ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ಮಾಜಿ ಶಾಸಕ ಡಾ.ಕೆ.ಸುಧಾಕರ್ ಗೆಲುವು ಸಾಧಿಸಿದ್ದು, ಅವರ ಕಡು ವಿರೋಧಿ ಪ್ರದೀಪ್ ಈಶ್ವರ್ ಮನೆ ಮೇಲೆ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿದ್ದಾರೆ.
ಚಿಕ್ಕಬಳ್ಳಾಪುರ ನಗರದಲ್ಲಿರುವ ಪ್ರದೀಪ್ ಈಶ್ವರ್ ಮನೆಯ ಮೇಲೆ ಸಂಭ್ರಮಾಚರಣೆಯಲ್ಲಿ ತೊಡಗಿದ್ದ ಬಿಜೆಪಿ ಕಾರ್ಯಕರ್ತರಲ್ಲಿ ಕೆಲವರು, ಕಲ್ಲು ತೂರಾಟ ನಡೆಸಿದ್ದಾರೆ. ಈ ಬಗ್ಗೆ ಮಾಹಿತಿ ಪಡೆದಿರುವ ಪೊಲೀಸರು, ಕಿಡಿಗೇಡಿಗಳ ಪತ್ತೆಹೆ ಬಲೆ ಬೀಸಿದ್ದಾರೆ.
ಸ್ಥಳಕ್ಕೆ ಭೇಟಿ ನೀಡಿರುವ ಪೊಲೀಸ್ ಉಪ
ವರಿಷ್ಠಾಧಿಕಾರಿ, ಇನ್ಸ್‌ಪೆಕ್ಟರ್ ಶಿವಕುಮಾರ್ ಭೇಟಿ ನೀಡಿ, ಪ್ರದೀಪ್ ಈಶ್ವರ್ ಮನೆಯ ಸಿಸಿಟಿವಿ ಪರಿಶೀಲನೆ ನಡೆಸಿದ್ದಾರೆ. ದೂರು ದಾಖಲು ಮಾಡಿಕೊಂಡು ಕಿಡಿಗೇಡಿಗಳ ಪತ್ತೆಗೆ ಬಲೆ ಬೀಸಿದ್ದಾರೆ.
ಚಿಕ್ಕಬಳ್ಳಾಪುರ ವಿಧಾನಸಭಾ ಚುನಾವಣೆಯಲ್ಲಿ ಪ್ರದೀಪ್ ಈಶ್ವರ್, ಡಾ.ಸುಧಾಕರ್ ಅವರನ್ನು ಸೋಲಿಸಿದ್ದರು. ಅನಂತರ ಅವರಿಬ್ಬರ ವೈರತ್ವ ಜಗಜಾಹೀರಾಗಿತ್ತು. ಲೋಕಸಭಾ ಚುನಾವಣೆಯಲ್ಲಿ ಸುಧಾಕರ್ ಒಂದು ಮತ ಹೆಚ್ವಿಗೆ ಪಡೆದರೂ ರಾಜೀನಾಮೆ ಕೊಡುತ್ತೇನೆ ಎಂದು ಪ್ರದೀಪ್ ಈಶ್ವರ್ ಸವಾಲು ಹಾಕಿದ್ದರು. ಸುಧಾಕರ್ ಗೆಲುವಿನ ನಂತರ ಇದೀಗ ಪ್ರದೀಪ್ ವಿರುದ್ಧ ಕಿಡಿಗೇಡಿಗಳು ಆರ್ಭಟ ಆರಂಭಿಸಿದ್ದಾರೆ.
