ನವದೆಹಲಿ: ದೆಹಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್-1 ರ ಮೇಲ್ಚಾವಣಿ ಕುಸಿದು ಭಾರಿ ಅವಘಡ ಸಂಭವಿಸಿದ್ದು, ಘಟನೆಯಲ್ಲಿ ಓರ್ವ ಸಾವನ್ನಪ್ಪಿದ್ದು, ಐವರು ಗಾಯಗೊಂಡಿದ್ದಾರೆ.
ಸಾವನ್ನಪ್ಪಿದ ಹಾಗೂ ಗಾಯಗೊಂಡವರ ಕುಟುಂಬಕ್ಕೆ ಕೇಂದ್ರ ನಾಗರಿಕ ವಿಮಾನಯಾನ ಇಲಾಖೆ ಪರಿಹಾರ ಘೋಷಣೆ ಮಾಡಿದೆ. ಮೃತರ ಕುಟುಂಬಕ್ಕೆ 20 ಲಕ್ಷ ಮತ್ತು ಗಾಯಗೊಂಡವರಿಗೆ 3 ಲಕ್ಷ ಪರಿಹಾರ ಘೋಷಣೆ ಮಾಡಿ ಕೇಂದ್ರ ನಾಗರೀಕ ವಿಮಾನಯಾನ ಸಚಿವ ರಾಮ್ ಮೋಹನ್ ನಾಯ್ಡು ಆದೇಶ ನೀಡಿದ್ದಾರೆ.
ಟರ್ಮಿನಲ್ ಮೇಲ್ಚಾವಣಿ ಕುಸಿತದಿಂದ ಆಗಿರುವ ಅಡೆತಡೆಗೆ ಸಂಬಂಧಿಸಿ ಪ್ರಯಾಣಿಕರಿಗೆ ಪರ್ಯಾಯ ವಿಮಾನಗಳಲ್ಲಿ ಪ್ರಯಾಣಕ್ಕೆ ಅವಕಾಶ ಕಲ್ಪಿಸಲು ಅಥವಾ ನಿಯಮಗಳ ಅಡಿ ಸಂಪೂರ್ಣ ಮರುಪಾವತಿ ಒದಗಿಸಲು ಸಲಹೆ ನೀಡಲಾಗಿದೆ” ಎಂದು ವಿಮಾನಯಾನ ನಿರ್ದೇಶನಾಲಯ ತಿಳಿಸಿದೆ.
ಟರ್ಮಿನಲ್ ೩ ಮತ್ತು ಟರ್ಮಿನಲ್ ೨ರಲ್ಲಿ ಎಲ್ಲಾ ವಿಮಾನಗಳು ಸಂಪೂರ್ಣವಾಗಿ ಕಾರ್ಯಾಚರಣೆ ನಡೆಸುತ್ತವೆ. ಟರ್ಮಿನಲ್ ೧ರಿಂದ ಹೊರಡುವ ವಿಮಾನಗಳನ್ನು ಇಂದು (ಶುಕ್ರವಾರ) ಮಧ್ಯಾಹ್ನ ೨ ಗಂಟೆಯವರೆಗೆ ರದ್ದುಗೊಳಿಸಲಾಗಿದೆ ಎಂದು ದೆಹಲಿ ಅಂತಾರಾಷಟ್ರೀಯ ವಿಮಾನ ನಿಲ್ದಾಣ ಪ್ರಾಧಿಕಾರ ತಿಳಿಸಿದೆ.
ಇಂಡಿಗೋ ಮತ್ತು ಸ್ಪೈಸ್‌ಜೆಟ್ ಟರ್ಮಿನಲ್ 1 ರಿಂದ ಮಧ್ಯಾಹ್ನ 2 ಗಂಟೆಯವರೆಗೆ ಹೊರಡುವ ಎಲ್ಲಾ ವಿಮಾನಗಳನ್ನು ರದ್ದುಗೊಳಿಸಲಾಗಿದೆ. ಟರ್ಮಿನಲ್‌ನ ಮೇಲ್ಚಾವಣಿ ಕುಸಿದ ನಂತರ 6 ಜನರು ಅವಶೇಷಗಳಡಿ ಸಿಲುಕಿದ್ದರು. ಅವರನ್ನು ಸ್ಥಳಾಂತರಿಸಿ ಮೇದಾಂತ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ವೇಳೆ ಓರ್ವ ಸಾವನ್ನಪ್ಪಿದ್ದು, 5 ಮಂದಿ ಗಾಯಗೊಂಡಿದ್ದಾರೆ. ಗಾಯಾಳುಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಟರ್ಮಿನಲ್ 1 ಕುಸಿದಿದ್ದು ಹೇಗೆ?: ಶುಕ್ರವಾರ ಮುಂಜಾನೆ ಎಡೆಬಿಡದೇ ಸುರಿದ ಮಳೆಯಿಂದಾಗಿ ಐಜಿಐ ವಿಮಾನ ನಿಲ್ದಾಣದ ಟಿ-1 ರ ಮೇಲ್ಚಾವಣಿ ಕುಸಿದಿದೆ. ಅಲ್ಲಿ ನಿಂತಿದ್ದ ಕಾರು ಮತ್ತು ಟ್ಯಾಕ್ಸಿ ಜಖಂಗೊAಡಿವೆ. ಘಟನೆ ಬಗ್ಗೆ ಪೊಲೀಸ್ ಆಂಬ್ಯುಲೆನ್ಸ್ ಮತ್ತು ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಲಾಗಿದೆ. ಅಗ್ನಿಶಾಮಕ ದಳದಿಂದ ಬಂದ ಮಾಹಿತಿಯ ಪ್ರಕಾರ, ಬೆಳಗ್ಗೆ ೫.೩೦ರ ಸುಮಾರಿಗೆ ಕರೆ ಬಂದಿತು. ನಂತರ ಮೂರು ಅಗ್ನಿಶಾಮಕ ವಾಹನಗಳನ್ನು ಸ್ಥಳಕ್ಕೆ ಧಾವಿಸಿವೆ. ಇತರ ಇಲಾಖೆಗಳ ತಂಡಗಳೂ ಸ್ಥಳದಲ್ಲಿ ಬೀಡುಬಿಟ್ಟಿವೆ.