ರಾಜ್ಯದ ಎಲ್ಲ ದೇವಾಲಯಗಳಲ್ಲಿ ಎಳ್ಳು-ಬೆಲ್ಲ ವಿತರಣೆ: ಸಚಿವ ರಾಮಲಿಂಗಾ ರೆಡ್ಡಿ ಸೂಚನೆ
ಬೆಂಗಳೂರು: ರಾಜ್ಯದ ಎಲ್ಲ ದೇವಸ್ಥಾನಗಳಲ್ಲಿ ಸಂಕ್ರಾಂತಿ ಅಂಗವಾಗಿ ಎಳ್ಳು-ಬೆಲ್ಲ ವಿತರಣೆ ಮಾಡುವಂತೆ ಮುಜರಾಯಿ ಇಲಾಖೆ ವ್ಯಾಪ್ತಿಯ ಎಲ್ಲ ದೇವಸ್ಥಾನಗಳಿಗೆ ಸಚಿವ ರಾಮಲಿಂಗಾ ರೆಡ್ಡಿ ಸೂಚನೆ ನೀಡಿದ್ದಾರೆ.
ಸಚಿವ ರಾಮಲಿಂಗಾ ರೆಡ್ಡಿ ಅವರು ಸಚಿವರಾಗಿ ಅಧಿಕಾರ ಸ್ವೀಕಾರ ಮಾಡಿದ ನಂತರ ಅನೇಕ ಮಹತ್ವದ ಸಂಗತಿಗಳನ್ನು ಇಲಾಖೆಯಲ್ಲಿ ಜಾರಿಗೊಳಿಸುತ್ತಿದ್ದು, ಇದೇ ಮೊದಲ ಬಾರಿಗೆ ಮುಜರಾಯಿ ದೇವಸ್ಥಾನಗಳಲ್ಲಿ ಭಕ್ತರಿಗೆ ಎಳ್ಳು-ಬೆಲ್ಲ ವಿತರಣೆ ಮಾಡುವ ವ್ಯವಸ್ಥೆ ಜಾರಿಗೊಳಿಸಿದ್ದಾರೆ.

ಈ ಕುರಿತು ಸಚಿವರ ಆದೇಶದ ಅನುಸಾರ ಮುಜರಾಯಿ ಇಲಾಖೆ ಸುತ್ತೋಲೆ ಹೊರಡಿಸಿದ್ದು, ಜ.15 ರ ಗುರುವಾರ ಸಂಕ್ರಾಂತಿ ಹಬ್ಬದ ಅಂಗವಾಗಿ ಎಲ್ಲ ಮುಜರಾಯಿ ದೇವಸ್ಥಾನಗಳಲ್ಲಿ ಪೂಜೆಗೆ ಬರುವ ಭಕ್ತಾಧಿಗಳಿಗೆ ಎಳ್ಳು-ಬೆಲ್ಲ ವಿತರಣೆ ಮಾಡಬೇಕು ಎಂದು ಸೂಚನೆ ನೀಡಿದೆ.
ದೇವರ ಪೂಜೆ ಮತ್ತು ನೈವೇಧ್ಯ ಆದ ನಂತರ ಎಳ್ಳು-ಬೆಲ್ಲ ವಿತರಣೆ ಮಾಡಬೇಕು. ಸರಕಾರದ ಲಾಂಛನ ಇರುವ ಪೇಪರ್ ಕವರ್‌ನಲ್ಲಿ ತಲಾ 50 ಗ್ರಾಂ. ತೂಕದ ಎಳ್ಳು ಮತ್ತು ಬೆಲ್ಲವನ್ನು ಭಕ್ತರಿಗೆ ನೀಡಬೇಕು ಎಂದು ಸೂಚನೆ ನೀಡಿದೆ.


