ಹೊಸಕೋಟೆ: ಡ್ರಗ್ ಪೆಡ್ಲರ್ ಒಬ್ಬಾತನನ್ನು ಬಂಧಿಸಲು ಮುಂದಾದ ಪೊಲೀಸರ ಮೇಲೆ ಆತ ತಲ್ವಾರ್ ಬೀಸಿ, ಪರಾರಿಯಾಗಲು ಯತ್ನಿಸಿದ್ದು, ಪೊಲೀಸರು ಗುಂಡು ಹಾರಿಸಿ ಅರೆಸ್ಟ್ ಮಾಡಿರುವ ಘಟನೆ ಹೊಸಕೋಟೆ ಟೋಲ್ ಬಳಿ ನಡೆದಿದೆ.
ಟೋಲ್ ಪ್ಲಾಜಾ ಬಳಿ ಮಾದಕ ವಸ್ತುಗಳ ಮಾರಾಟ ಮಾಡುತ್ತಿರುವ ಮಾಹಿತಿ ಪಡೆದ ಹೊಸಕೋಟೆ ಇನ್ಸ್ ಪೆಕ್ಟರ್ ಅಶೋಕ್ ನೇತೃತ್ವದ ತಂಡ ಅವರ ಬಂಧನಕ್ಕೆ ತೆರಳಿತ್ತು. ಆದರೆ, ಒಬ್ಬ ಡ್ರಗ್ ಪೆಡ್ಲರ್ ಸೈಯದ್ ಸುಹೇಲ್ ಎಂಬಾತ ತನ್ನ ಬಳಿಯಿದ್ದ ಮಾರಕಾಸ್ತ್ರದಿಂದ ಪೊಲೀಸರ ಮೇಲೆ ಹಲ್ಲೆಗೆ ಮುಂದಾಗಿದ್ದ. ಈ ವೇಳೆ ಇನ್ಸ್ ಪೆಕ್ಟರ್ ಆತ್ಮರಕ್ಷಣೆಗಾಗಿ ಗುಂಡು ಹಾರಿಸಿದ್ದಾರೆ.
ಆರೋಪಿ ಕಾಲಿಗೆ ಗುಂಡು ಹಾರಿಸಿ ನಂತರ ಅವನನ್ನು ವಶಕ್ಕೆ ಪಡೆದಿದ್ದು, ಆತನಿಗೆ ಹೊಸಕೋಟೆ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ, ನಂತರ ಎಂ.ವಿ.ಜೆ ಆಸ್ಪತ್ರೆಗೆ ಸೇರಿಸಲಾಗಿದೆ. ಈತ ಈ ಹಿಂದೆಯೂ ಯಲಹಂಕದಲ್ಲಿ ಪೋಲಿಸರ ಮೇಲೆ ಹಲ್ಲೆ ನಡೆಸಿ ಪರಾರಿಯಾಗಿದ್ದ ಪ್ರಕರಣವಿದೆ.
ಪ್ರಕರಣದ ಕುರಿತು ಬೆಂಗಳೂರು ಗ್ರಾಮಾಂತರ ಎಸ್.ಪಿ ನಾಗರಾಜ್ ಮಾಹಿತಿ ನೀಡಿದ್ದು, ಈತ ಡ್ರಗ್ಸ್ ದಂಧೆ ನಡೆಸುವ ಜತೆಗೆ ಪೊಲೀಸರು ಬಂಧಿಸಲು ಹೋದಾಗಲೆಲ್ಲ ಅವರ ಮೇಲೆ ಹಲ್ಲೆ ನಡೆಸಿ ಪರಾರಿಯಾಗುವ ಚಾಳಿ ಬೆಳೆಸಿಕೊಂಡಿದ್ದ. ಈತ ಹೊರರಾಜ್ಯಗಳಿಂದ ಗಾಂಜಾ ತರಿಸಿ ಟೋಲ್ ಬಳಿ ಮಾರಾಟ ಮಾಡುತ್ತಿದ್ದ ಆರೋಪವಿದೆ. ಆತನ ಮೇಲೆ ಹೊಸಕೋಟೆ ಠಾಣೆಯಲ್ಲಿ ರೌಡಿಶೀಟರ್ ತೆರೆಯಲಾಗಿದೆ ಎಂದು ತಿಳಿಸಿದ್ದಾರೆ.