ರಾಜಕೀಯ ಸುದ್ದಿ

ಸಿಎಂ ಸಿದ್ದರಾಮಯ್ಯ ಕೆಳಗಿಳಿಸಲು ಡಿ.ಕೆ.ಶಿ ಮಾತಿನಂತೆ ವಿಜಯೇಂದ್ರ ಪಾದಯಾತ್ರೆ: ಯತ್ನಾಳ್ ಬಾಂಬ್

Share It

ಚಿಕ್ಕೋಡಿ : ಸಿಎಂ ಸಿದ್ದರಾಮಯ್ಯ ವಿರುದ್ಧ ಮುಡಾ ಹಗರಣವನ್ನೇ ಅಸ್ತ್ರವಾಗಿಸಿಕೊಂಡಿರುವ ಬಿಜೆಪಿ ರಾಜ್ಯದ ಅಷ್ಟ ದಿಕ್ಕುಗಳಿಂದಲೂ ಸಪ್ತ ದಿನದ ಹೋರಾಟಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿದೆ. ಇದರ ನಡುವೆ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಹಳ್ಯಾಳ ಗ್ರಾಮದಲ್ಲಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಮತ್ತೊಂದು ಬಾಂಬ್ ಸಿಡಿಸಿದ್ದಾರೆ. ಮುಡಾ ಹೋರಾಟವು ಸಿದ್ದರಾಮಯ್ಯ ಅವರನ್ನು ಇಳಿಸಿ, ಡಿ.ಕೆ ಶಿವಕುಮಾರ್ ಅವರನ್ನು ಸಿಎಂ ಮಾಡಲು ಬಿ.ವೈ ವಿಜಯೇಂದ್ರ ಮಾಡುತ್ತಿರುವ ಹೋರಾಟ ಎಂದು ಯತ್ನಾಳ್ ಆರೋಪ ಮಾಡಿದ್ದಾರೆ.

ಮುಡಾ ಮಾಜಿ ಅಧ್ಯಕ್ಷ ಹೆಚ್​.ವಿ ರಾಜೀವ್ ಬಿಜೆಪಿಯಲ್ಲೇ ಇದ್ದಾಗ ಈ ಹಗರಣ ನಡೆದಿದೆ. ಈಗ ಅವರು ಕಾಂಗ್ರೆಸ್ ಸೇರಿದ್ದಾರೆ. ಕಾಂಗ್ರೆಸ್​ಗೆ ಯಾಕೆ ಸೇರಿದ್ದಾರೆ ಅಂದರೆ ಇದೆಲ್ಲ ಮುಚ್ಚಿ ಹಾಕಲು. ರಾಜೀವ ಯಾರ ನಿರ್ದೇಶನದ ಮೇಲೆ ಕಾಂಗ್ರೆಸ್ ಸೇರಿದ ಅನ್ನೋದು ಎಲ್ಲರಿಗೂ ಗೊತ್ತಿದೆ ಎಂದು ಇತ್ತೀಚೆಗೆ ಬಸನಗೌಡ ಪಾಟೀಲ ಯತ್ನಾಳ್ ಕಿಡಿಕಾರಿದ್ದರು ಇದರ ಬೆನ್ನಲ್ಲೇ ಈಗ ಮತ್ತೊಂದು ಬಾಂಬ್ ಸಿಡಿಸಿದ್ದಾರೆ. ಮುಡಾ ವಿಚಾರವಾಗಿ ಬಿ.ವೈ ವಿಜಯೇಂದ್ರ ನಡೆಸುತ್ತಿರುವ ಹೋರಾಟದಲ್ಲಿ ಡಿ.ಕೆ ಶಿವಕುಮಾರ್ ಕೈವಾಡವಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ.

ಪಾದಯಾತ್ರೆಯಲ್ಲಿ ಹೊಂದಾಣಿಕೆ ರಾಜಕಾರಣ ಇದೆ
ಮುಡಾ ಹೋರಾಟವು ಸಿದ್ದರಾಮಯ್ಯ ಅವರನ್ನು ಇಳಿಸಿ, ಡಿ.ಕೆ ಶಿವಕುಮಾರ್ ಅವರನ್ನು ಸಿಎಂ ಮಾಡಲು ಬಿ.ವೈ ವಿಜಯೇಂದ್ರ ಮಾಡುತ್ತಿರುವ ಹೋರಾಟದ ಅನ್ನೋದು ಬಹಿರಂಗ ಪಡಿಸಬೇಕು. ಡಿಸಿಎಂ ಡಿಕೆ ಶಿವಕುಮಾರ್ ಆದೇಶದಂತೆ ವಿಜಯೇಂದ್ರ ಪಾದಯಾತ್ರೆ ಮಾಡುತ್ತಿದ್ದಾರೆ. ಸಿದ್ದರಾಮಯ್ಯ ಇಳಿಸಲು ಪಾದಯಾತ್ರೆ ಮಾಡ್ತಿದ್ದಾರೆ. ಈ ಪಾದಯಾತ್ರೆಯಲ್ಲಿ ಹೊಂದಾಣಿಕೆ ರಾಜಕಾರಣ ಇದೆ. ಡಿ.ಕೆ. ಶಿವಕುಮಾರ್ ಅವರ ಉಪಕಾರ ತೀರಿಸಲಿಕ್ಕೆ ಇವತ್ತು ವಿಜಯೇಂದ್ರ ಪಾದಯಾತ್ರೆ ಮಾಡುತ್ತಿದ್ದಾರೆ ಎಂದು ಬಸನಗೌಡ ಪಾಟೀಲ ಯತ್ನಾಳ್ ತಿಳಿಸಿದ್ದಾರೆ.

