ಮಧ್ಯಾಹ್ನದ ನಂತರ ಸ್ಟಾಕ್ ಇಟ್ಟುಕೊಳ್ಳಲು ಮುಗಿಬಿದ್ದ ಮದ್ಯಪ್ರಿಯರು
ಬೆಂಗಳೂರು: ವಿಧಾನ ಪರಿಷತ್ ಚುನಾವಣೆ ಹಾಗೂ ಲೋಕಸಭಾ ಚುನಾವಣೆಯ ಮತ ಎಣಿಕೆ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಐದು ದಿನಗಳ ಕಾಲ ಮದ್ಯ ಮಾರಾಟ ನಿಷೇಧ ಮಾಡಲಾಗಿದೆ.
ಜೂನ್ 3 ರಂದು ಎಂಎಲ್‌ಸಿ ಚುನಾವಣೆ ನಡೆಯಲಿದೆ. ಹಾಗೆಯೇ ಜೂನ್ 4 ರಂದು ಲೋಕಸಭಾ ಚುನಾವಣಾ ಮತ ಎಣಿಕೆ ಇರುವ ಹಿನ್ನೆಲೆಯಲ್ಲಿ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಇಂದಿನಿಂದ 5 ದಿನಗಳ ಕಾಲ ಮದ್ಯ ಮಾರಾಟಕ್ಕೆ ನಿಷೇಧವಿರಲಿದೆ. ಇಂದು ಸಂಜೆ 4 ಗಂಟೆಯಿಂದಲೇ ಮದ್ಯದಂಗಡಿ, ಬಾರ್‌ಗಳು ಬಂದ್ ಆಗಿವೆ.
ಜೂನ್ 3 ರಂದು ಶಿಕ್ಷಕರು ಹಾಗೂ ಪದವೀಧರ ಕ್ಷೇತ್ರಗಳ ವಿಧಾನಪರಿಷತ್ ಚುನಾವಣೆ ನಡೆಯುತ್ತಿರುವುದರಿಂದ ಆಯಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ 24 ಗಂಟೆಗಳಿಗೂ ಮುನ್ನ ಮದ್ಯ ಮಾರಾಟ ನಿಷೇಧಿಸಲಾಗಿದೆ. ಜೂನ್ 4 ರಂದು ಲೋಕಸಭಾ ಚುನಾವಣೆಯ ಮತ ಎಣಿಕೆ ಕಾರ್ಯ ಇರುವುದರಿಂದ ಜೂನ್ 3 ರ ಮಧ್ಯರಾತ್ರಿಯಿಂದ 4 ರ ಮಧ್ಯರಾತ್ರಿಯವರೆಗೂ ನಿಷೇಧವಿರಲಿದೆ.
ಇನ್ನು ಜೂನ್ 6 ರಂದು ಶಿಕ್ಷಕರು ಹಾಗೂ ಪದವೀಧರ ಕ್ಷೇತ್ರಗಳ ಚುನಾವಣೆ ಮತ ಎಣಿಕೆ ಕಾರ್ಯ ಇರುವುದರಿಂದ ಪುನಃ ನಿಷೇಧ ಮುಂದುವರೆಯಲಿದೆ. ಈ ನಡುವೆ ಜೂನ್ 5ರಂದು ಸಾಮಾನ್ಯವಾಗಿ ಮದ್ಯ ಮಾರಾಟವಿರಲಿದೆ.
ಐದು ದಿನಗಳ ಕಾಲ ಮದ್ಯ ಮಾರಾಟ ನಿಷೇಧವನ್ನು ಪ್ರಶ್ನಿಸಿ, ಹೈಕೋರ್ಟ್ನಲ್ಲಿ ಅರ್ಜಿ ಕೂಡ ಸಲ್ಲಿಕೆ ಮಾಡಲಾಗಿತ್ತು. ಹೈಕೋರ್ಟ್ ಸರಕಾರದ ಆದೇಶವನ್ನು ಎತ್ತಿಹಿಡಿದು, ಮದ್ಯ ಮಾರಾಟ ನಿಷೇಧ ಸರಿಯಾದ ಕ್ರಮೆನ್ನುವ ಮೂಲಕ ಅರ್ಜಿಯನ್ನು ವಜಾಗೊಳಿಸಿದೆ. ಆ ಮೂಲಕ ಕುಡುಕರಿಗೆ ನಿರಾಸೆ ಮಾಡಿದೆ.
ಮಧ್ಯಾಹ್ನದ ನಂತರ ಮದ್ಯ ಪ್ರಿಯರ ಕ್ಯೂ !: ಸಂಜೆ 4 ಗಂಟೆಯಿಂದಲೇ ಮದ್ಯ ಮಾರಾಟ ಬಂದ್ ಎಂಬುದನ್ನು ಅರಿತ ಮದ್ಯಪ್ರಿಯರು ಮಧ್ಯಾಹ್ನ ಎರಡು ಗಂಟೆಯಿಂದಲೇ ತಮ್ಮ ಐದು ದಿನಗಳ ಕೋಟಾವನ್ನು ಸ್ಟಾಕ್ ಇಟ್ಟುಕೊಳ್ಳಲು ಪ್ರಯತ್ನ ಪಟ್ಟರು. ಬಹುತೇಕರು ಮದ್ಯದಂಡಿಗಳ ಮುಂದೆ ಕ್ಯೂ ನಿಂತು, ಬ್ಯಾಗ್ ಗಳಲ್ಲಿ ತಮಗೆ ಬೇಕಾದ ಮದ್ಯವನ್ನು ಖರೀದಿಸಿ, ಸಂಗ್ರಹಿಸುವ ಪ್ರಯತ್ನ ನಡೆಸಿದರು. ಹೀಗಾಗಿ, ನಗರದ ಬಹುತೇಕ ಬಾರ್‌ಗಳ ಮುಂದೆ ಮಧ್ಯಾಹ್ನದ ನಂತರ ಕ್ಯೂ ಇರುವುದು ಕಂಡುಬಂತು.

