ದಾವಣಗೆರೆ: ತರಳಬಾಳು ಶ್ರೀ ಶಿವಮೂರ್ತಿ ಸ್ವಾಮೀಜಿ ವಿರುದ್ಧ ಸ್ವಜಾತಿಯವರಿಂದಲೇ ಆಕ್ರೋಶ ವ್ಯಕ್ತವಾಗಿದ್ದು, ಅವರನ್ನು ಪೀಠದಿಂದ ಕೆಳಗಿಳಿಸಲು ಸಮನ್ವಯ ಸಮಿತಿ ರಚನೆ ಮಾಡಲಾಗಿದೆ.
ದಾವಣಗೆರೆ ಹೊರವಲಯದ ಅಪೂರ್ವ ರೆಸಾರ್ಟ್ವೊಂದರಲ್ಲಿ ಈ ಕುರಿತು ಸಭೆ ನಡೆದಿದ್ದು, ಸಭೆಯಲ್ಲಿ ಸ್ವಾಮೀಜಿಯ ವಿರುದ್ಧ ಅನೇಕ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಸಭೆಯಲ್ಲಿ ಡಾ. ಶಿವಮೂರ್ತಿ ಸ್ವಾಮೀಜಿಯನ್ನು ಪೀಠದಿಂದ ಕೆಳಗಿಳಿಸಲು ಒಕ್ಕೋರಲ ತೀರ್ಮಾನ ತೆಗೆದುಕೊಳ್ಳಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಈ ಕುರಿತು ಚರ್ಚೆ ನಡೆಸಿ, ಅದನ್ನು ಕಾರ್ಯಗತಗೊಳಿಸುವ ಪ್ರಕ್ರಿಯೆಗೆ ಒಂದು ಸಮನ್ವಯ ಸಮಿತಿ ರಚನೆ ಮಾಡಿದ್ದು, ಸಮಿತಿಗೆ ಶ್ಯಾಮನೂರು ಶಿವಶಂಕರಪ್ಪ ಅವರನ್ನು ಅಧ್ಯಕ್ಷರನ್ನಾಗಿ ಮಾಡಲಾಗಿದೆ. ಆಗಸ್ಟ್ ೧೮ ರಂದು ತರಳಬಾಳು ಮಠಕ್ಕೆ ಆಗಮಿಸುವ ಸಮಿತಿ, ಸ್ವಾಮೀಜಿ ಅವರ ಪದಚ್ಯುತಿಯ ಬಗ್ಗೆ ಅಂತಿಮ ತೀರ್ಮಾನ ತೆಗೆದುಕೊಳ್ಳಲಿದೆ.
ದಾವಣಗೆರೆಯಲ್ಲಿ ನಡೆದ ಸಭೆಯಲ್ಲಿ ಶ್ಯಾಮನೂರು ಶಿವಶಂಕರಪ್ಪ ಅವರ ಜತೆಗೆ, ಬಿ. ಸಿ. ಪಾಟೀಲ್, ಡಾ. ರವೀಂದ್ರನಾಥ್, ಶಾಸಕ ಹರೀಶ್, ಎಂಎಲ್ಸಿ ರುದ್ರೇಗೌಡ ಭಾಗವಹಿಸಿದ್ದರು ಎಂದು ಮೂಲಗಳು ತಿಳಿಸಿವೆ.