ದೆಹಲಿ ಯಾತ್ರೆ ದೇವರು ಕೊಟ್ಟ ವರ, ಏ.12 ರಂದು ನಾಮಪತ್ರ ಸಲ್ಲಿಸುತ್ತೇನೆ: ಈಶ್ವರಪ್ಪ
ದೇವನಹಳ್ಳಿ: ಏಪ್ರಿಲ್ 12ರಂದು ಶಿವಮೊಗ್ಗ ಕ್ಷೇತ್ರದಿಂದ ನಾಮಪತ್ರ ಸಲ್ಲಿಸುತ್ತೇನೆ ಎಂದು ಮಾಜಿ ಡಿಸಿಎಂ ಕೆ.ಎಸ್ ಈಶ್ವರಪ್ಪ ಹೇಳಿದ್ದಾರೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ಬಳಿಯ ಕೆಂಪೇಗೌಡ ಏರ್ಪೋರ್ಟ್ನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಚುನಾವಣೆಗೆ ಸ್ಪರ್ಧಿಸಲು ದೆಹಲಿ ಯಾತ್ರೆ ಭಗವಂತ ಕೊಟ್ಟ ವರ. ಏಪ್ರಿಲ್ 12ರಂದು ಬೃಹತ್ ಮೆರವಣಿಗೆ ಮೂಲಕ ನಾಮಪತ್ರ ಸಲ್ಲಿಸುತ್ತೇನೆ. ಕ್ಷೇತ್ರದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ನಿಂದಲೂ ನನಗೆ ಬೆಂಬಲ ಸಿಗುತ್ತಿದೆ ಎಂದು ಹೇಳಿದ್ದಾರೆ.
ದೆಹಲಿಯಲ್ಲಿ ಗೃಹ ಸಚಿವ ಅಮಿತ್ ಶಾ ಭೇಟಿಗೆ ಅವಕಾಶ ಕೊಟ್ಟಿಲ್ಲ. ಬೇಡಿಕೆಯಿಟ್ಟಿದ್ದ ಪ್ರಶ್ನೆಗೆ ಉತ್ತರಿಸಲಾಗದೆ ಭೇಟಿಗೆ ಅವಕಾಶ ನೀಡಿಲ್ಲ. ದೇಶದಲ್ಲಿ ಕಾಂಗ್ರೆಸ್ನಿಂದ ಕುಟುಂಬ ರಾಜಕಾರಣ ನಡೆಯುತ್ತಿದೆ. ಕರ್ನಾಟಕದಲ್ಲಿ ಬಿಎಸ್ ಯಡಿಯೂರಪ್ಪ ಕುಟುಂಬ ರಾಜಕಾರಣ ನಡೆಯುತ್ತಿದೆ. ಹೀಗಾಗಿ ಅವರ ವಿರುದ್ಧ ರಾಜ್ಯದಲ್ಲಿ ಹೋರಾಟ ಮಾಡ್ತಿದ್ದೀನಿ ಎಂದು ಹೇಳಿದ್ದಾರೆ.
ನನ್ನ ಹೃದಯದಲ್ಲಿ ಮೋದಿ ಹಾಗೂ ಶ್ರೀರಾಮ ಇದ್ದಾರೆ: ಕೆ.ಎಸ್ ಈಶ್ವರಪ್ಪ
ಸುಮಲತಾ ಬಿಜೆಪಿಗೆ ಬಂದಿರುವುದು ಸ್ವಾಗತ. ಬಿಜೆಪಿಗೆ ಯಾರೆಲ್ಲ ಬರುತ್ತಾರೋ ಅವರಿಗೆಲ್ಲಾ ಸ್ವಾಗತ. ನರೇಂದ್ರ ಮೋದಿ ಮತ್ತೆ ದೇಶದ ಪ್ರಧಾನಿಯಾಗಬೇಕು. ನನ್ನ ಹೃದಯದಲ್ಲಿ ಮೋದಿ ಹಾಗೂ ಶ್ರೀರಾಮ ಇದ್ದಾರೆ. ಮೋದಿಗೆ ಬೆಂಬಲ ಕೊಡದಿದ್ರೆ ನನ್ನ ಕೈಕಟ್ ಆಗಿಬಿಡುತ್ತೆ. ಚುನಾವಣೆಯಲ್ಲಿ ಗೆದ್ದ ಮೇಲೆ ಮೋದಿ ಬಳಿ ಹೋಗುತ್ತೇನೆ ಎಂದಿದ್ದಾರೆ.
ರಾಜ್ಯದ, ದೇಶದ ಜನ ಮೋದಿ ಕೈ ಎತ್ತಬೇಕು ಎನ್ನುವ ಅಪೇಕ್ಷೆಯಿದೆ. ನನ್ನ ಜೊತೆ ಗೂಳಿಹಟ್ಟಿಶೇಖರ್ ಸೇರಿದಂತೆ ಅನೇಕರು ಇದ್ದಾರೆ. ಎಲ್ಲರೂ ನನ್ನ ಜೊತೆ ಸೇರುತ್ತಾರೆ ನನಗೆ ಬೆಂಬಲ ನೀಡುತ್ತಾರೆ ಎಂದು ಈಶ್ವರಪ್ಪ ಹೇಳಿದ್ದಾರೆ.