ಬೆಂಗಳೂರು:ವಿಧಾನಸಭೆಯಿಂದ ವಿಧಾನ ಪರಿಷತ್‌ಗೆ ಆಯ್ಕೆ ಬಯಸಿರುವ ಸದಸ್ಯರ ಪೈಕಿ ಬಿಜೆಪಿಯಿಂದ ಎಸ್‌ಸಿ ಕೋಟದಲ್ಲಿ ಡಿ.ಎಸ್.ವೀರಯ್ಯ ಅವರನ್ನು ಆಯ್ಕೆ ಮಾಡಲು ಹೈಕಮಾಂಡ್ ತೀರ್ಮಾನಿಸಿದೆ ಎಂದು ಹೇಳಲಾಗಿದೆ.
ಡಿ.ಎಸ್.ವೀರಯ್ಯ ಅವರು ದಲಿತ ಬಲಗೈ ಸಮುದಾಯವನ್ನು ಪ್ರತಿನಿಧಿಸುತ್ತಿದ್ದು, ಕೋಲಾರ ಲೋಕಸಭಾ ಚುನಾವಣೆಯಲ್ಲಿ ಎರಡು ಬಾರಿ ಕಡಿಮೆ ಅಂತರದಿಂದ ಸೋಲು ಕಂಡು, ಪಕ್ಷ ಸಂಘಟನೆ ಮಾಡಿದ್ದರು. 2019 ರ ಚುನಾವಣೆಯಲ್ಲಿ ಅವರಿಗೆ ಟಿಕೆಟ್ ತಪ್ಪಿಸಿ, ಮುನಿಸ್ವಾಮಿ ಅವರಿಗೆ ಟಿಕೆಟ್ ಕೊಡಲಾಗಿತ್ತು.
2024 ರ ಲೋಕಸಭೆ ಚುನಾವಣೆಗೆ ಮತ್ತೇ ಟಿಕೆಟ್ ಆಕಾಂಕ್ಷಿಯಾಗಿದ್ದ ವೀರಯ್ಯ ಅವರು, ಕೋಲಾರವನ್ನು ಮೈತ್ರಿ ಕಾರಣಕ್ಕೆ ಜೆಡಿಎಸ್‌ಗೆ ಬಿಟ್ಟುಕೊಟ್ಟಿದ್ದರಿಂದ ಸುಮ್ಮನಾಗಿದ್ದರು. ಆಗ ಬಿಜೆಪಿ ವರಿಷ್ಠರು ಡಿ.ಎಸ್.ವೀರಯ್ಯ ಅವರಿಗೆ ಮುಂದಿನ ವಿಧಾನ ಪರಿಷತ್‌ನಲ್ಲಿ ಅವಕಾಶ ಮಾಡಿಕೊಡುವ ಭರವಸೆ ನೀಡಿದ್ದರು.
ಇದೀಗ ಬಿಜೆಪಿಗೆ ವಿಧಾನ ಪರಿಷತ್‌ಗೆ ಮೂರು ಸ್ಥಾನಗಳನ್ನು ಆಯ್ಕೆ ಮಾಡುವ ಅವಕಾಶವಿದ್ದು, ಸಿ.ಟಿ.ರವಿ, ಗೀತಾ ವಿವೇಕಾನಂದ ಹಾಗೂ ಮತ್ತೊಂದು ಸ್ಥಾನಕ್ಕೆ ಡಿ.ಎಸ್. ವೀರಯ್ಯ ಅವರನ್ನು ಆಯ್ಕೆ ಮಾಡಲು ಚರ್ಚೆ ನಡೆಯುತ್ತಿದೆ.