ವಾಲ್ಮೀಕಿ ನಿಗಮದ ವಿಚಾರದ ಕುರಿತು ಪಾದಯಾತ್ರೆ ಮಾಡುತ್ತಿರುವ ಸಂಬಂಧ ಮಾತನಾಡಿರುವ ಯತ್ನಾಳ್, ನಾವು ಮತ್ತು ರಮೇಶ್ ಜಾರಕಿಹೊಳಿ‌ ಕೇಂದ್ರದಿಂದ ಒಪ್ಪಿಗೆ ಪಡೆದು ಪ್ರತಿಭಟನೆ ಮಾಡುತ್ತಿದ್ದೇವೆ. ಆದರೆ ಎಲ್ಲಿಂದ ಪ್ರತಿಭಟನೆ ಮಾಡಬೇಕೆಂದು ನಿರ್ಣಯವಾಗಿಲ್ಲ. ಬಿಜೆಪಿಯಲ್ಲಿ ಎರಡು ಬಣ ಇಲ್ಲ. ಮಹರ್ಷಿ ವಾಲ್ಮೀಕಿ ನಿಗಮದಲ್ಲಾದದ್ದೂ ದೊಡ್ಡ ಹಗರಣ. ಒಂದು ಸಮುದಾಯದಕ್ಕೆ ಹೋಗಬೇಕಾದ ಹಣ ಪೂರ್ತಿ ನುಂಗಿ ಹಾಕಿದ್ದಾರೆ. ಇನ್ನೊಂದು ಕಡೆ ಮುಡಾದಲ್ಲಿ ಒಬ್ಬ ದಲಿತನ ಜಮೀನು ಪೂರ್ತಿ ನುಂಗಿ ಹಾಕಿದ್ದಾರೆ. ಕಾಂಗ್ರೆಸ್ ಭ್ರಷ್ಟಾಚಾರ ವಿರುದ್ದ ಯಾವುದೇ ಒಳ ಒಪ್ಪಂದ ಇಲ್ಲದೇ ನಾವು ಹೋರಾಟ ಮಾಡುತ್ತಿದ್ದೇವೆ. ನಾವು ಮಾಡುವ ಹೋರಾಟ ಭ್ರಷ್ಟರ ವಿರುದ್ದ ಎಂದರು.

ಭಾಗ್ಯದ ಲಕ್ಷ್ಮಿ ಬೆಳಗಾವಿಯಲ್ಲಿಯೇ ಕುಳಿತಿದ್ದಾರೆ,
ಇನ್ನು ಇದೇ ವೇಳೆ ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳ ವಿರುದ್ದ ಯತ್ನಾಳ್ ಕೆಂಡಕಾರಿದ್ದಾರೆ. ಕರ್ನಾಟಕ ಸರ್ಕಾರ ದಿವಾಳಿಯಾಗಿದೆ. ಹೆಣ್ಣು ಮಕ್ಕಳಿಗೆ ಎರಡು ಸಾವಿರ ಹಣ ಮೂರು ತಿಂಗಳಿಂದ ಬಿಡುಗಡೆಯಾಗಿಲ್ಲ. ಭಾಗ್ಯದ ಲಕ್ಷ್ಮಿ ಬೆಳಗಾವಿಯಲ್ಲಿಯೇ ಕುಳಿತ್ತಿದ್ದಾರೆ. ಲಕ್ಷ್ಮೀ ಅಕ್ಕಾ ದುಡ್ಡು ಕೊಡಲಿಕ್ಕೆ ತಯಾರಿಲ್ಲ. ಲಕ್ಷ್ಮೀ ಅಕ್ಕಾ ದುಡ್ಡ ಕೊಡವ್ವಾ ಇಲ್ಲಾ ಮನಿಗೆ ನಡಿವಾ ಎಂದು ಯತ್ನಾಳ್ ವ್ಯಂಗ್ಯವಾಡಿದ್ದಾರೆ.

ಮತ್ತೊಂದೆಡೆ ಮಾಜಿ ಹಾಗೂ ಹಾಲಿ ಸಿಎಂ ಮಕ್ಕಳು ಮಾತ್ರ ಬೆಳೆಯುತ್ತಿದ್ದಾರೆ ಎಂದು ಮಾಜಿ ಎಂಪಿ ಪ್ರತಾಪ್ ಸಿಂಹ ಆರೋಪ ವಿಚಾರಕ್ಕೆ ಸಂಬಂಧಿಸಿ ಪ್ರತಿಕ್ರಿಯೆ ನೀಡಿದ ಯತ್ನಾಳ್, ಮಾಜಿ ಹಾಗೂ ಹಾಲಿ ಸಿಎಂ ಮಕ್ಕಳು ಬೆಳೆಯುತ್ತಿರುವುದು ನಿಜಾ ಎಂದು ವಾಗ್ದಾಳಿ ನಡೆಸಿದರು.


Share It

You cannot copy content of this page