ಬೆಂಗಳೂರು: ರೇಸ್ ಕೋರ್ಸ್ ರಸ್ತೆಯಲ್ಲಿರುವ ಕಾಂಗ್ರೆಸ್ ಭವನವನ್ನು ಕೆಡವಿ ಅಲ್ಲಿ ನೂತನ ಕಟ್ಟಡ ನಿರ್ಮಾಣ ಮಾಡಲು ಸಮಿತಿಯೊಂದನ್ನು ರಚನೆ ಮಾಡಿ ಡಿ.ಕೆ.ಶಿವಕುಮಾರ್ ಆದೇಶ ಹೊರಡಿಸಿದ್ದಾರೆ.
ಕೆ.ಜೆ.ಜಾರ್ಜ್ ನೇತೃತ್ವದಲ್ಲಿ ಬೆಂಗಳೂರು ರೇಸ್ ಕೋರ್ಸ್ ರಸ್ತೆ ಕಾಂಗ್ರೆಸ್ ಕಟ್ಟಡ ನಿರ್ಮಾಣ ಸಮಿತಿ ರಚನೆಯಾಗಿದ್ದು, ಸಮಿತಿಯಲ್ಲಿ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಕೆ.ಗೋವಿಂದರಾಜು, ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಜಿ.ಸಿ.ಚಂದ್ರಶೇಖರ್, ಸಚಿವರಾದ ದಿನೇಶ್ ಗುಂಡೂರಾವ್, ಶಾಸಕ ಎಂ.ಕೃಷ್ಣಪ್ಪ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಸತ್ಯನಾರಾಯಣ, ಕಟ್ಟಡ ನಿರ್ವಹಣ ಸಮಿತಿ ಅಧ್ಯಕ್ಷರಾದ ಕೆಂಚೇಗೌಡ ಮತ್ತು ಮಾಜಿ ಮೇಯರ್ ಹುಚ್ಚಪ್ಪ ಇದ್ದಾರೆ.
ಕೆಪಿಸಿಸಿ ಹೆಸರಿನಲ್ಲಿರುವ ರೇಸ್ ಕೋರ್ಸ್ ರಸ್ತೆಯ ಕಾಂಗ್ರೆಸ್ ಕಟ್ಟಡವನ್ನು ಜಾತ್ಯಾತೀತ ಜನತಾದಳ ಕಚೇರಿಯಾಗಿ ಮಾಡಿಕೊಳ್ಳಲಾಗಿತ್ತು. ನ್ಯಾಯಾಲಯದಲ್ಲಿ ಈ ಬಗ್ಗೆ ವ್ಯಾಜ್ಯ ನಡೆದು, ಅಂತಿಮವಾಗಿ ಅದು ಕಾಂಗ್ರೆಸ್ ಪಕ್ಷದ ಆಸ್ತಿ ಎಂದು ತೀರ್ಮಾನಿಸಲಾಯಿತು. ಅನಂತರ ಯುವ ಕಾಂಗ್ರೆಸ್ ಕಚೇರಿ ಸೇರಿದಂತೆ ಕಾಂಗ್ರೆಸ್ ಪಕ್ಷದ ಕೆಲವು ಘಟಕಗಳಲ್ಲಿ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿದ್ದವು.
ಇದೀಗ ಕಟ್ಟಡಕ್ಕೆ ಹೊಸ ರೂಪ ನೀಡಲು ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್ ತೀರ್ಮಾನಿಸಿದ್ದು, ಕಟ್ಟಡ ನಿರ್ಮಾಣಕ್ಕೆ ಕೆ.ಜೆ.ಜಾರ್ಜ್ ನೇತೃತ್ವದಲ್ಲಿ ಸಮಿತಿ ರಚನೆ ಮಾಡಿದ್ದಾರೆ. ಸಮಿತಿಯು ಕಟ್ಟಡದ ವಿನ್ಯಾಸ, ಕಾರ್ಯಚಟುವಟಿಕೆಗಳನ್ನು ನೋಡಿಕೊಳ್ಳುವ ಮೂಲಕ ಕಟ್ಟಡ ನಿರ್ಮಾಣ ಪೂರ್ಣಗೊಳ್ಳುವವರೆಗೆ ಅಸ್ತಿತ್ವದಲ್ಲಿರುತ್ತದೆ.