ಪೊಲೀಸರಿಗೆ ಕೇಸರಿ ಸಮವಸ್ತ್ರ ಹಾಕಿಸಿದ್ದನ್ನು ಅಶೋಕ್ ಮರೆತರಾ ?: ಡಿಸಿಎಂ ಡಿಕೆಶಿ ತಿರುಗೇಟು
ಬೆಂಗಳೂರು: “ಬಿಜೆಪಿ ಆಡಳಿತದಲ್ಲಿ ಪೊಲೀಸರ ಸಮವಸ್ತ್ರ ಕಳಚಿ, ಕೇಸರಿ ಬಟ್ಟೆ ಹಾಕಿಸಿದ್ದನ್ನು ಅಶೋಕ್ ಮರೆತಿದ್ದಾರಾ?” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ತಿರುಗೇಟು ನೀಡಿದರು.
ಕನಕಪುರದಲ್ಲಿ ಮಾಧ್ಯಮಗಳ ಪ್ರಶ್ನೆಗಳಿಗೆ ಶಿವಕುಮಾರ್ ಅವರು ಶುಕ್ರವಾರ ಪ್ರತಿಕ್ರಿಯೆ ನೀಡಿದರು, ಪೊಲೀಸ್ ಠಾಣೆಗೆ ರಕ್ಷಣೆ ನೀಡುವ ಪರಿಸ್ಥಿತಿ ಬಂದಿದೆ ಎಂಬ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರ ಟೀಕೆ ಬಗ್ಗೆ ಕೇಳಿದಾಗ, “ಹಬ್ಬಗಳ ಸಂದರ್ಭದಲ್ಲಿ ಪೊಲೀಸ್ ಠಾಣೆಯಲ್ಲೇ ಅಧಿಕಾರಿಗಳ ಸಮವಸ್ತ್ರದ ಬದಲು ಬಿಜೆಪಿಯ ಕೇಸರಿ ಬಟ್ಟೆ ಹಾಕಿಸಿದ್ದನ್ನು ಅಶೋಕ್ ಮರೆತಿದ್ದಾರಾ” ಎಂದು ಪ್ರಶ್ನಿಸಿದರು.
ಸಚಿವ ನಾಗೇಂದ್ರ ಅವರ ರಾಜೀನಾಮೆಗೆ ಬಿಜೆಪಿ ಜೂನ್ 6 ರವರೆಗೆ ಗಡುವು ನೀಡಿರುವ ಬಗ್ಗೆ ಕೇಳಿದಾಗ, “ಅವರು ಅಲ್ಲಿಯವರೆಗೂ ಕಾಯುವುದೇಕೆ? ಈಗಿನಿಂದಲೇ ಹೋರಾಟ ಮಾಡಲಿ. ಅವರು ಯಾವ ವಿಚಾರಕ್ಕೆ ಬಾಯಿ ಬಿಡಬೇಕೋ ಅದರ ಬಗ್ಗೆ ಬಿಡುತ್ತಿಲ್ಲ” ಎಂದು ಛೇಡಿಸಿದರು.
ನೈತಿಕ ಹೊಣೆಹೊತ್ತು ಸಚಿವ ನಾಗೇಂದ್ರ ರಾಜೀನಾಮೆ ನೀಡಬೇಕು ಎಂಬ ಈಶ್ವರಪ್ಪ ಅವರ ಹೇಳಿಕೆ ಬಗ್ಗೆ ಕೇಳಿದಾಗ, “ಪ್ರಕರಣದ ತನಿಖೆಯಲ್ಲಿ ವಾಸ್ತವಾಂಶ ಪರಿಶೀಲನೆ ನಡೆಯಲಿ. ನಾವು ಯಾರನ್ನೂ ರಕ್ಷಣೆ ಮಾಡುವ ಪ್ರಶ್ನೆಯೇ ಇಲ್ಲ” ಎಂದರು.
ನಮ್ಮ ಅಭ್ಯರ್ಥಿ ಗೆಲ್ಲುವ ವಿಶ್ವಾಸವಿದೆ: “ಬೆಂಗಳೂರು ಪದವೀಧರ ಕ್ಷೇತ್ರದ ಮತದಾರರ ಬಳಿ ನಮ್ಮ ಅಭ್ಯರ್ಥಿ ರಾಮೋಜಿ ಗೌಡರ ಪರ ಪ್ರಚಾರ ಮಾಡಿ, ಈ ಚುನಾವಣೆಯಲ್ಲಿ ನಮ್ಮ ನಾಯಕರಿಗೆ ಜವಾಬ್ದಾರಿ ವಹಿಸಲು ಕನಕಪುರಕ್ಕೆ ಬಂದಿದ್ದೇನೆ. ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿ ಹಾಗೂ ದಳದವರು ಮೈತ್ರಿಯಾಗಿವೆ. ನಮ್ಮ ಅಭ್ಯರ್ಥಿ ರಾಮೋಜಿ ಗೌಡರು ಉತ್ತಮ ಕೆಲಸ ಮಾಡಿಕೊಂಡು ಬಂದಿದ್ದು, ನಮ್ಮ ಅಭ್ಯರ್ಥಿ ಗೆಲ್ಲುತ್ತಾರೆ ಎಂಬ ವಿಶ್ವಾಸವಿದೆ.”
