ಪ್ಯಾರಿಸ್ ಒಲಿಂಪಿಕ್ಸ್ 2024 ಕ್ರೀಡಾಕೂಟದ ಮಹಿಳೆಯರ 50 ಕೆಜಿ ಫ್ರೀ ಸ್ಟೈಲ್ ಕುಸ್ತಿ ವಿಭಾಗದ ಸ್ಪರ್ಧೆಯ ಫೈನಲ್ಗೆ ತನ್ನನ್ನು ಅನರ್ಹಗೊಳಿಸಿದ್ದನ್ನು ಪ್ರಶ್ನಿಸಿ ಭಾರತದ ಸ್ಟಾರ್ ಕುಸ್ತಿಪಟು ವಿನೇಶ್ ಫೋಗಾಟ್ ಸಲ್ಲಿಸಿರುವ ಮೇಲ್ಮನವಿಯ ತೀರ್ಪನ್ನು ನಿನ್ನೆ ರಾತ್ರಿ 10:30 ಕ್ಕೆ ನೀಡದೆ ಆಗಸ್ಟ್ 11ರ ಸಂಜೆ 6 ಗಂಟೆಗೆ ಕ್ರೀಡಾ ನ್ಯಾಯ ಮಂಡಳಿ ಮುಂದೂಡಿದೆ.
ಆರಂಭದಲ್ಲಿ ತೀರ್ಪಿನ ಗಡುವು ವಿಸ್ತರಣೆಗೆ ಸಂಬಂಧಿಸಿ ಗೊಂದಲ ಉಂಟಾಗಿತ್ತು. ಈ ಮೊದಲು ಗಡುವನ್ನು ಆಗಸ್ಟ್ 13 ರವರೆಗೆ ವಿಸ್ತರಿಸಲಾಗಿದೆ ಎಂದು ಹೇಳಲಾಗಿತ್ತು. ನಂತರ ಅಧಿಕೃತವಾಗಿ ಸಿಎಎಸ್ನ ತಾತ್ಕಾಲಿಕ ವಿಭಾಗವು ಆಗಸ್ಟ್ 11ರಂದು ಅಂದರೆ ಇಂದು ಸಂಜೆ 6 ಗಂಟೆಗೆ ವಿಸ್ತರಿಸಿದ್ದು, ಭಾರತದ ಸ್ಟಾರ್ ಮಹಿಳಾ ಕುಸ್ತಿ ಪಟು ವಿನೇಶ್ ಪೊಗಟ್ ಪದಕದ ಆಸೆ ಜೀವಂತವಾಗಿದೆ.
ಮಹಿಳೆಯರ 50 ಕೆಜಿ ಫ್ರೀ ಸ್ಟೈಲ್ನಲ್ಲಿ 100 ಗ್ರಾಂ ತೂಕ ಅಧಿಕವಾಗಿ ಹೊಂದಿದ್ದ ಕಾರಣ ಫೈನಲ್ ಪಂದ್ಯದಿಂದ ವಿನೇಶ್ ಅವರನ್ನು ಅನರ್ಹ ಮಾಡಲಾಗಿತ್ತು. ಹೀಗಾಗಿ ಕ್ರೀಡಾಕೂಟದ ವೇಳೆ ವಿವಾದಗಳಿಗೆ ಪರಿಹಾರ ನೀಡಲು ಸ್ಥಾಪಿಸಿರುವ ಸಿಎಎಸ್ ತಾತ್ಕಾಲಿಕ ವಿಭಾಗಕ್ಕೆ ಪೊಗಟ್ ಅವರು ಆಗಸ್ಟ್ 9ರ ಶುಕ್ರವಾರ ಮೇಲ್ಮನವಿ ಸಲ್ಲಿಸಿದ್ದರು.
ಭಾರತದ ವಿನೇಶ್ ಪೊಗಟ್ ಸಲ್ಲಿಸಿದ್ದ ಮೇಲ್ಮನವಿ ಸ್ವೀಕರಿಸಿದ್ದ ಕ್ರೀಡಾ ನ್ಯಾಯ ಮಂಡಳಿ, ಆಗಸ್ಟ್ 10ರ ರಾತ್ರಿ 9.30ಕ್ಕೆ ತೀರ್ಪು ಪ್ರಕಟಿಸುವುದಾಗಿ ಹೇಳಿತ್ತು. ಇದೀಗ ಆ ಅಂತಿಮ ತೀರ್ಪನ್ನು ಭಾನುವಾರ ಸಂಜೆ 6 ಗಂಟೆಗೆ ಮುಂದೂಡಿಕೆ ಮಾಡಲಾಗಿದೆ.
