ಧಾರವಾಡ: ಸಸ್ಯಹಾರ ಆರ್ಡರ್ ಮಾಡಿದ್ದ ಗ್ರಾಹಕನಿಗೆ ಮಾಂಸಾಹಾರ ನೀಡಿದ ಪ್ರಕರಣದಲ್ಲಿ ಡೋಮಿನೋಸ್ ಪಿಜ್ಜಾ ಡೆಲಿವರಿ ಕಂಪನಿಗೆ ಜಿಲ್ಲಾ ಗ್ರಾಹಕರ ಆಯೋಗ ೬೦ ಸಾವಿರ ರೂ. ದಂಡ ವಿಧಿಸಿದೆ.
ಧಾರವಾಡದ ವಿದ್ಯಾಗಿರಿ ನಿವಾಸಿ ಹಾಗೂ ವಿದ್ಯಾರ್ಥಿ ಪ್ರದ್ಯುಮ್ನ ಇನಾಮದಾರ ಎಂಬವರು ಕಂಪನಿ ಜಾಹೀರಾತನ್ನು ನೋಡಿ, ಸಸ್ಯಹಾರಿ ಪದಾರ್ಥಗಳಾದ ಇಂಡಿ ತಂದೂರಿ, ಪನ್ನೀರ್ ಪಿಜ್ಜಾ, ಪನ್ನೀರ್ ಟಿಕ್ಕಾ, ಗಾರ್ಲಿಕ್ ಬ್ರೆಡ್, ವೆಜ್ ಜಿಂಗಿ ಪಾರ್ಸೆಲ್ ಹಾಗೂ ಚೀಸ್ ಡಿಪ್ ಅನ್ನು ೫೫೫ ರೂ. ಪಾವತಿಸಿ ಆರ್ಡರ್ ಮಾಡಿದ್ದರು. ಅದರಂತೆ, ಡೋಮಿನೋಸ್ ಸಿಬ್ಬಂದಿ ಆಹಾರವನ್ನು ಮನೆಗೆ ತಲುಪಿಸಿದ್ದು, ಅದನ್ನು ಸೇವನೆ ಮಾಡುವಾಗ ಅದು ಸಸ್ಯಹಾರವಲ್ಲ ಮಾಂಸಹಾರಿ ಪದಾರ್ಥ ಎನ್ನುವುದು ತಮಗೆ ಗೊತ್ತಾಗಿದೆ ಎಂದು ದೂರುದಾರರು ಆರೋಪಿಸಿದ್ದರು.
ಪಾರ್ಸೆಲ್ ಬಾಕ್ಸ್ ಮೇಲೆ ಹಸಿರು ಸ್ಟಿಕ್ಕರ್ ಅಂಟಿಸಿದ್ದು, ಆದರೆ ಅದರಲ್ಲಿ ಮಾಂಸಹಾರಿ ಪದಾರ್ಥ ಕಳುಹಿಸಿದ್ದಾರೆ. ಅದನ್ನು ಸೇವಿಸಿದ್ದರಿಂದ ತನಗೆ ಧರ್ಮ ಭ್ರಷ್ಟ ಮಾಡಿದಂತಾಗಿದೆ. ಅಲ್ಲದೆ, ತಪ್ಪು ಪಾರ್ಸೆಲ್ ಕಳುಹಿಸಿ, ಡೋಮಿನೋಸ್ ಕಂಪನಿಯವರು ಸೇವಾ ನ್ಯೂನತೆ ಎಸಗಿದ್ದಾರೆ. ಹೀಗಾಗಿ, ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಪ್ರದ್ಯುಮ್ನ ಇನಾಮದಾರ, ಜಿಲ್ಲಾ ಗ್ರಾಹಕರ ಆಯೋಗಕ್ಕೆ ಜನವರಿ ೧ರಂದು ದೂರು ಸಲ್ಲಿಸಿದ್ದರು.
