ ಕಠಿಣ ಶಿಕ್ಷೆಗೆ ಗುರಿಪಡಿಸಲೇಬೇಕು. ಈ ಘಟನೆಯಿಂದ ಸಮಾಜಕ್ಕೆ ತಪ್ಪು ಸಂದೇಶ ಹೋಗಿದೆ. ಇದನ್ನು ತೊಡೆದುಕೊಳ್ಳಲು ಪೊಲೀಸರಿಗೆ ಶಿಕ್ಷೆ ವಿಧಿಸಲೇಬೇಕು ಎಂದರು.


Share It

You cannot copy content of this page