ವಿನೇಶ್ ಪೊಗಟ್ ಅವರು ಚಿನ್ನದ ಪದಕಕ್ಕಾಗಿ ಆಗಸ್ಟ್ 7ರ ರಾತ್ರಿ 11.30ರ ಸುಮಾರಿಗೆ ಫೈನಲ್ ಪಂದ್ಯದಲ್ಲಿ ಅಮೆರಿಕದ ಸಾರಾ ಹಿಲ್ಡೆಬ್ರಾಂಡ್ ಅವರನ್ನು ಎದುರಿಸಬೇಕಿತ್ತು. ಆದರೆ ಆಗಸ್ಟ್ 6ರಂದು 3 ಪಂದ್ಯಗಳಲ್ಲಿ ಸ್ಪರ್ಧಿಸಿ ಗೆದ್ದಿದ್ದ ವಿನೇಶ್, ಫೈನಲ್ಗೂ ಮುನ್ನ 2 ಕೆಜಿ ತೂಕ ಹೆಚ್ಚಾಗಿದ್ದರು. ಹಾಗಾಗಿ ತೂಕ ಇಳಿಸಲು ಹೇರ್ ಕಟ್ ಮಾಡಿದ್ದರು. ರಾತ್ರಿಯೆಲ್ಲಾ ರನ್ನಿಂಗ್ ಮಾಡಿದ್ದರು. ಸ್ಕಿಪಿಂಗ್ ಮಾಡಿದ್ದರು, ರಕ್ತವನ್ನು ಡ್ರಾ ಮಾಡಿದ್ದರು.
ಹೀಗಾಗಿ 1 ಕೆಜಿ 900 ಗ್ರಾಂ ತೂಕ ಇಳಿದರು. ಆದರೆ 100 ಗ್ರಾಂ ತೂಕ ಇಳಿಯದ ಕಾರಣ ಫೈನಲ್ ಪಂದ್ಯದಿಂದ ಅನರ್ಹ ಮಾಡಲಾಯಿತು. ಇದರ ಬೆನ್ನಲ್ಲೇ ಭಾರತದ ನಿಯೋಗ ದೂರು ದಾಖಲಿಸಿತ್ತು. ವಿನೇಶ್ ಅವರು ಈ ಹಿಂದೆ 53 ಕೆಜಿ ವಿಭಾಗದಲ್ಲಿ ಸ್ಪರ್ಧಿಸುತ್ತಿದ್ದರು. ಆದರೆ, ಪ್ಯಾರಿಸ್ ಒಲಿಂಪಿಕ್ಸ್ಗಾಗಿ ತನ್ನ ತೂಕವನ್ನು 50 ಕೆಜಿಗೆ ಇಳಿಸಿದ್ದರು. ಆದಾಗ್ಯೂ, ತನ್ನ ತೂಕ ವಿಭಾಗದ 2ನೇ ದಿನದಂದು ವಿನೇಶ್ ಅವರು ಮಿತಿಗಿಂತ ಹೆಚ್ಚು ತೂಕ ಹೊಂದಿದ್ದರು.
ವಿನೇಶ್ ಸೆಮಿಫೈನಲ್ ತಲುಪಲು ಸತತ 2 ಅಸಾಧ್ಯವಾದ ಗೆಲುವು ದಾಖಲಿಸಿದ್ದರು. 16ನೇ ಸುತ್ತಿನಲ್ಲಿ ಟೊಕಿಯೊ ಒಲಿಂಪಿಕ್ಸ್ ವಿಜೇತೆ ಜಪಾನ್ನ ಯುಯಿ ಸುಸಾಕಿಯನ್ನು ಸೋಲಿಸಿದ್ದರು. ಕ್ವಾರ್ಟರ್-ಫೈನಲ್ ಪಂದ್ಯದಲ್ಲಿ 8ನೇ ಶ್ರೇಯಾಂಕದ ಉಕ್ರೇನ್ನ ಒಕ್ಸಾನಾ ಲಿವಾಚ್ ಅವರನ್ನು ಮಣಿಸಿದ್ದರು. ಸೆಮಿಫೈನಲ್ನಲ್ಲಿ ಕೂಬಾದ ಯುಸ್ನಿಲಿಸ್ ಗುಜ್ಮಾನ್ ಅವರನ್ನು 5-0 ಅಂತರದಿಂದ ಸೋಲಿಸಿ ಫೈನಲ್ಗೆ ಅರ್ಹತೆ ಪಡೆದುಕೊಂಡಿದ್ದರು.
ಒಟ್ಟಾರೆ ಈ ಬಾರಿಯ ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ಭಾರತ ಈಗಾಗಲೇ 6 ಪದಕಗಳನ್ನು ಗೆದ್ದಿದೆ. ಆದರೆ ವಿನೇಶ್ ಪೊಗಟ್ ಅವರು ಕುಸ್ತಿ ವಿಭಾಗದ 50 ಕೆಜಿ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಪಡೆದದ್ದೇ ಆದರೆ, ಕುಸ್ತಿಗೆ ವಿದಾಯ ಹೇಳಿರುವ ತಮ್ಮ ನಿರ್ಧಾರವನ್ನು ಪಿ.ಟಿ.ಉಷಾ ಅಧ್ಯಕ್ಷತೆಯ ಭಾರತೀಯ ಒಲಿಂಪಿಕ್ಸ್ ಸಮಿತಿ ಮಧ್ಯಪ್ರವೇಶಿಸಿ ಅಥವಾ ಮನವೊಲಿಸಿ ವಾಪಸ್ ಪಡೆಯುವ ಸಾಧ್ಯತೆ ಇದೆ.