ಈ ಬಗ್ಗೆ ಕೂಲಂಕಷ ವಿಚಾರಣೆ ನಡೆಸಿದ ಆಯೋಗದ ಅಧ್ಯಕ್ಷ ಈಶಪ್ಪ ಭೂತೆ ಹಾಗೂ ವಿಶಾಲಾಕ್ಷಿ ಅ. ಬೋಳಶೆಟ್ಟಿ ಅವರು, ದೂರುದಾರ ವಿದ್ಯಾರ್ಥಿಯಾಗಿದ್ದು, ಸಂಪೂರ್ಣ ಸಸ್ಯಹಾರಿಯಾಗಿದ್ದಾರೆ. ಅದೇ ರೀತಿ, ಎದುರುದಾರರ ಸಸ್ಯಹಾರಿ ಆಹಾರ ಪದಾರ್ಥದ ವಿದ್ಯಾಪನೆಗಳನ್ನು ನೋಡಿಯೇ ೫೫೫ ರೂ. ಪಾವತಿಸಿ, ಆಹಾರ ಪದಾರ್ಥಗಳನ್ನು ಆರ್ಡರ್ ಮಾಡಿದ್ದಾರೆ. ಬಳಿಕ, ತಮಗೆ ಬಂದಿರುವುದು ಸಸ್ಯಹಾರಿ ಪದಾರ್ಥ ಅಂತಾ ತಿಳಿದು ಅದನ್ನು ಸೇವಿಸಿದ್ದಾರೆ.
ಆದರೆ, ಬೇರೆ ರೀತಿಯ ಅನುಭವವಾದ ಹಿನ್ನೆಲೆಯಲ್ಲಿ, ಪದಾರ್ಥವನ್ನು ಸರಿಯಾಗಿ ಪರಿಶೀಲಿಸಿದಾಗ ಅದು ಮಾಂಸಾಹಾರ ಎಂಬುದು ಅವರಿಗೆ ಗೊತ್ತಾಗಿದೆ. ಅಲ್ಲದೆ, ಆಯೋಗವು ದಾಖಲೆಗಳನ್ನು ಪರಿಶೀಲಿಸಿದಾಗ, ಕಂಪನಿಯವರು ಗ್ರಾಹಕ ಆರ್ಡರ್ ಮಾಡಿದ್ದ ಪದಾರ್ಥಗಳನ್ನು ಕಳುಹಿಸದೇ, ತಪ್ಪಾಗಿ ಮಾಂಸಾಹಾರ ಕಳಿಸಿರುವುದು ಗೊತ್ತಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಪ್ರಕರಣದಲ್ಲಿ ಎಲ್ಲ ಅಂಶಗಳನ್ನು ಗಮನಿಸಿದ ಆಯೋಗ, ಡೋಮಿನೋಸ್ ಕಂಪನಿ ನಿರ್ಲಕ್ಷ್ಯತನದಿಂದ ದೂರುದಾರರು ಮಾಂಸಾಹಾರ ಸೇವಿಸುವ ಪರಿಸ್ಥಿತಿ ಬಂದಿದೆ. ಅಲ್ಲದೆ, ಕಂಪನಿ ತಾವು ಹೊರಡಿಸಿದ ಜಾಹೀರಾತು, ಶಿಸ್ತಿನ ಆಹಾರ ಪದಾರ್ಥ ಮತ್ತು ಅದರ ವಿತರಣೆ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಕೆಲಸ ಮಾಡದೆ, ಸೇವಾ ನ್ಯೂನತೆ ಎಸಗಿದೆ. ಇದರಿಂದ ದೂರುದಾರರಿಗೆ ಆಗಿರುವ ಮಾನಸಿಕ ತೊಂದರೆ ಹಾಗೂ ಅನಾನುಕೂಲಕ್ಕೆ ೫೦,೦೦೦ ರೂ. ಪರಿಹಾರ ಹಾಗೂ ಪ್ರಕರಣದ ಖರ್ಚು ವೆಚ್ಚವಾಗಿ ೧೦,೦೦೦ ರೂ. ನೀಡುವಂತೆ ಆದೇಶಿಸಿದೆ.