ಡ್ರಗ್ಸ್ ಸರಬರಾಜು: ಮಂಗಳೂರು ಪೊಲೀಸರಿಂದ ಬೆಂಗಳೂರಿನಲ್ಲಿ ವಿದೇಶಿ ಪ್ರಜೆ ಅರೆಸ್ಟ್ !

Share It

ಮಂಗಳೂರು (ದಕ್ಷಿಣ ಕನ್ನಡ) : ಮಾದಕ ವಸ್ತು ಜಾಲದ ವಿರುದ್ಧ ಸಮರ ಮುಂದುವರೆಸಿರುವ ಮಂಗಳೂರು ಸಿಸಿಬಿ ಪೊಲೀಸರು, ಬೃಹತ್ ಪ್ರಮಾಣದ ಡ್ರಗ್ಸ್ ಪೂರೈಸುತ್ತಿದ್ದ ಅಂತಾರಾಷ್ಟ್ರೀಯ ಪೆಡ್ಲರ್ ಒಬ್ಬಳನ್ನು ಬೆಂಗಳೂರಿನಲ್ಲಿ ಸೆರೆಹಿಡಿದಿದ್ದಾರೆ.

ಉಗಾಂಡಾ ಮೂಲದ ಮಹಿಳೆಯನ್ನು ಜಿಗಣಿ ಕೈಗಾರಿಕಾ ಪ್ರದೇಶದಿಂದ ವಶಕದಕೆ ಪಡೆಯಲಾಗಿದೆ. ಆಕೆಯಿಂದ ಸುಮಾರು 4 ಕೋಟಿ ರೂಪಾಯಿ ಮೌಲ್ಯದ 4 ಕೆಜಿ ಎಂಡಿಎಂಎ (MDMA) ಮಾದಕ ದ್ರವ್ಯವನ್ನು ವಶಪಡಿಸಿಕೊಳ್ಳಲಾಗಿದೆ. ಈಕೆಯ ಬಂಧನಕ್ಕೂ ಮೊದಲು ಮಂಗಳೂರಿನಲ್ಲಿ ಆರು ಮಂದಿ ಡ್ರಗ್ ಪೆಡ್ಲರ್‌ಗಳನ್ನು ಪೊಲೀಸರು ಸೆರೆಹಿಡಿದಿದ್ದರು. ವಿಚಾರಣೆ ಸಂದರ್ಭದಲ್ಲಿ ಈ ಮಹಿಳೆಯ ಸಂಪರ್ಕ ಬಯಲಿಗೆ ಬಂದಿತ್ತು.

ಈ ಹಿಂದೆ ಮುಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮೊಹಮ್ಮದ್ ಶಿಯಾಬ್, ಮೊಹಮ್ಮದ್ ನೌಷಾದ್, ಇಮ್ರಾನ್ ಮತ್ತು ನಿಸಾರ್ ಅಹಮ್ಮದ್ ಎಂಬ ನಾಲ್ವರನ್ನು ಬಂಧಿಸಿ 524 ಗ್ರಾಂ ಎಂಡಿಎಂಎ ವಶಪಡಿಸಿಕೊಳ್ಳಲಾಗಿತ್ತು. ಸುರತ್ಕಲ್ ವ್ಯಾಪ್ತಿಯಲ್ಲಿ ಮೊಹಮ್ಮದ್ ಇಕ್ಬಾಲ್ ಮತ್ತು ಶೆಹರಾಜ್ ಶಾರೂಕ್ ಎಂಬ ಇಬ್ಬರನ್ನು 200 ಗ್ರಾಂ ಡ್ರಗ್ಸ್ ಸಹಿತ ಬಂಧಿಸಲಾಗಿತ್ತು. ಈ ಆರು ಆರೋಪಿಗಳು ನೀಡಿದ ಮಹತ್ವದ ಸುಳಿವು ಅಂತಾರಾಷ್ಟ್ರೀಯ ಡ್ರಗ್ ಜಾಲದ ಕಿಂಗ್‌ಪಿನ್ ಪತ್ತೆ ಹಚ್ಚಲು ಪೊಲೀಸರಿಗೆ ನೆರವಾಯಿತು.

ಹೊಸ ವರ್ಷದ ಸಂಭ್ರಮಾಚರಣೆಯಲ್ಲಿ ಸುರಕ್ಷಿತ ಮತ್ತು ಮಾದಕವಸ್ತು ರಹಿತ ವಾತಾವರಣ ಕಾಪಾಡಲು ಮಂಗಳೂರು ನಗರ ಪೊಲೀಸರು ಕಾರ್ಯಾಚರಣೆ ನಡೆಸಿದ್ದರು. ಕಾರ್ಯಾಚರಣೆಯಲ್ಲಿ ಸುಮಾರು 1,000 ಶಂಕಿತ ವ್ಯಕ್ತಿಗಳನ್ನು ತಪಾಸಣೆಗೆ ಒಳಪಡಿಸಲಾಗಿದ್ದು, ಅವರಲ್ಲಿ 52 ಮಂದಿ ಡ್ರಗ್ಸ್ ಸೇವನೆ ಮಾಡಿರುವುದು ಖಚಿತವಾಗಿದೆ.


Share It

You May Have Missed

You cannot copy content of this page