ಬೆಂಗಳೂರು: ಧರ್ಮಸ್ಥಳ ಯಾವುದೇ ಒಂದು ಕುಟುಂಬದ ಆಸ್ತಿಯಲ್ಲ, ಅದು ಭಕ್ತ ಸಮುದಾಯದ ಸ್ವತ್ತು. ಹೀಗಾಗಿ, ಮಂಜುನಾಥ ಸ್ವಾಮಿಗೆ ಅವಮಾನವಾದರೆ ನಮಗೂ ಅವಮಾನವಾದಂತೆ ಎಂದು ಬಮುಲ್ ಅಧ್ಯಕ್ಷ ಡಿ.ಕೆ.ಸುರೇಶ್ ತಿಳಿಸಿದ್ದಾರೆ.
ಧರ್ಮಸ್ಥಳದಲ್ಲಿ ನಡೆದಿದೆ ಎನ್ನಲಾದ ಘಟನೆಗಳ ಕುರಿತು ಸಮಗ್ರ ತನಿಖೆ ನಡೆಸಲು ಸರಕಾರ ಎಸ್‌ಐಟಿ ರಚನೆ ಮಾಡಿದೆ. ಮಂಜುನಾಥ ಸ್ವಾಮಿಯನ್ನು ಕೋಟ್ಯಂತರ ಭಕ್ತರು ಆರಾಧನೆ ಮಾಡುತ್ತಿದ್ದು, ಆರಾಧ್ಯದೈವವೆಂದು ನಂಬಿದ್ದಾರೆ. ಈ ಧಾರ್ಮಿಕ ಭಾವನೆಗಳಿಗೆ ದಕ್ಕೆ ಬರುವಂತಹ ಘಟನೆಗಳು ಆಗಾಗ ನಡೆಯುತ್ತಿದ್ದು, ಇದನ್ನೆಲ್ಲ ನಿವಾರಣೆ ಮಾಡಲು ಸರಕಾರ ಮುಂದಾಗಿದೆ ಎಂದರು.
ಘಟನೆಯಲ್ಲಿ ಯಾರನ್ನೂ ರಕ್ಷಣೆ ಮಾಡುವ ಉದ್ದೇಶವಿಲ್ಲ. ಇದು ಶ್ರೀ ಕ್ಷೇತ್ರದ ಪಾವಿತ್ರ್ಯತೆ ಉಳಿಸಿಕೊಳ್ಳುವ ಕೆಲಸವಾಗಿದೆ. ರಾಜಕೀಯ ಕೆಸರೆರಚಾಟದಿಂದ ಮುಕ್ತವಾಗಿ ದೈವನಂಬಿಕೆಯ ಕ್ಷೇತ್ರವಾಗಿಯೇ ಧರ್ಮಸ್ಥಳ ಉಳಿಯಬೇಕು ಎಂಬುದು ನಮ್ಮೆಲ್ಲ ಆಶಯ. ಈ ನಿಟ್ಟಿನಲ್ಲಿ ಎಸ್‌ಐಟಿ ಕೆಲಸ ಮಾಡಲಿದೆ. ಇದು ಹಿಂದೂ ವಿರೋಧಿ ಕೆಲಸವಲ್ಲ. ಹಿಂದೂಗಳ ಪರವಾದ ಕೆಲಸವಾಗಿದ್ದು, ಅನ್ಯಾಯವಾಗಿರುವವರಿಗೆಲ್ಲರಿಗೂ ನ್ಯಾಯ ಸಿಗಬೇಕು. ಕಳಂಕ ದೂರವಾಗಬೇಕು ಎಂಬುದು ಸರಕಾರದ ಉದ್ದೇಶ ಎಂದಿದ್ದಾರೆ.