ಮೈತ್ರಿಯಿಂದ ಅ.ದೇವಗೌಡರು ಸ್ಪರ್ಧೆ ಮಾಡಿದ್ದು ಇದರಿಂದ ಏನಾದರೂ ಪರಿಣಾಮ ಬೀರುತ್ತದೆಯೇ ಎಂದು ಕೇಳಿದಾಗ, “ಅವರು ದಳದಲ್ಲಿದ್ದರು, ನಂತರ ಬಿಜೆಪಿಗೆ ಹೋದರು. ಈಗ ಬಿಜೆಪಿಯವರು ದಳದವರು ಒಂದಾಗಿದ್ದಾರೆ. ನಾನು ಅದರ ಬಗ್ಗೆ ಹೆಚ್ಚು ಮಾತನಾಡಲ್ಲ. ನಮ್ಮ ಅಭ್ಯರ್ಥಿ ಅವರಿಗಿಂತ ಉತ್ತಮವಾಗಿ ಕೆಲಸ ಮಾಡುವ ವಿಶ್ವಾಸವಿದೆ” ಎಂದರು.
ಮೇಲ್ಮನೆ ಚುನಾವಣೆ ಸಂಬಂಧ ದೆಹಲಿ ಪ್ರವಾಸದ ಬಗ್ಗೆ ಕೇಳಿದಾಗ, “ನಾನು ಸಿದ್ದರಾಮಯ್ಯನವರು ಹೈಕಮಾಂಡ್ ನಾಯಕರಿಗೆ ಪಟ್ಟಿ ಕೊಟ್ಟು ಬಂದಿದ್ದೇವೆ. ಅವರು ಅಂತಿಮ ತೀರ್ಮಾನ ಮಾಡುತ್ತಾರೆ” ಎಂದರು.
ಜನರ ಆಶೀರ್ವಾದ, ನಾನು ನಂಬಿರುವ ಶಕ್ತಿ ನನ್ನನ್ನು ಕಾಪಾಡಲಿದೆ: ನಿಮ್ಮ ವಿರುದ್ಧ ಯಾಗ ಮಾಡುತ್ತಿರುವವರು ಯಾರು ಎಂದು ಹೇಳಬಹುದೇ, ಇದಕ್ಕಾಗಿ ವಿಶೇಷ ಪೂಜೆ ಏನಾದರೂ ಇಟ್ಟುಕೊಂಡಿದ್ದೀರಾ ಎಂದು ಕೇಳಿದಾಗ, “ಯಾಗ ಯಾರು ಮಾಡಿದ್ದಾರೆ ಎಂಬುದಕ್ಕೆ ಕಾಲವೇ ಉತ್ತರ ನೀಡಲಿದೆ. ನಮಗೆ ಆಶೀರ್ವಾದ ಮಾಡಲು ನೀವು ಹಾಗೂ ಜನರು ಇದ್ದಾರೆ. ನಾನು ನಂಬಿರುವ ಶಕ್ತಿ ಇದೆ. ನಿಮ್ಮ ಪ್ರಾರ್ಥನೆ ಕಾಪಾಡಲಿದೆ” ಎಂದರು.
ಪ್ರಜ್ವಲ್ ರೇವಣ್ಣ ಬಂಧನದ ಬಗ್ಗೆ ಕೇಳಿದಾಗ, “ಮಾಧ್ಯಮಗಳಲ್ಲಿ ಈ ವಿಚಾರ ನೋಡಿದೆ. ಎಸ್ಐಟಿ ಪ್ರಕರಣ ತನಿಖೆ ನಡೆಸುತ್ತಿದ್ದು, ಅವರು ವಿಚಾರಣೆ ಮಾಡುತ್ತಾರೆ. ಆ ಬಗ್ಗೆ ನಾನೇಕೆ ತಲೆಕೆಡಿಸಿಕೊಳ್ಳಲಿ” ಎಂದರು.