ನವಜಾತ ಶಿಶುವಿನ ತಲೆಗೆ ಬ್ಲೇಡ್ ಹಾಕಿದ ವೈದ್ಯರು: ಹೆರಿಗೆ ವೇಳೆ ವೈದ್ಯರ ಯಡವಟ್ಟು
ಹಾವೇರಿ: ಹೆರಿಗೆ ಮಾಡಿಸುವ ವೇಳೆ ನವಜಾತ ಶಿಶುವಿನ ತಲೆಗೆ ಬ್ಲೇಡ್ ತಾಕಿಸಿರುವ ಆರೋಪದಲ್ಲಿ ಹಾವೇರಿ ಜಿಲ್ಲಾಸ್ಪತ್ರೆ ವೈದ್ಯರ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ತಲೆಗೆ ಗಾಯ ಆದ ಜಾಗದಲ್ಲಿ ೨ ಸ್ಟಿಚ್(ಹೊಲಿಗೆ) ಹಾಕಿದ್ದಾರೆ. ಸ್ಟಿಚ್ ಹಾಕಿರುವ ವೈದ್ಯರು ಇದೀಗ ಏನು ಆಗಲ್ಲ ಎನ್ನುತ್ತಿದ್ದಾರೆ ಎಂದು ಮಗುವಿನ ಪೋಷಕರು ಆರೋಪಿಸಿದ್ದಾರೆ. ಮಹಮ್ಮದ್ ಮುಜಾಯಿದ್, ಬಿಬಿ ಅಪ್ಸಾ ಮುಲ್ಲಾ ಎಂಬ ದಂಪತಿ ಮಗುವಿಗೆ ಈ ರೀತಿ ನಿರ್ಲಕ್ಯ ಮಾಡಲಾಗಿದೆ. ಗರ್ಭಿಣಿಯಾಗಿದ್ದ ಬಿಬಿ ಅಪ್ಸಾ ಶುಕ್ರವಾರ ಮಧ್ಯಾಹ್ನ ಆಸ್ಪತ್ರೆಗೆ ಬಂದಿದ್ದರು. ಈ ವೇಳೆ ವೈದ್ಯೆ ಸ್ವಾತಿ ನಿರ್ಲಕ್ಷö್ಯದಿಂದ ಘಟನೆ ನಡೆದಿದೆ ಎಂದು ಪೋಷಕರು ದೂರಿದ್ದಾರೆ.
”ನಾರ್ಮಲ್ ಹೆರಿಗೆ ಆಗಲ್ಲ, ಗರ್ಭದಲ್ಲಿ ನೀರು ಕಡಮೆ ಇದೆ. ಸಿಜೇರಿಯನ್ ಮಾಡಬೇಕು ಎಂದು ವೈದ್ಯರು ಭಯ ಹುಟ್ಟಿಸಿದ್ದರು. ಅಪರೇಷನ್ ನಂತರ ಹೊರ ಬಂದರೆ ಮಗುವಿಗೆ ರಕ್ತ ಬರುತ್ತಿತ್ತು. ಭಯಭೀತರಾಗಿ ವೈದ್ಯರಿಗೆ ಏನಾಯ್ತು ಅಂತ ಕೇಳಿದ್ವಿ, ಏನು ಆಗಿಲ್ಲ. ಗರ್ಭದಲ್ಲಿ ನೀರು ಇರದ ಹಿನ್ನೆಲೆ, ಮಗುವಿನ ತಲೆಗೆ ಬ್ಲೇಡ್ ತಾಗಿದೆ ಎಂದು ಹೇಳಿ ಆಸ್ಪತ್ರೆಯಿಂದ ವೈದ್ಯೆ ಸ್ವಾತಿ ಹೊರಟಿದ್ದಾರೆ. ನಮ್ಮ ಮಗುವಿಗೆ ಏನಾದರೂ ಆದರೆ ಯಾರು ಹೊಣೆ?” ಎಂದು ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.


