ಮಲ್ಲಿಕಾರ್ಜುನ ಖರ್ಗೆ ಭೇಟಿ ಮಾಡಿದ ಡಾ. ಜಿ.ಪರಮೇಶ್ವರ್: ಸಿಎಂ ಖುರ್ಚಿ ಕಿತ್ತಾಟಕ್ಕೆ ಬಿಗ್ ಟ್ವಿಸ್ಟ್ !
ಬೆಂಗಳೂರು: ಸಿಎಂ ಸ್ಥಾನದ ಚರ್ಚೆ ಜೋರಾಗಿ ನಡೆಯುತ್ತಿರುವ ಬೆನ್ನಲ್ಲೇ ಡಾ. ಜಿ. ಪರಮೇಶ್ವರ್ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡುವ ಮೂಲಕ ಸಂಚಲನ ಸೃಷ್ಟಿ ಮಾಡಿದ್ದಾರೆ.
ಸಿಎಂ ಸಿದ್ದರಾಮಯ್ಯ ಈಗಾಗಲೇ ನಾನೇ ಐದು ವರ್ಷ ಸಿಎಂ ಎಂದು ಹೇಳಿಕೆ ನೀಡಿದ್ದಾರೆ. ಈ ಹೇಳಿಕೆಯ ಬೆನ್ನಲ್ಲೇ ಡಿಕೆಶಿ ದೆಹಲಿ ಯಾತ್ರೆ ಕೈಗೊಂಡಿದ್ದಾರೆ. ಸಿಎಂ ಪಟ್ಟಕ್ಕಾಗಿ ಅವರ ಬೆಂಬಲಿಗರು ತುದಿಗಾಲಲ್ಲಿ ನಿಂತಿದ್ದಾರೆ. ಈ ಎಲ್ಲ ಬೆಳವಣಿಗೆಯ ಬೆನ್ನಲ್ಲೇ ಪರಮೇಶ್ವರ್ ಖರ್ಗೆ ಅವರನ್ನು ಭೇಟಿಯಾಗಿರುವುದು ಕುತೂಹಲ ಮೂಡಿಸಿದೆ.
ಬೆಳಗಾವಿಯಲ್ಲಿ ನಡೆದ ಅಹಿಂದ ನಾಯಕರ ಸಭೆಯಲ್ಲಿ ಸಿದ್ದರಾಮಯ್ಯ ಅವರನ್ನೇ ಸಿಎಂ ಆಗಿ ಮುಂದುವರಿಸಬೇಕು, ಒಂದು ವೇಳೆ ಅವರನ್ನು ಕೆಳೆಗಿಳಿಸುವ ಪ್ರಯತ್ನ ನಡೆದರೆ, ಪರಮೇಶ್ವರ್ ಅವರಿಗಾದ ಅನ್ಯಾಯ ಹಾಗೂ ಅರ್ಹತೆಯನ್ನು ಪರಿಗಣಿಸಿ, ಅವರಿಗೆ ಸಿಎಂ ಸ್ಥಾನ ನೀಡಬೇಕು ಎಂದು ಹಕ್ಕೊತ್ತಾಯ ಮಂಡಿಸಲು ತೀರ್ಮಾನಿಸಲಾಗಿದೆ ಎಂಬ ಮಾತುಗಳು ಕೇಳಿಬಂದಿದ್ದವು.
ಈ ಹಿನ್ನೆಲೆಯಲ್ಲಿ ಡಾ. ಜಿ. ಪರಮೇಶ್ವರ್ ಅವರು, ಎಐಸಿಸಿ ಅಧ್ಯಕ್ಷರನ್ನು ಭೇಟಿ ಮಾಡಿರುವುದು ಕೌತುಕ ಮೂಡಿಸಿದ್ದು, ರಾಜ್ಯ ರಾಜಕಾರಣದ ದಿಕ್ಕು ಮತ್ತೊಂದು ಕಡೆಗೆ ತಿರುಗುವಂತೆ ಮಾಡಿದೆ. ಈ ಬೆಳವಣಿಗೆ ದಲಿತ ಸಿಎಂ ಹಕ್ಕೊತ್ತಾಯದ ಮೂಲಕ ಡಿಕೆಶಿಯನ್ನು ಕಟ್ಟಿಹಾಕಲು ಅಹಿಂದ ನಾಯಕರು ತೀರ್ಮಾನಿಸಿದಂತೆ ಕಾಣುತ್ತಿದೆ.


